ಈ ಸಂದರ್ಭ ಮಾತನಾಡಿದ ಅವರು, ‘ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ತಾಲ್ಲೂಕಿನ ಕಸಬಾ ಮತ್ತು ಹುಲ್ಲಹಳ್ಳಿ ಹೋಬಳಿಗಳಲ್ಲಿ ಸುಮಾರು 34 ಮನೆಗಳು ನೆಲ ಸಮಗೊಂಡಿವೆ. ಬಿದ್ದು ಹೋದ ಮನೆಗಳಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದೇನೆ. ಪ್ರಾಕೃತಿಕ ವಿಕೋಪ ನಿಯಮಾವಳಿ ಅನುಸಾರ ಪೂರ್ಣವಾಗಿ ಬಿದ್ದು ಹೋದ ಮನೆಗಳಿಗೆ ₹1.20 ಲಕ್ಷ ಪರಿಹಾರ ನೀಡಲಾಗುವುದು. ಶೇ 22ಕ್ಕಿಂತ ಕಡಿಮೆ ಹಾನಿಯಾದಲ್ಲಿ ₹6.5 ಸಾವಿರ, ಶೇ 22 ರಿಂದ 50 ಪ್ರತಿಶತ ಹಾನಿಯಾಗಿದ್ದಲ್ಲಿ ₹30 ಸಾವಿರ, ಶೇ 50ರಿಂದ 75 ರಷ್ಟು ಹಾನಿಯಾದಲ್ಲಿ ₹50 ಸಾವಿರ ಪರಿಹಾರ ನಿಗದಿಪಡಿಸಲಾಗಿದೆ. ಈಗಾಗಲೇ ಅಧಿಕಾರಿಗಳು ಮನೆ ಹಾನಿಯಾದ ಪ್ರದೇಶಗಳಿಗೆ ತೆರಳಿ ನಷ್ಟದ ಅಂದಾಜು ನಡೆಸುವಂತೆ ಸೂಚನೆ ನೀಡಲಾಗಿದೆ. ಶೀಘ್ರದಲ್ಲಿ ಫಲಾನುಭವಿಗಳಿಗೆ ಪರಿಹಾರ ದೊರಕುವಂತೆ ಸೂಕ್ತ ಕ್ರಮ ವಹಿಸಲಾಗುವುದು’ ಎಂದು ಹೇಳಿದರು.