ಮೈಸೂರು: ಬಿಹಾರದ ಗಾಲ್ಫರ್ ಅಮನ್ ರಾಜ್ ಗುರುವಾರ ಇಲ್ಲಿ ಆರಂಭಗೊಂಡ ‘ಮೈಸೂರು ಓಪನ್–2024’ ಗಾಲ್ಫ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಮುನ್ನಡೆ ಸಾಧಿಸಿದ್ದು, ಮೈಸೂರಿನ ಹವ್ಯಾಸಿ ಗಾಲ್ಫರ್ ವೀರ್ ಗಣಪತಿ ಅಚ್ಚರಿಯ ಪ್ರದರ್ಶನದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಪ್ರೊಫೆಷನಲ್ ಗಾಲ್ಫ್ ಟೂರ್ ಆಫ್ ಇಂಡಿಯಾ (ಪಿಜಿಟಿಐ) ಹಾಗೂ ಜಯಚಾಮರಾಜೇಂದ್ರ ಒಡೆಯರ್ ಗಾಲ್ಫ್ ಕ್ಲಬ್ (ಜೆಡಬ್ಲ್ಯುಜಿಸಿ) ಸಹಯೋಗದಲ್ಲಿ ನಡೆದಿರುವ ಟೂರ್ನಿಯ ಮೊದಲ ಸುತ್ತಿನ ಅಂತ್ಯಕ್ಕೆ ಅಮನ್ –8 ಅಂಕಗಳೊಂದಿಗೆ ಮುನ್ನಡೆ ಕಾಯ್ದುಕೊಂಡರು. ವೀರ್ –7 ಅಂಕಗಳೊಂದಿಗೆ ಅರ್ಜುನ್ ಶರ್ಮ ಹಾಗೂ ಅಂಗದ್ ಚೀಮ ಅವರೊಂದಿಗೆ ಜಂಟಿ ಎರಡನೇ ಸ್ಥಾನ ಪಡೆದರು.
ಮೈಸೂರಿನವರೇ ಆದ 6ನೇ ಶ್ರೇಯಾಂಕದ ಎಂ.ಎಸ್. ಯಶಸ್ ಚಂದ್ರ ಹಾಗೂ ಐ.ಎಲ್. ಆಲಾಪ್ –6 ಅಂಕಗಳೊಂದಿಗೆ ಇತರೆ ಐವರು ಗಾಲ್ಫರ್‌ಗಳೊಂದಿಗೆ ಜಂಟಿ ಐದನೇ ಸ್ಥಾನದಲ್ಲಿ ಇದ್ದಾರೆ.
ಟೂರ್ನಿಯಲ್ಲಿ ಒಟ್ಟು 126 ಆಟಗಾರರು ಪಾಲ್ಗೊಂಡಿದ್ದು, ಶನಿವಾರ ಮುಖ್ಯ ಸುತ್ತಿನ ಪಂದ್ಯಗಳು ಆರಂಭ ಆಗಲಿವೆ. ವಿಜೇತರು ಒಟ್ಟು ₹1 ಕೋಟಿ ಮೊತ್ತದ ಬಹುಮಾನ ಪಡೆಯಲಿದ್ದಾರೆ.
‘ಮೈಸೂರು ಓಪನ್–2024’ ಗಾಲ್ಫ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡ ಮೈಸೂರಿನ ಎಂ.ಎಸ್. ಯಶಸ್ ಚಂದ್ರ ಆಟದ ಭಂಗಿ– ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.