ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಷ ದಸರೆಗೆ ಪ್ರತಿಯಾಗಿ ಚಾಮುಂಡಿ ಚಲೋ: ಪ್ರತಾಪ ಸಿಂಹ

Published : 23 ಸೆಪ್ಟೆಂಬರ್ 2024, 14:08 IST
Last Updated : 23 ಸೆಪ್ಟೆಂಬರ್ 2024, 14:08 IST
ಫಾಲೋ ಮಾಡಿ
Comments

ಮೈಸೂರು: ‘ಕೆಲವು ಸಂಘಟನೆಗಳವರು ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಮಾಡಿದರೆ, ಚಾಮುಂಡಿ ಭಕ್ತರಾದ ನಾವೂ ಅಂದೇ ಚಾಮುಂಡಿ ಚಲೋ ನಡೆಸುತ್ತೇವೆ. ಆಗ, ಯಾರ ಕೈ ಮೇಲಾಗುತ್ತದೆಯೋ ನೋಡೋಣ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಸವಾಲು ಹಾಕಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ತಾಯಿ ಚಾಮುಂಡಿಗೆ ಅವಮಾನ ಮಾಡುವ ಮಹಿಷ ದಸರೆಗೆ ಹಿಂದೂಗಳು ಬಿಡಬಾರದು; ಒಟ್ಟಾಗಿ ವಿರೋಧಿಸಬೇಕು. ನಾವೆಲ್ಲಾ ಸೇರಿ ಹೋರಾಡದಿದ್ದರೆ, ಚಾಮುಂಡಿ ಬಳಿಗೆ ಹೋಗಿ ಬೇಡುವ ಅರ್ಹತೆ ಕಳೆದುಕೊಳ್ಳುತ್ತೇವೆ’ ಎಂದರು.

‘ಮಹಿಷನ ಮೇಲೆ ನಂಬಿಕೆ ಇರುವವರು ಮನೆಯಲ್ಲೆ ಪೂಜೆ ಮಾಡಿಕೊಳ್ಳಲಿ. ಮಹಿಷ ದಸರಾ ಹೆಸರಿನಲ್ಲಿ ಒಡಕು ಮೂಡಿಸುವುದು ಬೇಡ. ಮುಸ್ಲಿಮರು ಮಹಿಷನನ್ನು ನಂಬುವುದಿಲ್ಲ. ಮುಂದೊಂದು ದಿನ, ಮಹಿಷನ ಮೆರವಣಿಗೆ ಮೇಲೂ ಅವರು ಕಲ್ಲು ಎಸೆಯುತ್ತಾರೆ. ಮಹಿಷಾ ದಸರೆಗೆ ಚಾಮುಂಡಿ ಬೆಟ್ಟ ಸರಿಯಾದ ಜಾಗವಲ್ಲ. ದಸರೆ ವೇಳೆ ಅಪಸ್ವರಕ್ಕೆ ಅವಕಾಶ ಕೊಡಬಾರದು’ ಎಂದು ಹೇಳಿದರು.

‘ರಾಜ್ಯದ ವಿವಿಧೆಡೆ ಗಣೇಶೋತ್ಸವದಲ್ಲಿ ನಡೆದ ಗಲಾಟೆ ಸಂದರ್ಭದಲ್ಲಿ ಹಿಂದೂಗಳ ಹತ್ಯೆ ಮಾಡುವ ಸಂಚಿತ್ತು ಎಂದು ಪೊಲೀಸರೆ ಹೇಳಿದ್ದಾರೆ. ರಾಜ್ಯ ಸರ್ಕಾರದ ಕುಮ್ಮಕಿನಿಂದ ಮುಸ್ಲಿಮರು ನಡೆಸುತ್ತಿರುವ ವ್ಯವಸ್ಥಿತ ದಾಳಿ ಇದು. ಗಲಭೆ ಹೆಸರಿನಲ್ಲಿ ಕರ್ನಾಟಕದಲ್ಲಿ ಗಣೇಶೋತ್ಸವವನ್ನು ಮುಗಿಸಲು ವ್ಯವಸ್ಥಿತ ಯೋಜನೆ ಸಿದ್ಧವಾಗುತ್ತಿದೆ’ ಎಂದು ದೂರಿದರು.

‘ಮುಸ್ಲಿಮರೆ ಹಿಂದೂಗಳಿಗೆ ಆಕ್ರಮಣ ಬರುವುದಿಲ್ಲ ಎಂದುಕೊಳ್ಳಬೇಡಿ. ನಮ್ಮ ಕೈಗೆ ಕಲ್ಲು ಬಂದರೆ ನಿಮಗೆ ಉಳಿಗಾಲ ಇರುವುದಿಲ್ಲ. ಎಚ್ಚರಿಕೆಯಿಂದ ಹದ್ದುಬಸ್ತಿನಲ್ಲಿರಿ’ ಎಂದರು.

‘ಮುಂದಿನ ವರ್ಷ ಗಣೇಶೋತ್ಸವ ನಡೆಸಬಾರದು ಎಂದು ಮುಸ್ಲಿಮರು ಸಿಕ್ಕ ಸಿಕ್ಕ ಕಡೆ ಗಲಾಟೆ ಮಾಡುತ್ತಿದ್ದಾರೆ. ಒಂದು ಆಂಧ್ರ ಒಬ್ಬ ಕ್ರೈಸ್ತನ ಕೈಗೆ ಸಿಕ್ಕಿದ್ದಕ್ಕೆ ಲಡ್ಡು ಪ್ರಸಾದದಲ್ಲಿ ಹಂದಿ–ದನದ ಕೊಬ್ಬು ಹಾಕಿದ್ದಾರೆ. ಅವರ ಮನಸ್ಥಿತಿ ಲೆಕ್ಕ ಹಾಕಿ. ಇಂಥದ್ದು ಕರ್ನಾಟಕದಲ್ಲೂ ಶುರುವಾಗುವ ಕಾಲ ದೂರವಿಲ್ಲ’ ಎಂದು ದೂರಿದರು.

‘ಹಿಂದೂಗಳು ಶಾಂತಿಪ್ರಿಯರು ಎಂಬ ಪಟ್ಟ ಸಾಕು. ಧರ್ಮ ರಕ್ಷಣೆಗೆ ಎಲ್ಲಾ ಹಿಂದೂಗಳು ಒಗ್ಗೂಡಬೇಕು. ಒಕ್ಕಲಿಗ, ಲಿಂಗಾಯತ, ಕುರುಬ ಎಂಬ ಜಾತಿ ಮನಃಸ್ಥಿತಿ ಬಿಟ್ಟು ಒಂದಾಗಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT