ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗಸುಗೂರು: ತಾಂಡಾಗಳಿಗೆ ಕಲುಷಿತ ನೀರು ಪೂರೈಕೆ, ನಿರ್ವಹಣೆ ನಿರ್ಲಕ್ಷ್ಯ

ಕಿತ್ತುಹೋದ ಮೇಲ್ಮಟ್ಟದ ಜಲಸಂಗ್ರಹಗಾರದ ಸೂರು
ಬಿ.ಎ. ನಂದಿಕೋಲಮಠ
Published : 28 ಸೆಪ್ಟೆಂಬರ್ 2024, 6:02 IST
Last Updated : 28 ಸೆಪ್ಟೆಂಬರ್ 2024, 6:02 IST
ಫಾಲೋ ಮಾಡಿ
Comments

ಲಿಂಗಸುಗೂರು: ‘ಕೆಲ ವರ್ಷಗಳಿಂದ ಕಲುಷಿತ ನೀರು ಪೂರೈಕೆ ಮಾಡಲಾಗುತ್ತಿದೆ’ ಎಂದು ತಾಲ್ಲೂಕಿನ ಗೊರೆಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರೆಬಾಳ ತಾಂಡಾ-1 ಮತ್ತು 2ರ ನಿವಾಸಿಗಳು ಆರೋಪಿಸಿದ್ದಾರೆ.

‘15 ವರ್ಷಗಳ ಹಿಂದೆ ತಾಂಡಾಗಳಿಗೆ ಶುದ್ಧ ಮತ್ತು ಸಮರ್ಪಕ ಕುಡಿಯುವ ನೀರು ಪೂರೈಸಲು ಮೇಲ್ಮಟ್ಟದ ಜಲಸಂಗ್ರಹಗಾರ ನಿರ್ಮಿಸಲಾಗಿದೆ. ನಾಲ್ಕು ವರ್ಷಗಳಿಂದ ನಿರ್ವಹಣೆ ನಿರ್ಲಕ್ಷ್ಯದಿಂದ ಕಲುಷಿತ ನೀರು ಪೂರೈಕೆ ಆಗುತ್ತಿರುವ ಕುರಿತು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪರ್ಯಾಯ ವ್ಯವಸ್ಥೆಗೆ ಮುಂದಾಗಿಲ್ಲ’ ಎಂಬ ದೂರುಗಳು ಕೇಳಿ ಬಂದಿವೆ.

ಗೊರೆಬಾಳ ತಾಂಡಾ–1 ಮತ್ತು 2 ಸೇರಿ ಒಟ್ಟು 280 ಮನೆಗಳಿದ್ದು, 1,200 ಜನಸಂಖ್ಯೆ ಹೊಂದಿವೆ. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಳದಿಂದ ಕೇವಲ 2 ಕಿ.ಮೀ ಅಂತರದಲ್ಲಿರುವ ತಾಂಡಾಗಳ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಆಡಳಿತ ವಿಫಲವಾಗಿದೆ. ಜಲ ಸಂಗ್ರಹಗಾರದ ಸೂರು ಅಲ್ಲಲ್ಲಿ ಕುಸಿದಿದೆ. ಕಬ್ಬಿಣದ ಸರಳುಗಳು ಕಾಣುತ್ತಿವೆ. ಟ್ಯಾಂಕ್‌ ಒಳಗೆ ಪಾಚಿಗಟ್ಟಿದ್ದು, ನೀರು ಕಲುಷಿತಗೊಂಡಿದೆ.

‘ಕಂದಾಯ ಗ್ರಾಮಗಳು ಅಲ್ಲವಾಗಿದ್ದರಿಂದ ತಮ್ಮ ತಾಂಡಾಗಳಿಗೆ ಸರ್ಕಾರದ ಯಾವ ಸೌಲಭ್ಯಗಳೂ ಸಿಗುತ್ತಿಲ್ಲ. ಗೊರೆಬಾಳ ಜನಸಂಖ್ಯೆ, ಜಾತಿ ಲೆಕ್ಕಾಚಾರ ಮಿಕ್ಕಿದ ಮೇಲೆ ತಾಂಡಾಗಳಿಗೆ ಸೌಲಭ್ಯ ನೀಡುವ ಭರವಸೆ ನೀಡುತ್ತಿದ್ದಾರೆ. ಶುದ್ಧ ಮತ್ತು ಸಮರ್ಪಕ ಕುಡಿಯುವ ನೀರು, ಚರಂಡಿಗಳ ನಿರ್ಮಾಣ, ಸಮರ್ಪಕ ವಿದ್ಯುತ್‍ ಪೂರೈಕೆ ಸೇರಿ ಅಗತ್ಯ ಸೌಲಭ್ಯ ಸಮರ್ಪಕವಾಗಿ ನೀಡುತ್ತಿಲ್ಲ’ ಎಂಬುದು ತಾರಾಬಾಯಿ ಅವರ ಅಳಲು.

‘ತಾಂಡಾಗಳಿಗೆ ಕುಡಿಯುವ ನೀರು ಪೂರೈಸುವ ನೀರು ಸಂಗ್ರಹ ತೊಟ್ಟಿ ಭಾಗಶಃ ಶಿಥಿಲಗೊಂಡಿದೆ. ಅಲ್ಲಲ್ಲಿ ಸಿಮೆಂಟ್‍ ಕಳಚಿ ಕಬ್ಬಿಣದ ಸರಳು ತುಕ್ಕು ಹಿಡಿದಿವೆ. ಗಾಳಿಯಲ್ಲಿನ ಮಣ್ಣು, ತಪ್ಪಲು ಇತರೆ ವಸ್ತುಗಳು ಬಿದ್ದು ಕೊಳೆತು ದುರ್ನಾತ ಬೀರುತ್ತಿವೆ. ಸ್ವಚ್ಛತೆಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಕಲುಷಿತ ನೀರು ಪೂರೈಕೆ ಮಾಡುತ್ತಿದ್ದು, ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದು ಸಮಾಜ ಸೇವಕ ಚಂದ್ರಶೇಖರ ಜಾಧವ ಆರೋಪಿಸಿದ್ದಾರೆ.

‘ವರದಿ ಪಡೆದು ಕ್ರಮ’

‘ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ 15ನೇ ಹಣಕಾಸು ಯೋಜನೆಯಡಿ ಸ್ವಚ್ಛತಾ ಕಾರ್ಯಕ್ಕೆ ಆದ್ಯತೆ ನೀಡಲು ಸೂಚಿಸಲಾಗಿದೆ. ಸಿಸ್ಟರ್ನ್‌ ಚರಂಡಿ ತಿಪ್ಪೆಗುಂಡಿ ಮೇಲ್ಮಟ್ಟದ ಜಲಸಂಗ್ರಹಗಾರಗಳ ಶುಚಿತ್ವ ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್‍ ಸೇರಿದಂತೆ ನೈರ್ಮಲ್ಯ ಕಾಪಾಡಲಾಗುತ್ತಿದೆ. ಗೊರೆಬಾಳ ತಾಂಡಾದ ಕುರಿತಂತೆ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT