ಜಿಲ್ಲೆಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್
ಬಿಸಿಲ ನಾಡು ರಾಯಚೂರು ಜಿಲ್ಲೆಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ನಿಂದ 43 ಡಿಗ್ರಿ ಸೆಲ್ಸಿಯಸ್ ವರೆಗೆ ಇದೆ. ರಾತ್ರಿ ವೇಳೆಯಲ್ಲಿ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಮುಂದುವರಿದಿದೆ. ಹಗಲಿನಲ್ಲಿ 9 ಕಿ.ಮೀ ವೇಗದಲ್ಲಿ ಆಗಾಗ ಬಿಸಿಗಾಳಿ ಬೀಸುತ್ತಿದೆ. ಗಾಳಿಯಲ್ಲಿ ದೂಳು ಆವರಿಸಿಕೊಂಡು ಜನರನ್ನು ಹೈರಾಣು ಮಾಡಿದೆ. ಕಲ್ಲು ಬಂಡೆಗಳೇ ತುಂಬಿರುವ ಊರುಗಳಲ್ಲಿ ಉರಿ ಬಿಸಿಲಿಗೆ ಕಾದ ಕಲ್ಲುಗಳು ಸಂಜೆ ನಂತರ ಶಾಖ ಹೊರ ಸೂಸುತ್ತಿವೆ. ಗುಡ್ಡಕ್ಕೆ ಹೊಂದಿಕೊಂಡಿರುವ ಹಳ್ಳಿಗಳ ಜನರ ನೆಮ್ಮದಿ ಕಸಿದುಕೊಂಡಿದೆ. ಗ್ರಾಮಸ್ಥರು ಬೇಸಿಗೆ ಎಂದು ಕಳೆದೀತು ಎನ್ನುವ ಚಿಂತೆಯಲ್ಲೇ ಇದ್ದರೆ ರಾಜಕೀಯ ಪಕ್ಷಗಳ ಮುಖಂಡರು ಚುನಾವಣೆ ಮುಗಿದರೆ ಸಾಕು ಅಂದುಕೊಳ್ಳುತ್ತಿದ್ದಾರೆ.