ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯದಶಮಿ: ನಾಡದೇವಿಯ ಭವ್ಯ ಮೆರವಣಿಗೆ

ಬನ್ನಿಮಂಟಪದವರೆಗೂ ವಾದ್ಯವೈಭವದೊಂದಿಗೆ ಕಲಾತಂಡಗಳ ಪ್ರದರ್ಶನ
Last Updated 5 ಅಕ್ಟೋಬರ್ 2022, 15:17 IST
ಅಕ್ಷರ ಗಾತ್ರ

ರಾಯಚೂರು: ಶಿಷ್ಟರ ರಕ್ಷಣೆ, ದುಷ್ಟರ ವಿನಾಶದ ಪ್ರತೀಕವಾದ ಮಹಾನವಮಿ ಹಬ್ಬದ ಕೊನೆಯ ದಿನ ವಿಜಯದಶಮಿಯನ್ನು ಜಿಲ್ಲೆಯಾದ್ಯಂತ ಬುಧವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ರಾಯಚೂರು ನಗರಸಭೆಯಿಂದ ವಿಶೇಷವಾಗಿ ನಾಡದೇವಿ ಭವ್ಯ ಮೆರವಣಿಗೆ ಆಯೋಜಿಸಲಾಗಿತ್ತು. ನಗರಸಭೆ ಕಚೇರಿಯಿಂದ ಮಧ್ಯಾಹ್ನ ಆರಂಭವಾದ ಮೆರವಣಿಗೆಯು ಮಾಣಿಕಪ್ರಭು ದೇವಸ್ಥಾನದ ಹತ್ತಿರ ಬನ್ನಿಮಂಟಪಕ್ಕೆ ಸೂರ್ಯಾಸ್ತದ ಬಳಿಕ ತಲುಪಿತು. ಮಾರ್ಗದುದ್ದಕ್ಕೂ ನಾಡದೇವಿ ಎದುರು ಕಲಾತಂಡಗಳ ಪ್ರದರ್ಶನ ಹಾಗೂ ವಾದ್ಯತಂಡಗಳ ವಾದನವು ಆಕರ್ಷಕವಾಗಿತ್ತು.

ಮೆರವಣಿಗೆ ಆರಂಭವಾಗುವ ಪೂರ್ವ ನಗರಸಭೆ ಆವರಣದಲ್ಲಿ ಸರಳ ಸಮಾರಂಭ ನಡೆಯಿತು. ದಸರಾ ಹಬ್ಬದ ನಿಮಿತ್ತ ನಗರಸಭೆ ಸದಸ್ಯರು, ಸದಸ್ಯೆಯರು ಹಾಗೂ ಪೌರಕಾರ್ಮಿಕರಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಸಾನಿಧ್ಯ ವಹಿಸಿದ್ದ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು ಮಾತನಾಡಿ, ‘ನವರಾತ್ರಿ ಸಂದರ್ಭದಲ್ಲಿ ನಾಡದೇವಿಯನ್ನು ಭಕ್ತಿಯಿಂದ ಆರಾಧಿಸುವುದಕ್ಕೆ ಇತಿಹಾಸವಿದೆ. ರಾಯಚೂರು ನಗರಸಭೆಯಿಂದ ವಿಜಯದಶಮಿ ದಿನದಂದು ಪ್ರತಿವರ್ಷವೂ ನಾಡದೇವಿಯ ಭವ್ಯ ಮೆರವಣಿಗೆ ನಡೆಸುವುದು ವಿಶೇಷ. ಈ ವರ್ಷ ಸದಸ್ಯರಿಗಾಗಿ ಕ್ರೀಡೆಗಳನ್ನು ಆಯೋಜಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಲಾಗಿದೆ‘ ಎಂದು ಹೇಳಿದರು.

ಜನಾಕರ್ಷಣೆ: ಬೆದರು ಬೊಂಬೆವೇಷ, ಕರಡಿಮಜಲು, ಡೊಳ್ಳು ಕುಣಿತ, ಹಲಗೆ ತಂಡ, ಜಾಂಜ್‌ ಪತಾಕ್‌ ವಾದ್ಯ ತಂಡಗಳ ಸಾಲು, ಅವುಗಳ ಮಧ್ಯ ಧ್ವನಿವರ್ಧಕ, ಕುಂಭ ಕಳಸ ಹೊತ್ತ ಮಹಿಳೆಯರು, ಕುದುರೆ ಸವಾರಿಗಳು, ಆಕರ್ಷಕ ಜನಪದ ನೃತ್ಯ ಮಾಡುವುದಕ್ಕೆ ಬಂದಿದ್ದ ಲಂಬಾಣಿ ಯುವತಿಯರ ತಂಡವೂ ಇತ್ತು.

ನಗರಸಭೆ ಸದಸ್ಯರೆಲ್ಲರೂ ತಲೆಗೆ ಕೇಸರಿ, ಗುಲಾಬಿ ವರ್ಣದ ಪೇಟಾ ಧರಿಸಿದ್ದರು. ಆಕರ್ಷಕವಾಗಿ ಆಯೋಜಿಸಿದ್ದ ಮೆರವಣಿಗೆಯು ಸಾರ್ವಜನಿಕರ ಗಮನ ಸೆಳೆಯಿತು. ನಗರಸಭೆ ಕಚೇರಿಯಿಂದ ಆರಂಭವಾದ ಮೆರವಣಿಗೆಯು ತೀನ್‌ ಕಂದಿಲ್‌ ವೃತ್ತ, ಎಲ್‌ವಿಡಿ ಕಾಲೇಜು ಮಾರ್ಗದಿಂದ ಬನ್ನಿ ಮಂಟಪ ತಲುಪಿತು.

ಮೆರವಣಿಗೆಗೆ ನಗರಸಭೆ ಅಧ್ಯಕ್ಷೆ ಲಲಿತಾ ಆಂಜನೇಯ ಕಡಗೋಲ, ಶಾಸಕ ಡಾ.ಶಿವರಾಜ ಪಾಟೀಲ, ಪೌರಾಯುಕ್ತ ಕೆ.ಗುರುಲಿಂಗಪ್ಪ, ಹಿರಿಯ ಸದಸ್ಯ ಜಯಣ್ಣ ಅವರು ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT