ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ: ಕಸದ ಸಮಸ್ಯೆಗೆ ಸಿಗುವುದೇ ಮುಕ್ತಿ...

Published : 28 ಆಗಸ್ಟ್ 2024, 4:01 IST
Last Updated : 28 ಆಗಸ್ಟ್ 2024, 4:01 IST
ಫಾಲೋ ಮಾಡಿ
Comments

ಚನ್ನಪಟ್ಟಣ: ನಗರದ ಕಸದ ಸಮಸ್ಯೆಗೆ ಅಂತ್ಯವಾಡಲು ಜಿಲ್ಲಾಡಳಿತ ಮುಂದಾಗಿದ್ದು, ತಾಲ್ಲೂಕಿನ ಕನ್ನಮಂಗಲ ಹಾಗೂ ಚೋಳಮಾರನಹಳ್ಳಿ ಗ್ರಾಮಗಳಲ್ಲಿ ಒಟ್ಟು 9.28 ಎಕರೆ ಜಾಗದಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲು ಭೂಮಿ ಕಾಯ್ದಿರಿಸಿ ಆದೇಶ ಹೊರಡಿಸಿದೆ.

ಕನ್ನಮಂಗಲ ಗ್ರಾಮದ ಸರ್ವೆ ನಂಬರ್ 148 ರ ಸರ್ಕಾರಿ ಗೋಮಾಳ 1.01 ಎಕರೆ ಹಾಗೂ ಚೋಳಮಾರನಹಳ್ಳಿ ಗ್ರಾಮದ ಸರ್ವೆ ನಂಬರ್ 90ರ ಸರ್ಕಾರಿ ಗೋಮಾಳ ಖರಾಬು ಕಟ್ಟೆ 8.27 ಎಕರೆ ಸೇರಿ ಒಟ್ಟು 9.28 ಎಕರೆ ಜಮೀನನನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಕರ್ನಾಟಕ ಭೂಕಂದಾಯ ಅಧಿನಿಯಮ 1964ರ ಕಲಂ71 ರ ಅಡಿಯಲ್ಲಿ ಕೆಲವು ಷರತ್ತುಗಳೊಂದಿಗೆ ಭೂಮಿ ಕಾಯ್ದಿರಿಸಿರುವುದಾಗಿ ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಕಾಯ್ದಿರಿಸಿದ ಜಮೀನಿನಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುವ ಮೊದಲು ಶಾಸನಬದ್ಧವಾಗಿ ಪಡೆಯಬೇಕಾದ ಅನುಮತಿಯನ್ನು ಸಂಬಂಧಿಸಿದ ಪ್ರಾಧಿಕಾರಿಗಳಿಂದ ಪಡೆಯಬೇಕು. ಈ ಜಮೀನನ್ನು ಯಾವುದೇ ವಿನಾಶಕಾರಿಯಾಗಿ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸಬಾರದು ಎಂಬ ಸೂಚನೆಯನ್ನು ಆದೇಶದಲ್ಲಿ ನೀಡಲಾಗಿದೆ.

ತಾಲ್ಲೂಕಿನ ವಂದಾರಗುಪ್ಪೆ, ಕನ್ನಮಂಗಲ, ಚೋಳಮಾರನಹಳ್ಳಿ ಗ್ರಾಮಗಳ ಬಳಿ ಸರ್ಕಾರಿ ಗೋಮಾಳವನ್ನು ಗುರ್ತಿಸಿ ಇದನ್ನು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಮಂಜೂರು ಮಾಡುವಂತೆ ನಗರಸಭೆಯು ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಇದರಲ್ಲಿ ವಂದಾರಗುಪ್ಪೆ ಸರ್ವೆ ನಂಬರ್ 20 ರಲ್ಲಿಯ 2.08 ಎಕರೆ ಜಮೀನನ್ನು ಬಿಟ್ಟು ಉಳಿದ ಒಟ್ಟು 9.28 ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ.

ಕೆಲವು ವರ್ಷಗಳ ಹಿಂದೆ ನಗರದಲ್ಲಿ ಉತ್ಪಾದನೆಯಾಗುವ ಕಸದ ರಾಶಿಯನ್ನು ವಿಲೇವಾರಿ ಮಾಡಲು ತಾಲ್ಲೂಕಿನ ಕಣ್ವ ಗ್ರಾಮದ ಬಳಿ ನಗರಸಭೆ ಜಾಗವೊಂದನ್ನು ಗುರ್ತಿಸಿತ್ತು. ಆದರೆ ಅಲ್ಲಿನ ನಿವಾಸಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ಅಲ್ಲಿ ಕಸ ವಿಲೇವಾರಿ ಮಾಡಲು ಸಾಧ್ಯವಾಗಲಿಲ್ಲ. ನಂತರ ಕೂಡ್ಲೂರಿನ ಬಳಿ ಜಾಗ ಪರಿಶೀಲನೆ ಮಾಡಲಾಗಿತ್ತು. ಆದರೆ ಅಲ್ಲಿಯೂ ಜಾಗ ಸೂಕ್ತವಾಗಲಿಲ್ಲ. ಆನಂತರ ಎಲೇಕೆರಿ ಬಳಿಯ ಕುಂಬಾರಗುಂಡಿ ಪ್ರದೇಶದಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿತ್ತು. ಅಲ್ಲಿಯ ನಾಗರಿಕರು ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈಗ ಜಿಲ್ಲಾಡಳಿತ ಕಾಯ್ದಿರಿಸಿರುವ ಜಾಗದಲ್ಲಿ ನಗರಸಭೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಜವಾಬ್ದಾರಿ ತೋರಬೇಕಿದೆ.

ಕಸದ ಸಮಸ್ಯೆಗೆ ಮುಕ್ತಿ:

ಹಲವು ವರ್ಷಗಳಿಂದಲೂ ಕಸದ ನಗರವಾಗಿ ಮಾರ್ಪಟ್ಟಿದ್ದ ಚನ್ನಪಟ್ಟಣ ನಗರದ ಕಸದ ಸಮಸ್ಯೆಗೆ ಮುಕ್ತಿ ನೀಡುವಲ್ಲಿ ಜಿಲ್ಲಾಡಳಿತ ದಿಟ್ಟಹೆಜ್ಜೆ ಇಟ್ಟಿದ್ದು, ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲು ಕಾಯ್ದಿರಿಸಿರುವ ಜಾಗವನ್ನು ಇಲ್ಲಿನ ನಗರಸಭೆ ವಶಕ್ಕೆ ಪಡೆದು ಮುಂದಡಿ ಇಡುವ ಅವಶ್ಯಕತೆ ಇದೆ.

ಪ್ರತಿದಿನ ನಗರದಲ್ಲಿ 30 ರಿಂದ 50 ಟನ್ ತ್ಯಾಜ್ಯ ಸಂಗ್ರಹಣೆಯಾಗುತ್ತದೆ. ಈ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ಹೆಣಗಾಡುತ್ತಿದ್ದ ನಗರಸಭೆ ಸೂಕ್ತ ಜಾಗಕ್ಕಾಗಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸುತ್ತಾ ಬಂದಿತ್ತು. 

ಕಳೆದ ಕೆಲವು ವರ್ಷಗಳಿಂದ ಬೆಂಗಳೂರು ಮೈಸೂರು ಹೆದ್ದಾರಿ ಸೇರಿದಂತೆ ನಗರದ ಯಾವುದೇ ರಸ್ತೆಗೆ ಹೋದರೂ ಕಸದ ರಾಶಿ ರಾಚುತ್ತಿತ್ತು, ಎಲ್ಲೆಂದರಲ್ಲಿ ಕಸದ ಗುಡ್ಡೆಗಳು ತುಂಬಿ ಜನತೆ ರಸ್ತೆಯಲ್ಲಿ ತಿರುಗಾಡಲು ಮುಜುಗರ ಪಡುವಂತಾಗಿದೆ. ರಸ್ತೆ ರಸ್ತೆಗಳ ಮೇಲೆ ಕಂಡುಬರುವ ಕಸದ ರಾಶಿಯಿಂದ ಸಾರ್ವಜನಿಕರಿಗೆ ಕಿರಿಕಿರಿಯ ಜೊತೆಗೆ ರೋಗಭೀತಿಯೂ ಎದುರಾಗಿದೆ. ಇನ್ನಾದ್ರೂ ನಗರಸಭೆ ಸೂಕ್ತ ಕ್ರಮ ಕೈಗೊಳ್ಳಲಿ. ನಗರದ ಕಸದ ರಾಶಿಗೆ ಮುಕ್ತಿ ಸಿಗಲಿ ಎನ್ನುತ್ತಾರೆ ಸ್ಥಳೀಯರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT