ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ನಿಲ್ದಾಣ ಉದ್ಘಾಟನೆಗೆ ಬಾಲಗ್ರಹ

ಆಟೊ, ಬೈಕ್ ನಿಲುಗಡೆ ತಾಣವಾದ ಕೋಡಂಬಹಳ್ಳಿ ‌ನಿಲ್ದಾಣ: ₹ 1 ಕೋಟಿ ವೆಚ್ಚದಡಿ ನಿರ್ಮಾಣ
Last Updated 15 ಏಪ್ರಿಲ್ 2021, 3:19 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ಕೋಡಂಬಹಳ್ಳಿಯಲ್ಲಿ ಸರ್ಕಾರದ ವತಿಯಿಂದ ನಿರ್ಮಾಣವಾಗಿರುವ ಸರ್ಕಾರಿ ಬಸ್‌ನಿಲ್ದಾಣ ಪೂರ್ಣಗೊಂಡು ಒಂದು ವರ್ಷ ಕಳೆದಿದ್ದರೂ ಸಾರ್ವಜನಿಕ ಉಪಯೋಗಕ್ಕೆ ಬಾರದೆ ಅನುಪಯುಕ್ತವಾಗಿದೆ.

ಸುಮಾರು ₹ 1 ಕೋಟಿ ವೆಚ್ಚದಲ್ಲಿ ಎರಡು ಅಂತಸ್ತಿನಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗಿರುವ ಬಸ್ ನಿಲ್ದಾಣವನ್ನು ಉದ್ಘಾಟನೆ ಮಾಡಿಲ್ಲ. ಇಲ್ಲಿಗೆ ಸರ್ಕಾರಿ ಬಸ್‌ಗಳೇ ಬರುತ್ತಿಲ್ಲ. ರಸ್ತೆಬದಿಯಲ್ಲಿ ನಿಂತು ಅಲ್ಲಿಂದಲೆ ನಿರ್ಗಮಿಸುತ್ತಿವೆ. ಇದರಿಂದಾಗಿ ಈ ನಿಲ್ದಾಣ ಆಟೊ, ಟೆಂಪೊ, ಬೈಕ್‌ಗಳ ನಿಲ್ದಾಣವಾಗಿ ಮಾರ್ಪಟ್ಟಿದೆ. ಸಂಜೆಯಾಗುತ್ತಲೆ ಯುವಕರ ಹರಟೆಯ ತಾಣವಾಗಿ ಬದಲಾಗುತ್ತದೆ.

ಚನ್ನಪಟ್ಟಣ ಹಲಗೂರು ಮುಖ್ಯರಸ್ತೆಯಲ್ಲಿರುವ ಕೋಡಂಬಹಳ್ಳಿ ಗ್ರಾಮ ಸುತ್ತಮುತ್ತಲ ಹತ್ತಾರು ಹಳ್ಳಿಗಳ ಪ್ರಮುಖ ವಾಣಿಜ್ಯ ಕೇಂದ್ರ. ಪ್ರತಿನಿತ್ಯ ನೂರಾರು ಮಂದಿ ಗ್ರಾಮಕ್ಕೆ ಆಗಮಿಸುತ್ತಾರೆ. ತಮ್ಮ ದಿನನಿತ್ಯದ ಕೆಲಸ ಕಾರ್ಯ ಮುಗಿಸಿ ಗ್ರಾಮಗಳಿಗೆ ತೆರಳುವ ವೇಳೆ ಸಾರ್ವಜನಿಕರು ಬಸ್‌ಗಾಗಿ ಕಾಯುವುದು ಅನಿವಾರ್ಯ. ಹಾಗಾಗಿ ಇಲ್ಲೊಂದು ಬಸ್‌ನಿಲ್ದಾಣದ ಅವಶ್ಯಕತೆ ಅರಿತು ನಿಲ್ದಾಣ ನಿರ್ಮಿಸಿದ್ದರೂ ಅದು ಉದ್ಘಾಟನೆ ಮಾಡದೆ ಪ್ರಯೋಜನಕ್ಕೆ ಬರುತ್ತಿಲ್ಲ.

ಕೋಡಂಬಹಳ್ಳಿ ಗ್ರಾಮಕ್ಕೆ ಹಲಗೂರಿಗೆ ತೆರಳುವ ಸರ್ಕಾರಿ ಬಸ್‌ಗಳು, ಎಲೆತೋಟದಹಳ್ಳಿ ಮಾರ್ಗವಾಗಿ ತೆರಳುವ ಸರ್ಕಾರಿ ಬಸ್‌ಗಳು, ಗುಡಿಸರಗೂರು ಗ್ರಾಮಕ್ಕೆ ತೆರಳುವ ಸರ್ಕಾರಿ ಬಸ್‌ಗಳು ಪ್ರತಿನಿತ್ಯ ಆಗಮಿಸುತ್ತವೆ. ಆದರೆ ಈ ಬಸ್‌ಗಳು ರಸ್ತೆಗೆ ಹೊಂದಿಕೊಂಡಂತಿರುವ ನಿಲ್ದಾಣದ ಒಳಕ್ಕೆ ಹೋಗುವುದೇ ಇಲ್ಲ. ರಸ್ತೆ ಬದಿಯಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಂಡು ತೆರಳುತ್ತವೆ ಎಂದು ಗ್ರಾಮದ ಮುಖಂಡ ಕಾರ್ತಿಕ್ ಹೇಳುತ್ತಾರೆ.

‘ಈ ಜಾಗದಲ್ಲಿ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿತ್ತು. ಈ ಭಾಗದಲ್ಲಿ ಕುಡಿಯುವ ನೀರಿನ ಘಟಕಗಳು ಇಲ್ಲದ ಕಾರಣ ಸುತ್ತಮುತ್ತಲ ಗ್ರಾಮಗಳ ಮಂದಿ ನೀರು ಒಯ್ಯಲು ಇಲ್ಲಿಗೆ ಬರುತ್ತಿದ್ದರು. ಇದರಿಂದ ಹಲವಾರು ಮಂದಿಗೆ ಅನುಕೂಲವಾಗಿತ್ತು. ಆದರೆ ಬಸ್‌ನಿಲ್ದಾಣ ನಿರ್ಮಾಣ ಮಾಡುವ ನೆಪದಲ್ಲಿ ಕುಡಿಯುವ ನೀರಿನ ಘಟಕವನ್ನು ಒಡೆದು ಹಾಕಲಾಯಿತು. ಹಾಗೆಯೇ ಇದರ ಪಕ್ಕದಲ್ಲಿದ್ದ ಸಾರ್ವಜನಿಕ ಶೌಚಾಲಯವನ್ನೂ ಕೆಡವಲಾಯಿತು. ಅಲ್ಲಿ ನಿರ್ಮಾಣವಾದ ಬಸ್‌ನಿಲ್ದಾಣ ಈಗ ಪ್ರಯೋಜನಕ್ಕೆ ಬರುತ್ತಿಲ್ಲ’ ಎಂದು ಗ್ರಾಮದ ಮುಖಂಡ ಕೆ.ಎಸ್.ನಾಗರಾಜು ಆರೋಪಿಸುತ್ತಾರೆ.

ಖಾಲಿ ಇರುವ ಅಂಗಡಿಗಳು: ಬಸ್‌ನಿಲ್ದಾಣದಲ್ಲಿ ಸುಮಾರು 7 ಅಂಗಡಿಗಳನ್ನು ನಿರ್ಮಾಣ ಮಾಡಲಾಗಿದ್ದು, ಅದರಲ್ಲಿ ಒಂಡೆರಡು ಅಂಗಡಿಗಳು ಮಾತ್ರ ಹರಾಜಾಗಿವೆ. ಉಳಿದವು ಖಾಲಿ ಇವೆ ಎಂದು ಗ್ರಾಮದ ಶ್ರೀಹರಿ, ಮಂಗಾಡಹಳ್ಳಿ ಪುಟ್ಟಸ್ವಾಮಿ ತಿಳಿಸುತ್ತಾರೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಾಣಿಜ್ಯ ಉದ್ದೇಶ, ಒಂದು ಹೋಟೆಲ್ ಉದ್ದೇಶ ಸೇರಿದಂತೆ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದರೂ ಸಂಬಂಧಿಸಿದ ಇಲಾಖೆ ಈ ಅಂಗಡಿಗಳ ಹರಾಜಿಗೆ ಮುಂದಾಗಿಲ್ಲ. ಕೆಲವು ಪ್ರಬಲ ವ್ಯಕ್ತಿಗಳು ಈ ಅಂಗಡಿಗಳನ್ನು ಗುಟ್ಟಾಗಿ ಹರಾಜು ಮಾಡಿಕೊಂಡಿರುವ ಸಂಶಯವಿದೆ ಎಂದು ಗ್ರಾಮದ ರಮೇಶ್, ಶ್ರೀಹರ್ಷ ಹೇಳುತ್ತಾರೆ.

ನಿಲ್ದಾಣ ಕಟ್ಟಡ ನಿರ್ಮಾಣ ಮಾಡಿದ ಮೇಲೆ ಅಂಗಡಿಗಳನ್ನು ಖಾಲಿ ಇಡುವ ಉದ್ದೇಶವಾದರೂ ಏನು, ಅಂಗಡಿಗಳನ್ನು ಹರಾಜಿನಲ್ಲಿ ಕೊಂಡುಕೊಳ್ಳಲು ಕೆಲವರು ತಯಾರಾಗಿದ್ದಾರೆ. ಆದರೆ, ಇಲಾಖೆಯು ಇವುಗಳನ್ನು ಮಾರಾಟ ಮಾಡಲು ಮುಂದೆ ಬರುತ್ತಿಲ್ಲ. ಇದರ ಹಿಂದಿರುವ ಮರ್ಮವೇನು ಎಂಬುದು ತಿಳಿಯುತ್ತಿಲ್ಲ ಎಂದು ಗ್ರಾಮದ ಚನ್ನಪ್ಪ, ಸುರೇಶ್ ಅಭಿಪ್ರಾಯಪಡುತ್ತಾರೆ.ಈ ಬಗ್ಗೆ ಸಾರಿಗೆ ಇಲಾಖೆ ವ್ಯವಸ್ಥಾಪರಿಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣವಾಗಿ ಖಾಲಿಯೇ ಉಳಿದಿರುವ ಕಟ್ಟಡ ನೋಡಿದರೆ ಬೇಸರವಾಗುತ್ತದೆ. ಪಟ್ಟಣ ಬಿಟ್ಟರೆ ಬೇರೆಲ್ಲಿಯೂ ಸರ್ಕಾರಿ ಬಸ್‌ನಿಲ್ದಾಣ ಇಲ್ಲ. ಇದು ನಮ್ಮ ಗ್ರಾಮಕ್ಕೆ ಕಳಶಪ್ರಾಯವಾಗಿದೆ. ಇಂತಹ ಕಟ್ಟಡವನ್ನು ಖಾಲಿ ಬಿಡದೆ ಸಾರಿಗೆ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಇದನ್ನು ಸಾರ್ವಜನಿಕ ಉಪಯೋಗಕ್ಕೆ ದೊರೆಯುವಂತೆ ಕ್ರಮಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT