ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸಿಟಿಂಗ್ ಕಾರ್ಡಿಗಾಗಿ ಅವಕಾಶ ಕೊಡಲಾ: ಎಚ್‌ಡಿಕೆ ಪ್ರಶ್ನೆ

Last Updated 19 ಜನವರಿ 2021, 14:08 IST
ಅಕ್ಷರ ಗಾತ್ರ

ರಾಮನಗರ: ‘ಶಾಸಕ ಜಿ.ಟಿ. ದೇವೇಗೌಡರಿಗೆ ಪಕ್ಷ ಸಂಘಟನೆ ಬಗ್ಗೆ ಆಸಕ್ತಿ ಇಲ್ಲ. ಕೇವಲ ವಿಸಿಟಿಂಗ್ ಕಾರ್ಡಿಗಾಗಿ ನಾನು ಅವಕಾಶ ಕೊಡಲಾ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ಜೆಡಿಎಸ್‌ ಕೋರ್ ಕಮಿಟಿಯಲ್ಲಿ ಜಿ.ಟಿ. ದೇವೇಗೌಡರ ಹೆಸರು ಕೈಬಿಟ್ಟಿರುವ ಕುರಿತು ಚನ್ನಪಟ್ಟಣದಲ್ಲಿ ಮಂಗಳವಾರ ಅವರು ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದರು. ‘ನನಗೆ ನನ್ನ ಕ್ಷೇತ್ರ ಮುಖ್ಯ. ಪಕ್ಷ ಸಂಘಟನೆಗೆ ಸಮಯ ಕೊಡಲು ಆಗದು ಎಂದು ಅವರೇ ಹೇಳಿದ್ದಾರೆ. ಈಗ ಅವರಿಗೆ ಕ್ಷೇತ್ರದ ಬಗ್ಗೆ ಗಮನ ಬಂದಿದೆ. ಮುಂದಿನ ಚುನಾವಣೆ ಹೊತ್ತಿಗೆ ಯಾರ್ಯಾರು ಎಲ್ಲೆಲ್ಲಿ ಇರುತ್ತಾರೋ ಗೊತ್ತಿಲ್ಲ. ಅವರು ಮಾಧ್ಯಮಗಳ ಮೂಲಕ ನನಗೆ ಸಂದೇಶ ಕೊಡುವುದು ಬೇಡ ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‘ಅವರಿಗೆ ಸಮಸ್ಯೆ ಆಗಿದ್ದರೆ ಜೆ.ಪಿ. ಭವನಕ್ಕೆ ಬಂದು ಎಚ್‌.ಡಿ. ದೇವೇಗೌಡರ ಜೊತೆ ಚರ್ಚಿಸಲಿ’ ಎಂದರು.

ಸಿಪಿವೈಗೆ ಟಾಂಗ್‌: ಲೆಟರ್‌ಹೆಡ್ ದುರ್ಬಳಕೆ ವಿಚಾರವಾಗಿ ಸಚಿವ ಸಿ.ಪಿ. ಯೋಗೇಶ್ವರ್‌ಗೆ ಟಾಂಗ್‌ ನೀಡಿದ ಕುಮಾರಸ್ವಾಮಿ ‘ಈಗ ಮಂತ್ರಿಯಾದರು. ಇನ್ನೂ ಪೊಗರ್‌ದಸ್ತಾಗಿ ಕೆಲಸ ಮಾಡಲು ಅನುಕೂಲ ಆಯಿತು’ ಎಂದರು.

‘ಮೊದಲು ಅವರ ಎಲ್ಲ ಚಟುವಟಿಕೆ ತಾಲ್ಲೂಕು ಮಟ್ಟದಲ್ಲಿ ನಡೆಯುತಿತ್ತು. ಈಗ ಹಣ ಮಾಡಲು ರಾಜ್ಯ ಮಟ್ಟದಲ್ಲಿ ಅವಕಾಶ ಕೊಟ್ಟಿದ್ದಾರೆ. ಮಂತ್ರಿಗೆ ಏನು ಕೊಂಬು ಇರುತ್ತ? ನಾನು ಬಹಳಷ್ಟು ಮಂತ್ರಿಗಳನ್ನು ನೋಡಿದ್ದೇನೆ. ಚನ್ನಪಟ್ಟಣದಲ್ಲಿ ನನ್ನನ್ನು ಯಾರೂ ಏನು ಮಾಡಲು ಸಾಧ್ಯ ಇಲ್ಲ. ಈಗಲಾದರೂ ಅವರು ಜನರ ಪರವಾಗಿ ಕೆಲಸ ಮಾಡಲಿ’ ಎಂದು ಸಲಹೆ ನೀಡಿದರು.

‘ಕುಮಾರಸ್ವಾಮಿ ನನ್ನ ಸ್ನೇಹಿತರು’ ಎಂಬ ಯೋಗೇಶ್ವರ್‌ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ‘ಯೋಗೇಶ್ವರ್‌ ಸಹ ವೈಯಕ್ತಿಕವಾಗಿ ನನ್ನ ಸ್ನೇಹಿತರು. ಯಡಿಯೂರಪ್ಪ ಸಹ ನನ್ನ ಸ್ನೇಹಿತರೇ. ಆದರೆ ಕಾರ್ಯಕರ್ತರ ಕುತ್ತಿಗೆ ಕೊಯ್ದು ಸ್ನೇಹ ಉಳಿಸಿಕೊಳ್ಳಲು ಆಗದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT