ರಾಮನಗರ: ‘ರಾಮನಗರ ಜಿಲ್ಲೆ ಮತ್ತು ಜನರಿಗೆ ನನ್ನಿಂದ ಕಿಂಚಿತ್ತೂ ಅನ್ಯಾಯವಾಗಿಲ್ಲ. ಇಂದಿಗೂ ಜಿಲ್ಲೆಯ ಜನತೆಯನ್ನು ನನ್ನ ತಂದೆ–ತಾಯಿ ಎಂದು ತಿಳಿದುಕೊಂಡಿದ್ದೇನೆ. ಜಿಲ್ಲೆಗೆ ನಾನು ಕೊಟ್ಟಿರುವ ಕೊಡುಗೆ ಏನು ಎಂಬುದನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎನ್ನುವವರು, ದೇವೇಗೌಡರ ಕುಟುಂಬ ಬರುವುದಕ್ಕೆ ಮುಂಚೆ ರಾಮನಗರ ತಾಲ್ಲೂಕು ಮತ್ತು ಜಿಲ್ಲೆ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಲಿ. ವರದಿಯೊಂದರ ಪ್ರಕಾರ, ತಲಾ ಆದಾಯದಲ್ಲಿ ರಾಮನಗರ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಇದು ಜಿಲ್ಲೆಗೆ ದೇವೇಗೌಡರ ಕುಟುಂಬ ನೀಡಿರುವ ಕೊಡುಗೆ’ ಎಂದರು.
‘ನಾನು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿದ್ದಾಗ ನೀರಿನ ಬವಣೆ ಎದುರಿಸುತ್ತಿದ್ದ ರಾಮನಗರಕ್ಕೆ ಪ್ರತ್ಯೇಕವಾಗಿ ನೀರು ಪೂರೈಕೆ ಮಾಡಲು ₹456 ಕೋಟಿ ಕೊಟ್ಟು, ಯೋಜನೆಗೆ ಚಾಲನೆ ಕೂಡ ಕೊಟ್ಟಿದ್ದೆ. ಅದಕ್ಕೆ ತಲೆದೋರಿದ ತಕರಾರು ಸರಿಪಡಿಸಲು ಎಷ್ಟು ಕಷ್ಟಪಟ್ಟಿದ್ದೇನೆ ಎಂದು ನನಗೆ ಗೊತ್ತು’ ಎಂದು ಹೇಳಿದರು.
‘ರಾಮನಗರ ಅಭಿವೃದ್ಧಿಯೇ ಆಗಿಲ್ಲ, ನೀರು ಕೊಡುತ್ತಿರುವುದು 6ನೇ ಗ್ಯಾರಂಟಿ ಎನ್ನುವ ಸ್ಥಳೀಯ ಶಾಸಕರು, ರಾತ್ರೋರಾತ್ರಿ ಜನರಿಗೆ ನಾಲ್ಕು ಸಾವಿರ ಗಿಫ್ಟ್ ಕೂಪನ್ ಹಂಚಿದ್ದೀರಲ್ಲಾ, ಮೊದಲು ಅದರ ಕಥೆ ನೋಡಿ. ಆ ಗ್ಯಾರಂಟಿಯನ್ನು ಮೊದಲು ಈಡೇರಿಸಿ’ ಎಂದು ರಾಮನಗರ ಅಭಿವೃದ್ಧಿ ಕುರಿತು ಶಾಸಕ ಎಚ್.ಎ. ಇಕ್ಬಾಲ್ ಅವರ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.
‘ನಾನು ಮಾಡಿರುವ ಕೆಲಸಗಳಿಗೆ ಇವರು ಸುಣ್ಣಬಣ್ಣ ಹೊಡೆಸಿಕೊಂಡಿದ್ದರೆ ಸಾಕು. ಹೊಸ ಕೆಲಸ ಮಾಡುವ ಅಗತ್ಯವಿಲ್ಲ. ಡಿಸೆಂಬರ್ ಹೊತ್ತಿಗೆ ರಾಮನಗರಕ್ಕೆ 25 ಎಂಎಲ್‌ಡಿ ನೀರು ತರುತ್ತಾರಂತೆ. ಎಲ್ಲಾ ಕಡೆ ಶೇ 80ರಷ್ಟು ಕೆಲಸ ಮುಗಿದಿದೆಯಂತೆ. ಮೂರು ತಿಂಗಳಲ್ಲಿ ಇವರು ಆ ಕೆಲಸ ಮಾಡಿದ್ದಾರೆಯೇ? ಹಿಂದಿನ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ತಂದ ಯೋಜನೆಗಳ ಹೆಸರು ಹೇಳಿಕೊಂಡು, ಇವರು ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಕಿಡಿಕಾರಿದರು.
‘ಸಿ.ಎಂ ಆಗಿದ್ದಾಗ ನಾನು ಹೋಟೆಲ್‌ನಲ್ಲಿ ಇದ್ದೆ ಎನ್ನುವ ಡಿ.ಕೆ. ಶಿವಕುಮಾರ್ ಅವರು, ಇಂಡಿಯಾ ಮೈತ್ರಿಕೂಟದ ಸಭೆ ಮಾಡಿದ್ದು ಎಲ್ಲಿ? ಅದೇ ಹೋಟೆಲ್‌ನಲ್ಲಿ ತಾನೇ. ನನ್ನಷ್ಟು ಜನಕ್ಕೆ ಹತ್ತಿರವಾಗಿ ಸಿಗೋನು ಈ ಭೂಮಿ ಮೇಲೆ ಯಾರಾದರೂ ಇದ್ದಾರಾ? ಇವರಿಂದ ನಾನು ಪಾಠ ಕಲಿಯಬೇಕಾ?’ ಎಂದು ಗುಡುಗಿದರು.
‘ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ರಾಮನಗರ ಕ್ಷೇತ್ರದ ಜನರನ್ನು ನಾನು ದೂಷಿಸುವುದಿಲ್ಲ. ಆಗ, ಅಪಪ್ರಚಾರದ ಜೊತೆಗೆ ನಮ್ಮವರು ಸ್ವಲ್ಪ ಎಡವಿದ್ದಾರೆ’ ಎಂದರು.
‘ಹಾಲಿ ಮತ್ತು ಮಾಜಿ ಶಾಸಕರು ತೊರೆಕಾಡನಹಳ್ಳಿಗೆ ಹೋಗಿ ಕಲರ್ ಫೋಟೋಗಳನ್ನು ತೆಗೆಸಿಕೊಂಡಿರುವುದನ್ನು ನೋಡಿದೆ. ನೆಟಕಲ್ ಯೋಜನೆ ಮೂಲಕ ರಾಮನಗರಕ್ಕೆ ನೀರು ಕೊಡುವುದು ಡಿ.ಕೆ. ಶಿವಕುಮಾರ್ ಅವರ ಕನಸಾಗಿತ್ತು ಎಂದು ಸ್ಥಳೀಯ ಶಾಸಕರು ಹೇಳಿದ್ದಾರೆ. ಯೋಜನೆಯ ಪ್ರಸ್ತಾವವನ್ನು ಶಿವಕುಮಾರ್ ಅಥವಾ ಅವರ ತಮ್ಮ ಡಿ.ಕೆ. ಸುರೇಶ್ ತಂದಿದ್ದರಾ? ₹50 ಕೋಟಿ ಇದ್ದ ತಮ್ಮ ಆಸ್ತಿಯನ್ನು ₹1,400 ಕೋಟಿ ಮಾಡಿಕೊಂಡ ಕನಸು ಕಂಡವರು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕನಸು ಕಾಣುತ್ತಾರೆಯೇ?’ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
‘2013ರಿಂದ 2018ರವರೆಗೆ ಶಿವಕುಮಾರ್ ಸಚಿವರಾಗಿದ್ದಾಗ ರಾಮನಗರಕ್ಕೆ ಯಾಕೆ ನೀರು ಕೊಡಲಿಲ್ಲ? ಆಗ ಏನು ಮಾಡುತ್ತಿದ್ದರು? ಬಂಡೆ ಒಡೆಯುತ್ತಾ ಕುಳಿತಿದ್ರಾ? ದೊಡ್ಡಾಲಹಳ್ಳಿ ಮತ್ತು ಸಾತನೂರಿನಲ್ಲಿ ಟೆಂಟ್ ನಡೆಸುತ್ತಿದ್ದವರು ಇಂದು ಅಧಿಕೃತವಾಗಿ ₹1400 ಕೋಟಿ ಆಸ್ತಿ ಮಾಡಿದ್ದಾರೆ. ಅನಧಿಕೃತವಾಗಿ ಇನ್ನೆಷ್ಟು ಮಾಡಿರಬಹುದು ಎಂಬುದನ್ನು ಜನರೇ ಊಹಿಸಿಕೊಳ್ಳಬೇಕು’ ಎಂದು ವಾಗ್ದಾಳಿ ನಡೆಸಿದರು.
‘ನಾನು ಸಿ.ಎಂ ಆಗಿದ್ದಾಗ ರಾಮನಗರಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜು ಕೊಟ್ಟೆ. ಇವರ ಹಿಂಸೆ ತಡೆಯಲಾಗದೆ, ಪ್ರತ್ಯೇಕವಾಗಿ ಕನಕಪುರಕ್ಕೆ ₹100 ಕೋಟಿ ಮೊತ್ತದ ವೈದ್ಯಕೀಯ ಕಾಲೇಜು ಕೊಡಲು ತೀರ್ಮಾನಿಸಿದೆ. ಬಿಜೆಪಿ ಸರ್ಕಾರದಲ್ಲಿ ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋದರು. ಇವರು ರಾಮನಗರದ ಕಾಲೇಜನ್ನು ಕನಕಪುರಕ್ಕೆ ಕೊಂಡೊಯ್ದರು. ಇದು ರಾಮನಗರಕ್ಕೆ ಅವರ ಬಳುವಳಿ. ಕ್ಷೇತ್ರದ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.
ಇವನ್ನೂ ಓದಿ...
ನೈಸ್ ಲೂಟಿಯಲ್ಲಿ DK ಬ್ರದರ್ಸ್ ಪಾಲು: ನಾಳೆ ದಾಖಲೆ ಬಿಡುಗಡೆ ಮಾಡ್ತೀನಿ -ಎಚ್‌ಡಿಕೆ
‘ನಮ್ಮ ನೀರು, ನಮ್ಮ ಹಕ್ಕು’ ಎಂದವರು ಯಾಕೆ ಬಿಟ್ಟರು: ಡಿಕೆಶಿ ವಿರುದ್ಧ HDK ಕಿಡಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.