ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಮ್ಮೂರ ತಿಂಡಿ | ಚನ್ನಪಟ್ಟಣ: ದೇಸಿ ರುಚಿಯ ನುಪ್ಪಿಟ್ಟು ಮಸಾಲ

ಎಚ್.ಎಂ. ರಮೇಶ್
Published : 29 ಸೆಪ್ಟೆಂಬರ್ 2024, 5:14 IST
Last Updated : 29 ಸೆಪ್ಟೆಂಬರ್ 2024, 5:14 IST
ಫಾಲೋ ಮಾಡಿ
Comments

ಚನ್ನಪಟ್ಟಣ: ನುಪ್ಪಿಟ್ಟು ಮಸಾಲ... ಏನಿದು ವಿಶೇಷ ತಿಂಡಿ? ಬಹಳ ಜನ ಕೇಳಿರಲಿಕ್ಕಿಲ್ಲ. ಆದರೆ, ತಾಲ್ಲೂಕಿನ ಕೋಡಂಬಹಳ್ಳಿ ಗ್ರಾಮದ ಮಾನ್ವಿತಾ ಚಾಟ್ಸ್ ಅಂಡ್ ಫ್ರೂಟ್ಸ್ ಸೆಂಟರ್‌ಗೆ ಬಂದರೆ ರುಚಿಮೊಗ್ಗು ಅರಳಿಸುವ ಈ ನುಪ್ಪಿಟ್ಟು ಮಸಾಲ ಸವಿದು ನೋಡಬಹುದು.

ತಾಲ್ಲೂಕಿನ ಮಂಗಾಡಹಳ್ಳಿ ಗ್ರಾಮದ ಶಿವು ಅವರದು ನುಪ್ಪಿಟ್ಟು ಮಸಾಲ ತಯಾರಿಸುವಲ್ಲಿ ಪಳಗಿದ ಕೈ. ಕಳೆದ ನಾಲ್ಕು ವರ್ಷಗಳಿಂದ ಮಾನ್ವಿತಾ ಚಾಟ್ಸ್‌ನ ಈ ವಿಶೇಷ ತಿನಿಸು ಸುತ್ತಮುತ್ತಲಿನ ಜನರನ್ನು ಸೆಳೆಯುತ್ತಿದೆ. ಸುತ್ತಮುತ್ತಲ 30ಕ್ಕೂ ಹೆಚ್ಚು ಗ್ರಾಮಗಳ ಜನರು ಈ ವಿಶೇಷ ತಿಂಡಿಯನ್ನು ಹುಡುಕಿಕೊಂಡು ಬರುವುದಿದೆ. ಯುವಕರು, ಮಕ್ಕಳು, ಹಿರಿಯರೆನ್ನದೆ ಎಲ್ಲರನ್ನೂ ಸೆಳೆಯುವ ನುಪ್ಪಿಟ್ಟು ಕೋಡಂಬಹಳ್ಳಿಯ ವಿಶೇಷ ತಿನಿಸಾಗಿ ಗಮನ ಸೆಳೆಯುತ್ತಿದೆ.

ಮಂಡ್ಯದಲ್ಲಿ ಚುರುಮುರಿ ಅಂಗಡಿ ಇಟ್ಟುಕೊಂಡಿದ್ದ ಶಿವು ಕೊರೋನ ಕಾಲದಲ್ಲಿ ಜೀವನ ನಿರ್ವಹಣೆ ಕಷ್ಟವಾದಾಗ ಏನಾದರೂ ಮಾಡಬೇಕು ಎಂದು ಹೊಸತನಕ್ಕಿಳಿದವರು. ತಮ್ಮ ಹುಟ್ಟೂರಾದ ಮಂಗಾಡಹಳ್ಳಿಗೆ ವಾಪಸ್ ಬಂದು ಕೋಡಂಬಳ್ಳಿಯಲ್ಲಿ ಚುರುಮುರಿ ಅಂಗಡಿ ಪ್ರಾರಂಭಿಸಿದರು. ಅದರೊಂದಿಗೆ ಬೇರೆ ಏನಾದರೂ ಮಾಡಬೇಕು ಎಂದು ಹಲವು ಪ್ರಯತ್ನಗಳನ್ನು ಮಾಡಿ ಕಂಡುಕೊಂಡ ತಿನಿಸು ನುಪ್ಪಿಟ್ಟು ಮಸಾಲ.

ಈರುಳ್ಳಿ, ಸೌತೆಕಾಯಿ, ಕಡ್ಲೆಬೀಜ, ಖಾರಬೂಂದಿ, ಟೊಮ್ಯಾಟೋ, ಕ್ಯಾರೇಟ್, ತೆಂಗಿನಕಾಯಿ ತುರಿ, ನಿಂಬೆಹಣ್ಣು ಹಾಕಿ ಕೊತ್ತಂಬರಿಯಿಂದ ಅಲಂಕರಿಸಿ ಇಟ್ಟರೆಂದರೆ ಎಂತವರ ಬಾಯಲ್ಲೂ ನೀರೂರುತ್ತದೆ. ಇದು ಅವರೇ ಕಂಡುಕೊಂಡ ಹೊಸ ತಿನಿಸು. ಯಾವ ಯಾವ ಪದಾರ್ಥವನ್ನು ಎಷ್ಟೆಷ್ಟು ಪ್ರಮಾಣದಲ್ಲಿ ಹಾಕಬೇಕು ಎನ್ನುವುದನ್ನೂ ಬಹಳ ಮುತುವರ್ಜಿ ವಹಿಸಿ ಕಂಡುಕೊಂಡಿದ್ದಾರೆ. ಒಂದು ಪದಾರ್ಥ ಹೆಚ್ಚೂ ಕಡಿಮೆಯಾದರೂ ರುಚಿಯಲ್ಲಿ ವ್ಯತ್ಯಾಸವಾಗುತ್ತದೆ. ಈ ತಿನಿಸಿನ ಜಾದೂ ಅಡಗಿರುವುದೇ ಈ ಎಲ್ಲ ಪದಾರ್ಥಗಳನ್ನು ಮಿಕ್ಸ್‌ ಮಾಡುವುದರಲ್ಲಿ ಎನ್ನುತ್ತಾರೆ ಶಿವು.

ಒಂದು ಪ್ಲೇಟಿಗೆ ಬರೀ ₹ 25. ಪ್ರತಿದಿನ 80 ರಿಂದ 100 ಪ್ಲೇಟ್ ನುಪ್ಪಿಟ್ಟು ಮಾರಾಟವಾಗುತ್ತವೆ. ಇದನ್ನು ತಿನ್ನಲು ಸುಮಾರು 10 ಕಿ.ಮೀ. ದೂರದಿಂದ ಜನ ಪ್ರತಿದಿನ ಬರುತ್ತಾರೆ. ಚನ್ನಪಟ್ಟಣ ಹಲಗೂರು ಮುಖ್ಯರಸ್ತೆಯಲ್ಲಿ ಸಂಚರಿಸುವ ಹಲವಾರು ಮಂದಿ ನುಪ್ಪಿಟ್ಟಿಗಾಗಿಯೇ ಇಲ್ಲಿ ನಿಲ್ಲುತ್ತಾರೆ. ಸಂಜೆಯ ವೇಳೆ ಗ್ರಾಹಕರು ಹೆಚ್ಚು. ಸೋಮವಾರವಂತೂ ಸಂಜೆ ಗ್ರಾಹಕರಿಗೆ ತಿನಿಸು ಪೂರೈಸುವುದೇ ಕಷ್ಟವಾಗುತ್ತದೆ ಎಂದು ಶಿವು ತಿಳಿಸುತ್ತಾರೆ.

ಇದರ ಜೊತೆಗೆ ಇವರು ತಯಾರು ಮಾಡುವ ಗುಲ್ಕನ್ ಫ್ರೂಟ್ ಸಲಾಡ್, ಚುರುಮುರಿಗೂ ಬಹಳ ಬೇಡಿಕೆ ಇದೆ. ಫ್ರೂಟ್ ಸಲಾಡ್‌ಗೆ ಪಪ್ಪಾಯಿ, ಅನಾನಸ್, ಕಲ್ಲಂಗಡಿ, ಸೇಬುಹಣ್ಣು, ಬಾಳೆಹಣ್ಣು, ಖರ್ಜೂರ ಸೇರಿದಂತೆ ಹಲವು ಹಣ್ಣುಗಳನ್ನು ಮಿಕ್ಸ್ ಮಾಡಿ ಅವುಗಳ ಮೇಲೆ ಗುಲ್ಕನ್ ಹಾಕಿ ಕೊಡುತ್ತಾರೆ. ಇದರ ಬೆಲೆಯೂ ₹ 25 ಮಾತ್ರ. ಪ್ರತಿದಿನ 100ಕ್ಕೂ ಹೆಚ್ಚು ಪ್ಲೇಟ್ ಮಾರಾಟವಾಗುತ್ತವೆ. ಇದಲ್ಲದೆ ಚುರುಮುರಿ 80ಕ್ಕೂ ಹೆಚ್ಚು ಪ್ಲೇಟ್ ಮಾರಾಟವಾಗುತ್ತವೆ.

ಫೋನ್‌ ಮೂಲಕ ಆರ್ಡರ್‌ ಮಾಡಿದರೆ ಸುತ್ತಮುತ್ತಲಿನ ಪ್ರದೇಶಗಳಿಗೆ ಹೋಮ್‌ ಡಿಲೆವರಿ ಕೂಡ ಹೋಗುತ್ತದೆ. (ಸಂಪರ್ಕ ಸಂಖ್ಯೆ: 7019516591)

ಚನ್ನಪಟ್ಟಣ ತಾಲ್ಲೂಕಿನ ಕೋಡಂಬಹಳ್ಳಿ ಗ್ರಾಮದಲ್ಲಿ ವಿಶೇಷ ನುಪ್ಪಿಟ್ಟು ಮಸಾಲ ತಿನ್ನಲು ಕಾಯುತ್ತಿರುವ ಗ್ರಾಹಕರು
ಚನ್ನಪಟ್ಟಣ ತಾಲ್ಲೂಕಿನ ಕೋಡಂಬಹಳ್ಳಿ ಗ್ರಾಮದಲ್ಲಿ ವಿಶೇಷ ನುಪ್ಪಿಟ್ಟು ಮಸಾಲ ತಿನ್ನಲು ಕಾಯುತ್ತಿರುವ ಗ್ರಾಹಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT