ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಗಾಂಜಾ ಅಮಲಿಗೆ ಕಡಿವಾಣ ಯತ್ನ, ಮಾರಾಟ ಜಾಲದ ಮೇಲೆ ಪೊಲೀಸ್‌ ಕಣ್ಣು

ಹೊಲಗಳಲ್ಲಿಯೂ ಶೋಧ
Last Updated 18 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಗಾಂಜಾ ಪೂರೈಕೆ ಜಾಲದ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದು, ಮಾದಕ ವಸ್ತುವಿನ ಅಮಲು ಕ್ರಮೇಣ ಇಳಿಯತೊಡಗಿದೆ.

ಕಳೆದ ಎರಡು ತಿಂಗಳ ಅವಧಿಯಲ್ಲಿಯೇ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಗಾಂಜಾ ಪೂರೈಕೆ ಮಾಡುವವರನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ. ಈ ವೇಳೆ 60 ಕೆ.ಜಿ.ಗೂ ಹೆಚ್ಚು ಮಾದಕ ವಸ್ತುವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಗುರುವಾರವಷ್ಟೇ ಮಾಗಡಿ ಟೌನ್‌ ಪೊಲೀಸರು ಮನೆಯೊಂದರಲ್ಲಿ ಸಂಗ್ರಹಿಸಿದ್ದ 1.2 ಕೆ.ಜಿ. ಗಾಂಜಾ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸರೂ ಆರೋಪಿಯೊಬ್ಬನನ್ನು ಬಂಧಿಸಿ ಸೊಪ್ಪು ವಶಪಡಿಸಿಕೊಂಡಿದ್ದಾರೆ.

ವ್ಯವಸ್ಥಿತ ಜಾಲ: ತಿಂಗಳ ಹಿಂದಷ್ಟೇ ರಾಮನಗರದ ಐಜೂರು ಠಾಣೆ ಪೊಲೀಸರು ಗಾಂಜಾ ಮಾರಾಟದ ದೊಡ್ಡ ಜಾಲವೊಂದನ್ನು ಬೇಧಿಸಿದ್ದು, ಒಮ್ಮೆಲೆ ಬರೋಬ್ಬರಿ ₨4.4 ಲಕ್ಷ ಮೌಲ್ಯದ 44 ಕೆ.ಜಿ.ಯಷ್ಟು ಉತ್ಪನ್ನವನ್ನು ವಶಕ್ಕೆ ತೆಗೆದುಕೊಂಡಿದ್ದರು. ಇದು ಜಿಲ್ಲೆಯಲ್ಲಿ ಪ್ರಕರಣವೊಂದರಲ್ಲಿ ವಶಪಡಿಸಿಕೊಳ್ಳಲಾದ ದೊಡ್ಡ ಮೊತ್ತದ ಮಾದಕ ವಸ್ತುವಾಗಿತ್ತು. ಜನನಿಬಿಡ ವಸತಿ ಪ್ರದೇಶವೊಂದರ ಮನೆಯಲ್ಲಿಯೇ 20 ಕೆ.ಜಿ.ಗೂ ಹೆಚ್ಚು ಗಾಂಜಾ ಸಂಗ್ರಹಿಸಿದ್ದು. ಗಂಡ ಹೆಂಡತಿ ನಡುವಿನ ಜಗಳದಿಂದಾಗಿ ಪ್ರಕರಣ ಬೆಳಕಿಗೆ ಬಂದಿತ್ತು.

ಜನನಿಬಿಡ ಪ್ರದೇಶಗಳಲ್ಲೇ ಮಾರಾಟ: ರೈಲು ನಿಲ್ದಾಣವೂ ಸೇರಿದಂತೆ ಜನನಿಬಿಡ ಪ್ರದೇಶಗಳು ಹಾಗೂ ಕೆಲವು ಬಡಾವಣೆಗಳಲ್ಲಿ ಚಿಲ್ಲರೆ ರೂಪದಲ್ಲಿ ಗಾಂಜಾ ಮಾರಾಟವಾಗುತ್ತಿದೆ ಎಂಬ ಆರೋಪಗಳು ಆಗಿನಿಂದಲೂ ಇವೆ. 50 ಗ್ರಾಂನ ಸಣ್ಣ ಪ್ಯಾಕೆಟ್‌ಗಳಲ್ಲಿ ಚಿಲ್ಲರೆ ಲೆಕ್ಕದಲ್ಲಿ ಕೆಲವು ಅಂಗಡಿಗಳಲ್ಲಿಯೂ ಮಾರಾಟ ನಡೆದಿತ್ತು. ನಗರ ಪ್ರದೇಶದ ಪೊಲೀಸರು ಕಣ್ಣಿದ್ದೂ ಕುರುಡರಾಗಿದ್ದರು ಎಂದು ಸಾರ್ವಜನಿಕರು ದೂರುತ್ತಾರೆ.

ಆದರೆ ಅನೂಪ್ ಶೆಟ್ಟಿ ಎಸ್ಪಿಯಾಗಿ ಬಂದ ಬಳಿಕ ಸಿಬ್ಬಂದಿಗೆ ಬಿಸಿ ಮುಟ್ಟಿಸಿದ್ದಾರೆ. ಪರಿಣಾಮವಾಗಿ ಪೊಲೀಸರು ನಿರಂತರವಾಗಿ ದಾಳಿ ನಡೆಸುತ್ತಿದ್ದು, ಈ ಪ್ರದೇಶಗಳಲ್ಲಿ ಪರಿಸ್ಥಿತಿ ಕೊಂಚ ನಿಯಂತ್ರಣಕ್ಕೆ ಬಂದಿದೆ.

ಹೊಲಗಳಲ್ಲೂ ಸಿಗುತ್ತಿದೆ
ಜಿಲ್ಲೆಯಲ್ಲಿ ಗಾಂಜಾ ಕೇವಲ ಮಾರಾಟಕ್ಕೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿನ ಕೆಲವು ಪ್ರದೇಶದಲ್ಲಿಯೂ ಬೆಳೆಗಳ ನಡುವೆ ಈ ಮಾದಕ ಪದಾರ್ಥವನ್ನು ಬೆಳೆಯಲಾಗುತ್ತಿದೆ. ಈಚೆಗೆ ಕೋಡಿಹಳ್ಳಿ ಠಾಣೆ ವ್ಯಾಪ್ತಿಯ ತಿಮ್ಮನದೊಡ್ಡಿ ಗ್ರಾಮದ ಕೃಷ್ಣಪ್ಪ ಎಂಬುವರ ಜಮೀನಿನಲ್ಲಿ ಬೆಳೆಯಲಾಗಿದ್ದ ಏಳು ಕೆ.ಜಿ.ಯಷ್ಟು ತೂಕದ ಗಾಂಜಾ ಸೊಪ್ಪನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಕನಕಪುರ ತಾಲ್ಲೂಕಿನ ಕೋಡಿಹಳ್ಳಿ, ಚನ್ನಪಟ್ಟಣ ತಾಲ್ಲೂಕಿನ ಗ್ರಾಮಾಂತರ, ಅಕ್ಕೂರು, ಎಂ.ಕೆ. ದೊಡ್ಡಿ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿಯೂ ಅಲ್ಲಲ್ಲಿ ಪ್ರಕರಣಗಳು ದಾಖಲಾಗುತ್ತಿವೆ. ‘ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಗಾಂಜಾ ಕಂಡುಬಂದಿಲ್ಲ. ಆದರೆ ಬೆಳೆಗಳ ನಡುವೆಯೇ ಕೆಲವರು ಬೆಳೆಯುತ್ತಿದ್ದಾರೆ. ಕಾಡಂಚಿನ ಗ್ರಾಮಗಳ ಜಮೀನುಗಳಲ್ಲಿ ಇಂತಹ ಚಟುವಟಿಕೆಗಳು ಹೆಚ್ಚು ನಡೆಯುತ್ತಿವೆ. ಗಾಂಜಾ ಗಿಡ ಕೊಂಚ ಬಲಿತ ಬಳಿಕ ಅದರ ವಾಸನೆ ಹಬ್ಬುತ್ತದೆ. ಸ್ಥಳೀಯ ಮಾಹಿತಿದಾರರಿಂದ ಇದರ ಜಾಡು ಹಿಡಿದೇ ದಾಳಿಗಳನ್ನು ನಡೆಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಹೊರ ರಾಜ್ಯಗಳಿಂದ ಸಾಗಾಟ
‘ಜಿಲ್ಲೆಯಲ್ಲಿ ಗಾಂಜಾ ಮಾರಾಟದ ಬೇರೆ ಬೇರೆ ಜಾಲಗಳು ಸಕ್ರಿಯವಾಗಿವೆ. ಆಂಧ್ರಪ್ರದೇಶ, ತಮಿಳುನಾಡು ಮೂಲದಿಂದಲೂ ಇಲ್ಲಿಗೆ ಗಾಂಜಾ ಬರುತ್ತಿದೆ. ಬೆಂಗಳೂರು ಮಾರ್ಗವಾಗಿ ಒಂದು ಜಾಲ ಕಾರ್ಯ ನಿರ್ವಹಿಸಿದರೆ, ಕೋಡಿಹಳ್ಳಿ ಗಡಿಭಾಗದಲ್ಲಿ ಮತ್ತೊಂದಿಷ್ಟು ಆರೋಪಿಗಳು ಸಕ್ರಿಯರಾಗಿದ್ದಾರೆ. ಎಲ್ಲವನ್ನೂ ಅವಲೋಕಿಸುತ್ತಿದ್ದು, ವ್ಯವಸ್ಥೆಯನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಇದ್ದೇವೆ’ ಎನ್ನುತ್ತಾರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನೂಪ್‌ ಶೆಟ್ಟಿ.

*
ಗಾಂಜಾ ಮಾರಾಟದ ವಿರುದ್ಧ ನಿರಂತರ ದಾಳಿ ಸಂಘಟಿಸುತ್ತಿದ್ದೇವೆ. ಮಾರಾಟ ಜಾಲಗಳ ಮೇಲೆ ಕಣ್ಣಿಟ್ಟಿದ್ದೇವೆ.
-ಅನೂಪ್‌ ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT