ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ: ಪಕ್ಷಾಂತರಕ್ಕೆ ಪ್ರತಿಯಾಗಿ ಮೈತ್ರಿ ಬೆಸುಗೆ

Published 23 ಮಾರ್ಚ್ 2024, 5:39 IST
Last Updated 23 ಮಾರ್ಚ್ 2024, 5:39 IST
ಅಕ್ಷರ ಗಾತ್ರ

ರಾಮನಗರ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಪಕ್ಷಾಂತರ ಪರ್ವವೂ ಜೋರಾಗಿದೆ. ತಾಲ್ಲೂಕು ಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್‌ನತ್ತ ಚಿತ್ತ ಹರಿಸಿದ್ದಾರೆ. ಮತ್ತೊಂದೆಡೆ ಮೈತ್ರಿಯಲ್ಲಿ ಅಭ್ಯರ್ಥಿ ಘೋಷಣೆಯಾಗಿ ಹತ್ತು ದಿನಗಳ ಬಳಿಕ ಎರಡೂ ಪಕ್ಷಗಳ ಕಾರ್ಯಕರ್ತರ ಬೆಸುಗೆಗೆ ನಾಯಕರು ಚಾಲನೆ ನೀಡಿದ್ದಾರೆ.

ಬಿಜೆಪಿ–ಜೆಡಿಎಸ್ ಮೈತ್ರಿಯ ಮುನ್ಸೂಚನೆ ಅರಿತಿದ್ದ ಸಂಸದ ಡಿ.ಕೆ. ಸುರೇಶ್, ಈಗಾಗಲೇ ಪಂಚಾಯಿತಿ ಮಟ್ಟದಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಿ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಚುನಾವಣೆಗೆ ಅಣಿಗೊಳಿಸುತ್ತಾ ಬಂದಿದ್ದಾರೆ. ಜೊತೆಗೆ ವಿರೋಧಿ ಪಾಳಯದಲ್ಲಿರುವವರನ್ನು ತಮ್ಮತ್ತ ಸೆಳೆಯಲು ತಂತ್ರ ರೂಪಿಸಿದ್ದಾರೆ.

ಮಾಜಿ ಶಾಸಕರಿಂದಿಡಿದು, ಸ್ಥಳೀಯವಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಎರಡು ಪಕ್ಷಗಳ ಮಾಜಿಗಳು ತಮ್ಮ ಬೆಂಬಲಿಗರೊಂದಿಗೆ ‘ಕೈ’ ಹಿಡಿಯುತ್ತಿದ್ದಾರೆ. ಚನ್ನಪಟ್ಟಣದ ಜೆಡಿಎಸ್‌ನ ಮಾಜಿ ಶಾಸಕ ಎಂ.ಸಿ. ಅಶ್ವಥ್ ಅವರಿಂದ ಶುರುವಾದ ಪಕ್ಷಾಂತರ ಪರ್ವ ಶುರುವಾಯಿತು. ಬಿಜೆಪಿ ಮುಖಂಡ ಹಾಗೂ ಚನ್ನಪಟ್ಟಣ ಯೋಜನಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್.ಎಂ. ಮಲುವೇಗೌಡ ಬೆಂಗಳೂರಿನಲ್ಲಿ ಇತ್ತೀಚೆಗೆ, ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದರು.

ಮಾಗಡಿ, ರಾಮನಗರ ಹಾಗೂ ಹಾರೋಹಳ್ಳಿಯಲ್ಲೂ ಹೋಬಳಿ ಹಾಗೂ ಪಂಚಾಯಿತಿ ಮಟ್ಟದಲ್ಲಿ ‘ಕೈ’ನತ್ತ ಬಿಜೆಪಿ–ಜೆಡಿಎಸ್ ಕಾರ್ಯಕರ್ತರ ಪಕ್ಷಾಂತರ ಪರ್ವ ಜೋರಾಗಿಯೇ ನಡೆಯುತ್ತಿದೆ. ಸ್ವತಃ ಡಿ.ಕೆ. ಸುರೇಶ್ ಅವರ ನೇತೃತ್ವದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದ ನೇತೃತ್ವ ವಹಿಸುತ್ತಿದ್ದಾರೆ.

ಚನ್ನಪಟ್ಟಣದಲ್ಲೇ ಹೆಚ್ಚು: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಪ್ರತಿನಿಧಿಸುವ ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ಗೆ ಹೇಳಿಕೊಳ್ಳುವಂತಹ ನೆಲೆ ಇಲ್ಲ. ಕನಕಪುರ, ರಾಮನಗರ ಹಾಗೂ ಮಾಗಡಿಯಲ್ಲಿ ನಿರೀಕ್ಷಿತ ಲೀಡ್‌ ಪಡೆಯುವ ಲೆಕ್ಕಾಚಾರ ಹಾಕಿರುವ ಡಿ.ಕೆ. ಸಹೋದರರು, ಚನ್ನಪಟ್ಟಣದಲ್ಲಿ ಮತ ಪ್ರಮಾಣ ಹೆಚ್ಚಿಸಿಕೊಳ್ಳಲು ಚಿತ್ತ ಹರಿಸಿದ್ದಾರೆ.

ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಲೀಡ್ ಪಡೆಯುವ ಮೂಲಕ, ಬಿಜೆಪಿ ಪ್ರಾಬಲ್ಯವಿರುವ ರಾಜಧಾನಿಗೆ ಹೊಂದಿಕೊಂಡಿರುವ ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ, ಆನೇಕಲ್ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್ ಕ್ಷೇತ್ರದಲ್ಲಾಗುವ ಮತಗಳ ವ್ಯತ್ಯಾಸವನ್ನು ಸರಿದೂಗಿಸುವ ತಂತ್ರ ಹೆಣೆದು, ಆ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದಾರೆ.

ಮೈತ್ರಿ ಬೆಸುಗೆಗೆ ಸಭೆ: ಬಿಜೆಪಿ–ಜೆಡಿಎಸ್ ಮೈತ್ರಿ ಬಳಿಕ ಜಿಲ್ಲೆಯಲ್ಲಿ ಮೊದಲ ಬಾರಿಗೆ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನು ದೊಡ್ಡಮಟ್ಟದಲ್ಲಿ ಮಾರ್ಚ್ 23ರಂದು ರಾಮನಗರದಲ್ಲಿ ಆಯೋಜಿಸಲಾಗಿದೆ.‌ ಆರಂಭದಿಂದಲೂ ಎರಡೂ ಪಕ್ಷಗಳ ಮುಖಂಡರು ನೆಪ ಮಾತ್ರಕ್ಕಷ್ಟೆ ಕೆಲ ಸುದ್ದಿಗೋಷ್ಠಿ ಹಾಗೂ ಪ್ರತಿಭಟನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ಅದಕ್ಕೂ ಮುಂಚೆ ಇಬ್ಬರನ್ನೂ ಬೆಸೆಯುವಂತಹ ಕಾರ್ಯಕ್ರಮಗಳು ನಡೆದಿರಲಿಲ್ಲ. ಎರಡೂ ಪಕ್ಷಗಳ ಮುಖಂಡರು ಪ್ರತ್ಯೇಕ ಸಭೆಗಳನ್ನು ಮಾಡಿಕೊಂಡು, ತಮ್ಮ ಪಾಡಿಗೆ ಕೆಲಸ ಮಾಡುತ್ತಿದ್ದಾರೆ. ಒಟ್ಟಿಗೆ ಕಾಣಿಸಿಕೊಂಡು ಪ್ರಚಾರ ಮಾಡಿದ್ದಿಲ್ಲ. ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರೇ ಇತ್ತೀಚೆಗೆ ಬಿಜೆಪಿ ಸಭೆಗೆ ಆಹ್ವಾನವಿಲ್ಲದಿದ್ದರೂ ಭೇಟಿ ನೀಡಿ ಮಾತನಾಡಿದ್ದರು. ಮೂರು ದಿನಗಳ ಹಿಂದೆ ನಿಖಿಲ್ ಕುಮಾರಸ್ವಾಮಿ ಅವರು ಜೆಡಿಸ್ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರು ಕಾಣಿಸಿಕೊಂಡಿದ್ದರು. 

ಅದೆಲ್ಲದರ ಮುಂದುವರಿದ ಭಾಗವಾಗಿ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಂದೇ ವೇದಿಕೆಗೆ ತಂದು ಬೆಸೆಯಲಾಗುತ್ತಿದೆ. ತಮ್ಮ ಕಾರ್ಯಕರ್ತರ ಪಕ್ಷಾಂತರ ಪರ್ವಕ್ಕೆ ತಡೆಯೊಡ್ಡಿ, ಎದುರಾಳಿ ವಿರುದ್ಧ ಹೋರಾಡಲು ಹುರುಪು ತುಂಬಲು ಎರಡೂ ಪಕ್ಷಗಳ ನಾಯಕರು ಮುಂದಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT