ಸೋಮವಾರ, ಮೇ 23, 2022
24 °C

ನೂರನೇ ದಿನಕ್ಕೆ ಕಾಲಿಟ್ಟ ಮುಷ್ಕರ: ರಾಜಕೀಯ ದಾಳವಾದ ಟೊಯೊಟಾ ಹೋರಾಟ?

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ (ಟಿಕೆಎಂ) ಕಾರ್ಖಾನೆ ನೌಕರರ ಮುಷ್ಕರಕ್ಕೆ ಕ್ರಮೇಣ ರಾಜಕೀಯದ ಬಣ್ಣ ಮೆತ್ತಿಕೊಳ್ಳುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್–ಬಿಜೆಪಿ ಮುಖಂಡರು ಜಿದ್ದಿಗೆ ಬಿದ್ದಂತಿದೆ.

ಕಾರ್ಖಾನೆಯ ಮುಂಭಾಗ ಕಾರ್ಮಿಕರು ನಡೆಸುತ್ತಿರುವ ಮುಷ್ಕರ ಮಂಗಳವಾರ ನೂರನೇ ದಿನಕ್ಕೆ ಕಾಲಿರಿಸುತ್ತಿದೆ. ಸರ್ಕಾರದ ಹಲವು ಸುತ್ತಿನ ಮಾತುಕತೆಗಳ ನಡುವೆಯೂ ಕಾರ್ಮಿಕರ ಅಮಾನತು ಆದೇಶ ಹಿಂಪಡೆಯಲು ಕಾರ್ಖಾನೆ ಆಡಳಿತ ಮಂಡಳಿ ಸಿದ್ಧವಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಜೆಡಿಎಸ್ ಶಾಸಕ ಎ. ಮಂಜುನಾಥ್‌ ನೇತೃತ್ವದ ಮಧ್ಯಸ್ಥಿಕೆ ಮಾತುಕತೆಗಳು ಫಲ ನೀಡುತ್ತಿಲ್ಲ. ಈ ನಡುವೆ ಕಾಂಗ್ರೆಸ್‌ ನಾಯಕರು ಸಂಪೂರ್ಣ ಯುನಿಯನ್‌ ಮುಖಂಡರ ಬೆನ್ನಿಗೆ ನಿಂತಿದ್ದಾರೆ. ಹಲವು ಪಾದಯಾತ್ರೆಗಳು ನಡೆದಿದ್ದು, ಕಾಂಗ್ರೆಸ್‌ ಬಾವುಟಗಳು ಕಾಣಿಸುತ್ತಿವೆ.

ಟೊಯೊಟಾ ಕಾರ್ಖಾನೆ ವಿಚಾರದಲ್ಲಿ ಮಾಗಡಿ ಹಾಲಿ ಶಾಸಕ ಮಂಜುನಾಥ್ ಹಾಗೂ ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ನಡುವೆ ವಾಗ್ವಾದ ನಡೆಯುತ್ತಿದೆ. ಶಾಸಕರು ಕಾರ್ಖಾನೆ ಆಡಳಿತ ಮಂಡಳಿ ಪರ ನಿಂತಿದ್ದಾರೆ ಎನ್ನುವುದು ಬಾಲಕೃಷ್ಣ ಆರೋಪ. ಮಾಜಿ ಶಾಸಕರು ಹೋರಾಟಕ್ಕೆ ರಾಜಕೀಯ ಬಣ್ಣಹಚ್ಚಿದ್ದಾರೆ ಎನ್ನುವುದು ಮಂಜುನಾಥ್‌ ಆರೋಪವಾಗಿದೆ.

ಕರುಣಾಕರ ರೆಡ್ಡಿ ದಾಳ: ಈಚೆಗೆ ಟೊಯೊಟಾ ಕಾರ್ಮಿಕರ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಮಿಕರ ಹೋರಾಟದ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಧ್ವನಿ ಎತ್ತುವ ಭರವಸೆ ನೀಡಿದ್ದರು. ಆದರೆ ಅಧಿವೇಶನದಲ್ಲಿ ಸಿದ್ದರಾಮಯ್ಯ ಮಾತನಾಡುವ ಮುನ್ನವೇ ಬಳ್ಳಾರಿ ಶಾಸಕ ಕರುಣಾಕರ ರೆಡ್ಡಿ ಈ ವಿಷಯ ಪ್ರಸ್ತಾಪ ಮಾಡಿದ್ದರು. ನಂತರದಲ್ಲಿ ಕಾಂಗ್ರೆಸ್ ನಾಯಕರಿಗೆ ಹೆಚ್ಚಿನ ಅವಕಾಶ ದೊರೆತಿರಲಿಲ್ಲ.

‘ಟೊಯೊಟಾ ಕಾರ್ಮಿಕರ ಹೋರಾಟಕ್ಕೂ ಕರುಣಾಕರ ರೆಡ್ಡಿಗೂ ಸಂಬಂಧವೇ ಇಲ್ಲ. ಸಿದ್ದರಾಮಯ್ಯ ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿದಲ್ಲಿ ಗಂಭೀರವಾಗಲಿದೆ ಎಂದು ಅರಿತ ಬಿಜೆಪಿ ನಾಯಕರು ಕರುಣಾಕರ ರೆಡ್ಡಿಯನ್ನು ಮಧ್ಯಕ್ಕೆ ಬಿಟ್ಟು ದಿಕ್ಕು ತಪ್ಪಿಸುವ ತಂತ್ರ ಅನುಸರಿಸಿದರು’ ಎಂದು ಮಾಜಿ ಶಾಸಕ ಬಾಲಕೃಷ್ಣ ಆರೋಪಿಸುತ್ತಾರೆ.

ಎಚ್‌ಡಿಕೆ ತಟಸ್ಥ: ಟೊಯೊಟಾ ಕಾರ್ಖಾನೆಯಿಂದ ಕೂಗಳತೆ ದೂರದಲ್ಲಿ ತೋಟದ ಮನೆ ಹೊಂದಿರುವ ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಕಾಂಗ್ರೆಸ್‌ ಈ ಹೋರಾಟ ಕೈಗೆತ್ತಿಕೊಂಡ ಬಳಿಕ ತಟಸ್ಥರಾಗಿದ್ದು, ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಾಂಗ್ರೆಸ್ ಈ ವಿಚಾರದಲ್ಲಿ ಎಚ್‌ಡಿಕೆರನ್ನು ಕೆಣಕುವ ಪ್ರಯತ್ನ ಮಾಡುತ್ತಿದ್ದು, ಹೋರಾಟದ ನೇತೃತ್ವ ವಹಿಸಿಕೊಳ್ಳುವಂತೆ ಪಂಥಾಹ್ವಾನ ನೀಡುತ್ತಾ ಬಂದಿದೆ.

ಡಿಕೆಶಿ ಪ್ರವೇಶ: ಸಂಸದ ಡಿ.ಕೆ. ಸುರೇಶ್‌ ಈಗಾಗಲೇ ಕಾರ್ಮಿಕರ ಬೆನ್ನಿಗೆ ನಿಂತು, ಟಿಕೆಎಂ ಕಾರ್ಖಾನೆಗೆ ಬೀಗ ಜಡಿಯುವ ಬೆದರಿಕೆ ಹಾಕಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಷ್ಟು ದಿನ ಮಗಳ ಮದುವೆ ಕಾರಣಕ್ಕೆ ಈ ವಿಚಾರದಲ್ಲಿ ಪ್ರತಿಕ್ರಿಯಿಸಿರಲಿಲ್ಲ. ಗುರುವಾರ ಡಿ.ಕೆ. ಸುರೇಶ್ ಅವ‌ರ ಬೆಂಗಳೂರು ನಿವಾಸದಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆಯಲಿದ್ದು, ಆ ನಂತರ ಶಿವಕುಮಾರ್ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು