ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Womens Day: ಆಡಳಿತ ಯಂತ್ರದಲ್ಲಿ ನಾರಿಶಕ್ತಿ

Published 8 ಮಾರ್ಚ್ 2024, 6:48 IST
Last Updated 8 ಮಾರ್ಚ್ 2024, 6:48 IST
ಅಕ್ಷರ ಗಾತ್ರ

ರಾಮನಗರ: ಮಹಿಳೆಯರ ಅಸ್ಮಿತೆ ಮತ್ತು ಅವರ ಆತ್ಮಗೌರವದ ಸಂಕೇತವಾಗಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಒಂದು ಕಾಲದಲ್ಲಿ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಭಾರತೀಯ ಹೆಣ್ಣು, ಇದೀಗ ಸರ್ವಾಂತರ್ಯಾಮಿ ಎಲ್ಲಾ ಕ್ಷೇತ್ರಗಳಲ್ಲೂ ಛಾಪು ಮೂಡಿಸಿದ್ದಾಳೆ.

ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ, ರಾಮನಗರ ಜಿಲ್ಲೆಯಲ್ಲಿ ಸರ್ಕಾರಿ ಆಡಳಿತ ಯಂತ್ರದಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ಶಕ್ತಿ ತುಂಬುತ್ತಿರುವ ಕೆಲ ನಾರಿಯರ ಪರಿಚಯ ಇಲ್ಲಿದೆ.

ವಿಜಯಕುಮಾರಿ, ನಗರಸಭೆ ಅಧ್ಯಕ್ಷೆ

ರಾಮನಗರದ ಅರ್ಚಕರಹಳ್ಳಿಯವರಾದ ವಿಜಯಕುಮಾರಿ ಅವರು, ನಗರಸಭೆ ಸದಸ್ಯೆಯಾಗಿ ಆಯ್ಕೆಯಾದ ಮೊದಲ ಸಲವೇ ಅಧ್ಯಕ್ಷೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಎಸ್‌ಎಸ್ಎಲ್‌ಸಿ ಓದಿರುವ ಅವರು ಸಮಾಜಮುಖಿ ಕಾರ್ಯಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ. ಕಷ್ಟ ಎಂದು ಬಂದವರಿಗೆ ಕೈಲಾದ ಸಹಾಯಹಸ್ತ ಚಾಚುವುದು ಇವರ ಗುಣ. ಮಾತಿಗಿಂತ ಕೃತಿ ಮೇಲೂ ಎನ್ನುವ ಅವರು, ‘ನಾವು ಮಾತನಾಡುವುದಕ್ಕಿಂತ ನಮ್ಮ ಕೆಲಸಗಳು ಮಾತನಾಡಬೇಕು. ನಗರಸಭೆ ಅಧ್ಯಕ್ಷೆಯಾಗಿ ಹಿರಿಯರ ಮಾರ್ಗದರ್ಶನದಲ್ಲಿ ನಗರದ ಜನತೆಗೆ ನನ್ನ ಕೈಲಾದ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದೇನೆ’ ಎಂದು ಸಾರ್ಥಕ ಭಾವನೆಯನ್ನು ವ್ಯಕ್ತಪಡಿಸಿದರು.

ತೇಜಸ್ವಿನಿ, ತಹಶೀಲ್ದಾರ್, ರಾಮನಗರ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಬಾಣೂರು ಗ್ರಾಮದ ತೇಜಸ್ವಿನಿ ಅವರು, ಪ್ರತಿಭಾನ್ವಿತ ಅಧಿಕಾರಿ. ರಾಮನಗರದಲ್ಲಿ ಒಂದು ವರ್ಷದಿಂದ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಾಜಶಾಸ್ತ್ರದಲ್ಲಿ ಎಂ.ಎ ಜೊತೆಗೆ ಇಂಟಿರೀಯರ್ ಡಿಸೈನಿಂಗ್ ಕೋರ್ಸ್ ಓದಿರುವ ಅವರು 2012ರಲ್ಲಿ ಸಾಂಖ್ಯಿಕ ನಿರೀಕ್ಷಕಿಯಾಗಿ ಸರ್ಕಾರಿ ಸೇವೆಗೆ ಕಾಲಿಟ್ಟರು. ಪಿಡಿಒ ಆಗಿಯೂ ಸೇವೆ ಸಲ್ಲಿಸಿರುವ ಅವರು, 2014ರಲ್ಲಿ ಕೆಎಎಸ್ ಅಧಿಕಾರಿಯಾಗಿ ನೇಮಕವಾದರು. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ತಹಶೀಲ್ದಾರ್ ಆಗಿ ಕೆಲಸ ಮಾಡಿದ ಅನುಭವ. ‘ಹೆಣ್ಣು–ಗಂಡೆಂಬ ತಾರತಮ್ಯವಿಲ್ಲದ ಸಮಾಜ ನಿರ್ಮಾಣ ನಮ್ಮ ಆದ್ಯತೆಯಾಗಬೇಕು’ ಎನ್ನುತ್ತಾರೆ ತೇಜಸ್ವಿನಿ.

ಡಾ. ಪದ್ಮ ಜಿ.ಎಲ್, ಜಿಲ್ಲಾ ಶಸ್ತ್ರಚಿಕಿತ್ಸಕಿ

ರಾಮನಗರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕಿಯಾಗಿರುವ ಡಾ. ಪದ್ಮ ಜಿ.ಎಲ್ ಅವರು, ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗುರುದೇವರಹಳ್ಳಿಯವರು. ತಮ್ಮ ಕನಸಿನಂತೆ ವೈದ್ಯೆಯಾದ ಅವರ 21 ವರ್ಷ ಗ್ರಾಮೀಣ ಭಾಗದಲ್ಲಿ ಸೇವೆ ಮಾಡಿದ್ದಾರೆ. ರಾಮನಗರದಲ್ಲಿ ಎರಡೂವರೆ ವರ್ಷ ಆರ್‌.ಸಿಎಚ್. ಆಗಿದ್ದ ಅವರು, ಕೋವಿಡ್ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಕೋವಿಡ್ ನೋಡಲ್ ಅಧಿಕಾರಿಯಾಗಿ, ಜೀವ ಉಳಿಸುವ ಕೆಲಸ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ. ಒಂದೂವರೆ ವರ್ಷದಿಂದ ಶಸ್ತ್ರಚಿಕಿತ್ಸಕಿಯಾಗಿರುವ ನೂತನ ಜಿಲ್ಲಾಸ್ಪತ್ರೆಗೆ ಹೊಸ ಸ್ವರೂಪ ಕೊಟ್ಟಿದ್ದಾರೆ.

ವಿ. ನಾಗವೇಣಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ

ಬೆಂಗಳೂರಿನ ಜಯನಗರದವರಾದ ನಾಗವೇಣಿ ವಿ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮನೋಸಾಮಾಜಿಕ ಕಾರ್ಯಕರ್ತೆಯಾಗಿ ಸರ್ಕಾರಿ ವೃತ್ತಿ ಆರಂಭಿಸಿದವರು. 14 ವರ್ಷಗಳ ಸರ್ಕಾರಿ ಸೇವೆಯಲ್ಲಿ ಒಂಬತ್ತು ವರ್ಷ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ, ಜಿಲ್ಲಾ ಮಕ್ಳಳ ರಕ್ಷಣಾಧಿಕಾರಿಯಾಗಿಯೂ ಮೂರು ವರ್ಷ ಹೊಣೆ ನಿಭಾಯಿಸಿದ್ದಾರೆ. ‘ಹೆಣ್ಣಾಗಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ಹೆಣ್ಣು–ಗಂಡು ಒಂದೇ ಎಂಬ ಭಾವನೆ ನಮ್ಮ ಬದುಕಿನ ಭಾಗವಾಗಬೇಕು’ ಎನ್ನುತ್ತಾರೆ ನಾಗವೇಣಿ.

ನಾಗಮ್ಮ ಎಂ.ಪಿ, ಡಿಡಿಪಿಯು, ಪದವಿ ಪೂರ್ವ ಶಿಕ್ಷಣ ಇಲಾಖೆ

ಚಾಮರಾಜನಗರ ಜಿಲ್ಲೆಯ ಮುಕ್ಕಡಹಳ್ಳಿ ಗ್ರಾಮದವರಾದ ನಾಗಮ್ಮ, ಸಮಾಜಶಾಸ್ತ್ರ ಉಪನ್ಯಾಸಕಿಯಾಗಿ 19 ವರ್ಷ ಮತ್ತು 11 ವರ್ಷ ಪ್ರಾಂಶುಪಾಲೆಯಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಕಳೆದ ವರ್ಷ ಪದವಿ ಪೂರ್ವ ಶಿಕ್ಷಣ ಇಲಾಖೆಯ ಡಿಡಿಪಿಯು ಆಗಿ ಪದೋನ್ನತಿ ಹೊಂದಿದರು. ಇದೇ ವರ್ಷದ ಫೆಬ್ರುವರಿಯಿಂದ ರಾಮನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಸರ್ವಾಂತರ್ಯಾಮಿಯಂತೆ ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಮುನ್ನುಗ್ಗಿ ಸಾಧನೆ ಮಾಡಬೇಕು. ಮಹಿಳಾ ಶೋಷಣೆ ಮುಕ್ತ ಸಮಾಜ ನಮ್ಮದಾಗಬೇಕು’ ಎನ್ನುತ್ತಾರೆ ನಾಗಮ್ಮ.

ಮಧುಮಾಲಾ ಪಿ.ಎಸ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ, ರಾಮನಗರ

ಎಂ.ಬಿ.ಎ ಓದಿರುವ ಮಧುಬಾಲಾ ಅವರು, ಸರ್ಕಾರಿ ಉದ್ಯೋಗದ ಕನಸಿನ ಬೆನ್ನತ್ತಿ ಸರ್ಕಾರಿ ಪ್ರಥಮ ದರ್ಜೆ ಸಹಾಯಕಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ (ಬಿಸಿಡಬ್ಲ್ಯೂಡಿ) ಸೇರಿದರು. ಬೆಂಗಳೂರಿನ ಆರ್.ಆರ್. ನಗರದವರಾದ ಅವರು, ಇಲಾಖೆಯಲ್ಲಿ ಹದಿನೈದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಜುಲೈನಿಂದ ರಾಮನಗರದಲ್ಲಿ ಬಿಸಿಡಬ್ಲ್ಯೂಡಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ‘ಸ್ವಾವಲಂಬನೆಯೊಂದೇ ಹೆಣ್ಣನ್ನು ಸಂಕೋಲೆಗಳಿಂದ ಬಿಡುಗಡೆಗೊಳಿಸುವ ಸಾಧನ ಮತ್ತು ಸಾಧನೆಯ ಏಣಿ’ ಎನ್ನುತ್ತಾರೆ ಮುಧುಮಾಲಾ.

ಮಂಗಳಗೌರಿ ವಿ. ಭಟ್, ಸಹಾಯಕ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮುರೂರು ಗ್ರಾಮದವರಾದರ ಮಂಗಳಗೌರಿ ಅವರು, ಪ್ರಥಮ ದರ್ಜೆ ಸಹಾಯಕಿಯಾಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ವೃತ್ತಿ ಆರಂಭಿಸಿದರು. ಪ್ರವಾಸಿ ಅಧಿಕಾರಿಯಾಗಿ ಪದೋನ್ನತಿ ಹೊಂದಿದ, ಹತ್ತು ವರ್ಷಗಳಿಂದ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿದ್ದಾರೆ. 24 ವರ್ಷಗಳ ಸರ್ಕಾರಿ ಸೇವೆಯಲ್ಲಿ ಕಾರವಾರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರಿನಲ್ಲಿ ಕೆಲಸ ಮಾಡಿದ ಅನುಭವವಿರುವ ಅವರು, ಸದ್ಯ ಇಲಾಖೆಯ ರಾಮನಗರ ಮತ್ತು ಕೋಲಾರದ ಸಹಾಯಕ ನಿರ್ದೇಶಕಿಯಾಗಿದ್ದಾರೆ.

ಸಿ.ಆರ್. ರಮ್ಯ, ಉಪ ನಿರ್ದೇಶಕಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ

ಎಂಜಿನಿಯರಿಂಗ್ ಓದಿರುವ ರಮ್ಯ ಅವರು, ತುಮಕೂರಿನ ಚನ್ನಬಸವೇಶ್ವರನಗರದವರು. ಎರಡು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ ಅವರು, 2013ರಲ್ಲಿ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿಯಾಗಿ ನೇಮಕವಾದರು. ನಂತರ ಕೆಎಎಸ್‌ ಪೂರ್ಣಗೊಳಿಸಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕಿಯಾಗಿ ವೃತ್ತಿ ಆರಂಭಿಸಿದರು. ಮಂಗಳೂರು ಮತ್ತು ಮಂಡ್ಯದಲ್ಲಿ ಕಾರ್ಯನಿರ್ವಹಿಸಿದ ಅನುಭವವಿರುವ ರಮ್ಯ ಅವರು, ಒಂದು ವರ್ಷದಿಂದ ರಾಮನಗರದಲ್ಲಿ ಕೆಲಸ ಮಾಡುತ್ತಿದ್ದಾರೆ. ಲೇಖಕಿಯೂ ಆಗಿರುವ ಅವರು, ‘ಮಹಿಳೆ ಮತ್ತು ಉದ್ಯಮಶೀಲತೆ’ ಎಂಬ ಪುಸ್ತಕ ಬರೆದಿದ್ದು, ಅದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಫೆಲೋಶಿಫ್ ಸಿಕ್ಕಿದೆ.

ಅನಿತಾ, ಸಹಾಯಕ ನಿರ್ದೇಶಕಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ರಾಮನಗರ

ಬಡ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ಅನಿತಾ ಅವರು ಓದಿದ್ದು ಬಿಎ ಮತ್ತು ಬಿ.ಇಡಿ. ಮಾಗಡಿ ಪಟ್ಟಣದವರಾದ ಅವರು, ಇಲಾಖೆಯಲ್ಲಿ ಸ್ಟೆನೊಗ್ರಾಫರ್ ಆಗಿ 2000ನೇ ಇಸವಿಯಲ್ಲಿ ವೃತ್ತಿ ಬದುಕು ಆರಂಭಿಸಿದರು. ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಹಾಗೂ ಇಲಾಖೆಯ ಜಂಟಿ ನಿರ್ದೇಶಕರ ಆಪ್ತ ಸಹಾಯಕಿಯಾಗಿ ಕೆಲಸ ನಿರ್ವಹಿಸಿದ ಅವರು, ನಂತರ ಅಧೀಕ್ಷಕಿಯಾಗಿ ಮತ್ತು ಸಹಾಯಕ ನಿರ್ದೇಶಕಿಯಾಗಿ ಪದೋನ್ನತಿ ಹೊಂದಿದರು. ಚಿತ್ರದುರ್ಗ ಮತ್ತು ರಾಮನಗರದಲ್ಲಿ ಕಾರ್ಯನಿರ್ವಹಿಸಿರುವ ಅವರು, ಕಳೆದ 8 ತಿಂಗಳಿಂದ ರಾಮನಗರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಸವಿತಾ ಲಕ್ಷ್ಮಿ ಬೆಳಗಲಿ, ಜಿಲ್ಲಾ ನೋಂದಣಾಧಿಕಾರಿ

ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಜಮಖಂಡಿಯವರಾದ ಸವಿತಾ ಲಕ್ಷ್ಮಿ ಬೆಳಗಲಿ ಅವರು, 1990ರಿಂದ ಸಬ್ ರಿಜಿಸ್ಟ್ರಾರ್ ಆಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಜಿಲ್ಲಾ ನೋಂದಣಾಧಿಕಾರಿಯಾಗಿ ಪದನ್ನೋತ್ತಿ ಹೊಂದಿದರು. ಜಮಖಂಡಿ, ಕನಕಪುರ, ಬೆಂಗಳೂರು, ಬೆಂಗಳೂರು ಗ್ರಾಮಾಂತರದಲ್ಲಿ ಸೇವೆ ಸಲ್ಲಿಸಿರುವ ಅವರು, ರಾಮನಗರದಲ್ಲಿ ಎರಡೂವರೆಗೆ ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಇಲಾಖೆಯ ಕೇಂದ್ರ ಮೌಲ್ಯ ಮಾಪನ ಸಮಿತಿಯಲ್ಲಿ ನೋಂದಣಿ ಉಪ ಮಹಾಪರೀವೀಕ್ಷಕರಾಗಿದ್ದಾರೆ.

ಸೌಜನ್ಯಾ ಕೆ.ಸಿ, ಸಬ್‌ಇನ್‌ಸ್ಪೆಕ್ಟರ್, ಎಂ.ಕೆ. ದೊಡ್ಡಿ ಪೊಲೀಸ್ ಠಾಣೆ

‘ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಹೆಣ್ಣು, ತನ್ನ ಸುತ್ತ ಇದ್ದ ಒಂದೊಂದೇ ಸಂಕೋಲೆಗಳನ್ನು ಕಡಿದುಕೊಂಡು ಎಲ್ಲಾ ಕ್ಷೇತ್ರಗಳಲ್ಲೂ ಛಾಪು ಮೂಡಿಸುತ್ತಿದ್ದಾಳೆ. ಆಕೆಯ ಸಾಧನೆಗೆ ಮಿತಿ ಇಲ್ಲ’ ಎನ್ನುವ ಸೌಜನ್ಯಾ ಅವರು, ಮಂಡ್ಯ ಜಿಲ್ಲೆಯ ಕಾಗೆಹಳ್ಳದದೊಡ್ಡಿಯವರು. ಕೃಷಿ ವಿಷಯದಲ್ಲಿ ಎಂ.ಎಸ್ಸಿ ಓದಿರುವ ಅವರು, 2020ರಲ್ಲಿ ಪೊಲೀಸ್ ಇಲಾಖೆ ಸೇರಿದರು. ಬಿಡದಿ ಪೊಲೀಸ್ ಠಾಣೆಯಲ್ಲಿ ವೃತ್ತಿ ಆರಂಭಿಸಿದ ಅವರು, ನಾಲ್ಕು ತಿಂಗಳಿಂದ ಎಂ.ಕೆ. ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT