ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಲೆನಾಡಿನ 4 ಹಲಸು ತಳಿಗೆ ಕೇಂದ್ರದ ಮನ್ನಣೆ

-
Published 14 ಜೂನ್ 2024, 19:23 IST
Last Updated 14 ಜೂನ್ 2024, 19:23 IST
ಅಕ್ಷರ ಗಾತ್ರ

ಶಿವಮೊಗ್ಗ: ಸಕ್ಕರೆ, ಬೆಲ್ಲದ ಸಿಹಿಯೊಂದಿಗೆ ಪೈಪೋಟಿಗೆ ಇಳಿಯುವ ವಿಶಿಷ್ಟ ರುಚಿ ಹಾಗೂ ಸ್ವಾದಿಷ್ಟ ತೊಳೆಗಳನ್ನು ಹೊಂದಿರುವ ಮಲೆನಾಡಿನ ಹಳದಿ ರುದ್ರಾಕ್ಷಿ, ಕೆಂಪು ರುದ್ರಾಕ್ಷಿ, ಕೆಂಪು (ಆರ್‌ಟಿಬಿ) ಹಾಗೂ ಕಿತ್ತಳೆ (ಆರ್‌ಪಿಎನ್) ಬಣ್ಣದ ಹಲಸಿನ ತಳಿಗೆ ಕೇಂದ್ರ ಸರ್ಕಾರದ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ ಮಾನ್ಯತೆ ಲಭಿಸಿದೆ.

ಅಳಿವಿನಂಚಿನಲ್ಲಿರುವ ಈ ಅಪರೂಪದ ತಳಿಗಳನ್ನು ಸಂರಕ್ಷಿಸಲು ಹಾಗೂ ಬೆಳೆಗಾರರನ್ನು ಆರ್ಥಿಕವಾಗಿ ಸದೃಢಗೊಳಿಸಲು ಪ್ರಾಧಿಕಾರದ ಈ ತೀರ್ಮಾನವು ನೆರವಾಗಲಿದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಎಂ.ಬಿ. ದುಶ್ಯಂತಕುಮಾರ್ ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ತಳಿಗಳ ಬಗ್ಗೆ ವಿಶ್ವವಿದ್ಯಾಲಯದಿಂದ 3-4 ವರ್ಷಗಳ ಕಾಲ ಅಧ್ಯಯನ ನಡೆಸಿದೆ. ಬಳಿಕ ಪ್ರಾಧಿಕಾರಕ್ಕೆ ಸಂಪೂರ್ಣ ಮಾಹಿತಿ ಸಲ್ಲಿಸಲಾಗಿತ್ತು. ಪ್ರಾಧಿಕಾರದಿಂದ ನೇಮಕಗೊಂಡ ವಿಜ್ಞಾನಿಗಳ ತಂಡ ಎರಡು ಬಾರಿ ಸ್ಥಳ ಪರಿಶೀಲನೆ ನಡೆಸಿ, ವಿವರವಾದ ಮಾಹಿತಿ ಸಂಗ್ರಹಿಸಿದೆ. ಅಂತಿಮವಾಗಿ ನೋಂದಣಿಗೆ (ಮಾನ್ಯತೆ) ಶಿಫಾರಸು ಮಾಡಿತ್ತು ಎಂದು ಮಾಹಿತಿ ನೀಡಿದರು.

ಈ ತಳಿಯ ಹಲಸಿನ ಸಸಿಗಳನ್ನು ವಿಶ್ವವಿದ್ಯಾಲಯದಿಂದ ಅಭಿವೃದ್ಧಿಪಡಿಸಿ ಆಸಕ್ತ ಕೃಷಿಕರಿಗೆ ವಿತರಿಸಲಾಗುವುದು. ಈ ತಳಿಯ ಹಲಸನ್ನು ಮಲೆನಾಡು ಮಾತ್ರವಲ್ಲದೇ ದೇಶದ ಎಲ್ಲ ಕಡೆಯೂ ಬೆಳೆಯಬಹುದಾಗಿದೆ ಎಂದರು.

‘ಈ ತಳಿಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ನೋಂದಣಿ  ಸಂದರ್ಭದಲ್ಲಿ ಪ್ರಾಧಿಕಾರಕ್ಕೆ ಮಾಹಿತಿ ಸಲ್ಲಿಸಲಾಗಿದೆ. ಬೆಳೆಗಾರರಿಗೂ ಆರ್ಥಿಕವಾಗಿ ಲಾಭದಾಯಕವಾಗಲಿವೆ’ ಎಂದು ಪ್ರಾಧಿಕಾರದ ಪ್ರಾಂತೀಯ ಕಚೇರಿ ಮುಖ್ಯಸ್ಥ ಎಂ.ಕೆ. ಸಿಂಗ್ ಹೇಳಿದರು.

ರೈತರಿಗೆ ಪ್ರಮಾಣ ಪತ್ರ ವಿತರಣೆ:

ಈ ಹಲಸಿನ ತಳಿಗಳನ್ನು ಸಂರಕ್ಷಿಸಿಕೊಂಡು ಬಂದಿರುವ ಹೊಸನಗರ ತಾಲ್ಲೂಕಿನ ಬರುವೆ ಗ್ರಾಮದ ಅನಂತಮೂರ್ತಿ ಜವಳಿ, ವರಕೋಡಿನ ದೇವರಾಜ ಕಾಂತಪ್ಪಗೌಡ, ಸಾಗರ ತಾಲ್ಲೂಕಿನ ಆನಂದಪುರದ ಪ್ರಕಾಶನಾಯಕ್ ಹಾಗೂ ಮಂಕಳಲೆಯ ಟಿ. ರಾಜೇಂದ್ರ ಭಟ್ಟ ಅವರಿಗೆ ಪ್ರಾಧಿಕಾರ ನೀಡಿರುವ ಪ್ರಮಾಣ ಪತ್ರ ವಿತರಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT