ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಕೂಚ್‌ ಬಿಹಾರ್‌ ಟ್ರೋಫಿ ಫೈನಲ್‌; ಪ್ರಖರ್‌, ಹರ್ಷಿಲ್‌ ಶತಕದ ಸೊಬಗು

Published 14 ಜನವರಿ 2024, 9:04 IST
Last Updated 14 ಜನವರಿ 2024, 9:04 IST
ಅಕ್ಷರ ಗಾತ್ರ

ಶಿವಮೊಗ್ಗ: ಆರಂಭಿಕ ಆಟಗಾರ ಪ್ರಖರ್‌ ಚತುರ್ವೇದಿ (ಔಟಾಗದೆ 110; 187ಎಸೆತ, 14 ಬೌಂಡರಿ) ಹಾಗೂ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಹರ್ಷಿಲ್‌ ಧರ್ಮಾನಿ (ಔಟಾಗದೆ 102; 135ಎ, 10ಬೌಂ, 4ಸಿ) ಶನಿವಾರ ಇಲ್ಲಿನ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಶತಕ ಗಳಿಸಿ ಸಂಭ್ರಮಿಸಿದರು. 

ಮುರಿಯದ ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ ಇವರು ಕಲೆ ಹಾಕಿರುವ 172ರನ್‌ಗಳ ಬಲದಿಂದ ಕರ್ನಾಟಕ ತಂಡವು ಕೂಚ್‌ ಬಿಹಾರ್‌ ಟ್ರೋಫಿ 19ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯ ಮುಂಬೈ ವಿರುದ್ಧದ ಫೈನಲ್‌ನಲ್ಲಿ ಇನಿಂಗ್ಸ್‌ ಮುನ್ನಡೆಯತ್ತ ದಾಪುಗಾಲಿಟ್ಟಿದೆ. ಆತಿಥೇಯ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 64 ಓವರ್‌ಗಳಲ್ಲಿ 1 ವಿಕೆಟ್‌ಗೆ 281ರನ್‌ ಕಲೆಹಾಕಿದೆ. ಮುಂಬೈ ತಂಡವು ಪ್ರಥಮ ಇನಿಂಗ್ಸ್‌ನಲ್ಲಿ 113.5 ಓವರ್‌ಗಳಲ್ಲಿ 380ರನ್‌ ದಾಖಲಿಸಿದೆ. 

ಕರ್ನಾಟಕದ ಪರ ಇನಿಂಗ್ಸ್‌ ಆರಂಭಿಸಿದ ಪ್ರಖರ್‌ ಹಾಗೂ ಕಾರ್ತಿಕ್‌ ಎಸ್‌.ಯು (50; 67ಎ, 4ಬೌಂ, 3ಸಿ) ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಇವರು ಮೊದಲ ವಿಕೆಟ್‌ ಜೊತೆಯಾಟದಲ್ಲಿ 144 ಎಸೆತಗಳಲ್ಲಿ 109ರನ್‌ಗಳನ್ನು ಕಲೆಹಾಕಿದರು. 24ನೇ ಓವರ್‌ ಬೌಲ್‌ ಮಾಡಿದ ಪ್ರೇಮ್‌ ದೇವ್‌ಕರ್‌ ಮೂರನೇ ಎಸೆತದಲ್ಲಿ ಕಾರ್ತಿಕ್‌ ವಿಕೆಟ್‌ ಕೆಡವಿದರು.

ನಂತರ ಒಂದಾದ ಪ್ರಖರ್‌ ಹಾಗೂ ಹರ್ಷಿಲ್‌, ಮುಂಬೈ ಬೌಲರ್‌ಗಳಿಗೆ ಸವಾಲಾದರು. ಬೌಂಡರಿ, ಸಿಕ್ಸರ್‌ಗಳ ಮೂಲಕ ಸುಂದರ ಇನಿಂಗ್ಸ್‌ ಕಟ್ಟಿದರು. ಈ ಜೊತೆಯಾಟ ಮುರಿಯಲು ಮುಂಬೈ ತಂಡದ ನಾಯಕ ಬೌಲಿಂಗ್‌ನಲ್ಲಿ ಹಲವು ಬದಲಾವಣೆಗಳನ್ನು ಮಾಡಿದರು. 7 ಮಂದಿಯನ್ನು ದಾಳಿಗಿಳಿಸಿದರೂ ವಿಕೆಟ್‌ ಉರುಳಿಸಲು ಆಗಲಿಲ್ಲ.

ಇದಕ್ಕೂ ಮುನ್ನ 6 ವಿಕೆಟ್‌ಗೆ 328ರನ್‌ಗಳಿಂದ ಶನಿವಾರ ಮೊದಲ ಇನಿಂಗ್ಸ್‌ ಮುಂದುವರಿಸಿದ ಮುಂಬೈ ತಂಡವು ಈ ಮೊತ್ತಕ್ಕೆ 52ರನ್‌ ಸೇರಿಸಿ ಆಲೌಟ್‌ ಆಯಿತು. ಆಯುಷ್‌ ಸಚಿನ್‌ ವರ್ತಕ್‌ (73; 98ಎ, 8ಬೌಂ, 2ಸಿ) ಮತ್ತು ವಿಕೆಟ್‌ ಕೀಪರ್‌ ಪ್ರತೀಕ್‌ ಯಾದವ್‌ (30; 86ಎ, 5ಬೌಂ) ತಂಡದ ಮೊತ್ತ ಹೆಚ್ಚಿಸಲು ನೆರವಾದರು.

ಕರ್ನಾಟಕದ ಪರ ಹಾರ್ದಿಕ್‌ ರಾಜ್‌ 80ರನ್‌ ನೀಡಿ 4 ವಿಕೆಟ್‌ ಉರುಳಿಸಿದರು. ಎನ್‌.ಸಮರ್ಥ್‌ (56ಕ್ಕೆ2) ಮತ್ತು ಸಮಿತ್‌ ದ್ರಾವಿಡ್‌ (60ಕ್ಕೆ2) ತಲಾ ಎರಡು ವಿಕೆಟ್‌ ಪಡೆದರು.

ಹರ್ಷಿಲ್‌ ಧರ್ಮಾನಿ
ಹರ್ಷಿಲ್‌ ಧರ್ಮಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT