ಬೀದಿ ನಾಟಕ ಆಕಾಡೆಮಿ ಸ್ಥಾಪನೆಗೆ ಆಗ್ರಹ

ಶಿವಮೊಗ್ಗ: ರಾಜ್ಯ ಸರ್ಕಾರ ಬೀದಿ ನಾಟಕ ಅಕಾಡೆಮಿ ಸ್ಥಾಪಿಸಿ, ಕಾರ್ಯಕ್ರಮ ಆರಂಭಿಸುವಂತೆ ಜಿಲ್ಲಾ ಜಾನಪದ ಸಂಗೀತ ಮತ್ತು ಬೀದಿನಾಟಕ ಕಲಾ ತಂಡಗಳ ಒಕ್ಕೂಟದ ಅಧ್ಯಕ್ಷ ಡಾ. ಗಣೇಶ್ ಆರ್. ಕೆಂಚನಾಲ್ ಒತ್ತಾಯಿಸಿದರು.
ಸರ್ಕಾರದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಇದ್ದ ಪ್ರಬಲ ಮಾಧ್ಯಮ ಬೀದಿನಾಟಕ ಮಾತ್ರ. ಆದರೆ, ಏಳೆಂಟು ತಿಂಗಳಿನಿಂದ ಬೀದಿನಾಟಕ ಹಾಗೂ ಜಾನಪದ ಸಂಗೀತ ಕಲಾವಿದರ ಬದುಕು ಬೀದಿಗೆ ಬಿದ್ದಂತಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಕೊರೊನಾ ಕಾರಣಕ್ಕೆ ಎಲ್ಲ ಪ್ರಚಾರ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿದೆ. ಇದನ್ನೇ ನಂಬಿಕೊಂಡು ಬದುಕುತ್ತಿದ್ದ ಕಲಾವಿದರು ಸಂಕಷ್ಟಕ್ಕೀಡಾಗಿದ್ದಾರೆ. ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದ್ದ ನಮಗೆ ದಿಕ್ಕೇ ತೋಚದಂತಾಗಿದೆ. ಸರ್ಕಾರ ಶೀಘ್ರ ಕಾರ್ಯಕ್ರಮಗಳನ್ನು ಆರಂಭಿಸುವ ಮೂಲಕ ಕಲಾವಿದರು ಮತ್ತು ಅವರ ಕುಟುಂಬವನ್ನು ಉಳಿಸಬೇಕು’ ಎಂದು ಮನವಿ ಮಾಡಿದರು.
ಬೀದಿನಾಟಕ ಅಕಾಡೆಮಿ ಸ್ಥಾಪಿಸಿ ಕಾರ್ಯಕ್ರಮ ಆರಂಭಿಸಬೇಕು ಎಂದು ಸರ್ಕಾರದ ಗಮನಕ್ಕೆ ತರಲಾಗಿದೆ. 40 ವರ್ಷಗಳಿಂದ ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಕಲಾವಿದರು ಬೀದಿನಾಟಕ ಮತ್ತು ಜಾನಪದ ಸಂಗೀತ ಕಾರ್ಯಕ್ರಮ ನೀಡುತ್ತಾ ಬದುಕು ಸಾಗಿಸುತ್ತಿದ್ದಾರೆ. ಈಗ ಕಾರ್ಯಕ್ರಮಗಳು ನಿಂತಿರುವುದರಿಂದ ಕಲಾವಿದರ ಬದುಕು ಬೀದಿಗೆ ಬಿದ್ದಿದೆ. ಸರ್ಕಾರ ಕೂಡಲೇ ಬೀದಿ ನಾಟಕ ಅಕಾಡೆಮಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಗೌರವಾಧ್ಯಕ್ಷ ಗುಡ್ಡಪ್ಪ ಜೋಗಿ, ‘ಕಲಾವಿದರನ್ನು ಸರ್ಕಾರ ಗುರುತಿಸಿ ಪ್ರಶಸ್ತಿಗಳನ್ನು ನೀಡಿ ಗೌರವಿಸಬೇಕು’ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ನಿರ್ದೇಶಕಿ ಲಲಿತಮ್ಮ, ತ್ರಿವೇಣಿ ಗುರುಶಾಂತಪ್ಪ, ನಾಗರಾಜ್ ತುಮರಿ, ಹರೀಶ್ ಕುಮಾರ್, ಮಂಜು ರಂಗಾಯಣ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.