ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋನಿ ಔಷಧಿ ಸೇರಿ ಹತ್ತು ಹಲವು ಬೆಳೆ, ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಯುವಕ ಯಶಸ್ಸು

Last Updated 21 ಜುಲೈ 2021, 4:37 IST
ಅಕ್ಷರ ಗಾತ್ರ

ಕೋಣಂದೂರು: ಇರುವ ಕೇವಲ ಒಂದೂವರೆ ಎಕರೆ ಕೃಷಿ ಜಮೀನಿನಲ್ಲಿ ನೂರಾರು ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿಯಲ್ಲಿ ನವೀನ ರೀತಿಯ ಪ್ರಯೋಗಗಳನ್ನು ಮಾಡುತ್ತಿರುವ ಪದವೀಧರ ಕೋಣಂದೂರಿನ ಬನಶಂಕರಿ ಗುಡ್ಡದ ನಿವಾಸಿ ಬಿ.ಆರ್.ಪ್ರದೀಪ್ ಕೃಷಿಯಿಂದ ವಿಮುಖರಾಗುತ್ತಿರುವ ಅದೆಷ್ಟೋ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.

ಅಡಿಕೆ, ತೆಂಗು, ಬಾಳೆ, ಜೀರಿಗೆ ಮೆಣಸು, ಸಂಬಾರ ಸೊಪ್ಪು, ಗಜನಿಂಬೆ, ಕಾಳುಮೆಣಸು, ಮಾವು, ಪಪ್ಪಾಯ, ನೋನಿ, ಗಸಗಸೆ, ಅರಿಶಿಣ, ಹಲಸು, ನುಗ್ಗೆ, ಬಸಳೆಸೊಪ್ಪು, ಅವರೆ, ಮೂಲಂಗಿ, ಬಿಟ್‌ರೋಟು, ಟೊಮೆಟೊ, ಸೌತೆಕಾಯಿ, ಬದನೆ ಇತ್ಯಾದಿ ಬೆಳೆಗಳನ್ನು ಸಂಪೂರ್ಣ ಸಾವಯವ ಮತ್ತು ನೈಸರ್ಗಿಕ ಕೃಷಿಯ ಮೂಲಕ ಬೆಳೆಯುವುದರೊಂದಿಗೆ ನಿರಂತರವಾಗಿ ಆದಾಯ ಗಳಿಸುವ ಯೋಜನೆ ರೂಪಿಸಿ ಯಶಸ್ವಿಯಾಗುತ್ತಿದ್ದಾರೆ.

‘ಸಂರಕ್ಷಿತ ಕೃಷಿ ಪದ್ಧತಿಯಿಂದ ಹಸಿರು ಹಾಸಿನ ಒಳಗಡೆ ತರಕಾರಿ ಗಿಡಗಳನ್ನು ಬೆಳೆಸಿ ಮನೆಗೆ ಅಗತ್ಯವಿರುವ ತರಕಾರಿ ಬೆಳೆದುಕೊಳ್ಳುತ್ತಿದ್ದೇವೆ. ಅಡುಗೆ ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ಬೆಳೆಗಳಿಗೆ ಬಳಕೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಇಮ್ಮಡಿಗೊಳ್ಳುತ್ತದೆ’ ಎನ್ನುತ್ತಾರೆ ಪ್ರದೀಪ್‌ ಅವರು.

‘ಹೈನುಗಾರಿಕೆಯಿಂದ ಜಮೀನಿಗೆ ಬೇಕಾಗುವಷ್ಟು ಗಂಜಲ, ಸಗಣಿ ಮನೆಯಲ್ಲೇ ಉತ್ಪತ್ತಿಯಾಗುತ್ತದೆ. ಮಿನಿ ಟಿಲ್ಲರ್‌ನಲ್ಲಿ ಜಮೀನಿನ ಕೆಲಸವನ್ನು ನಾವೇ ಮಾಡಿಕೊಳ್ಳುತ್ತೇವೆ. ಕಳೆ ಕೊಚ್ಚುವ ಯಂತ್ರ ಬಳಸಿ ಕಳೆ ಕಟಾವು ಮಾಡುತ್ತೇವೆ. ಕೋಳಿ, ಕುರಿ, ಮೊಲ ಸಾಕಣೆಯ ಅನುಭವ ಸಹ ಇದೆ. ಕೃಷಿಯಲ್ಲಿ ನಿರಂತರ ಕಲಿಕೆಯ ಅವಶ್ಯಕತೆ ಇದೆ. ಕೃಷಿ ಕಾಯಕಕ್ಕೆ ಕೂಲಿಯಾಳುಗಳನ್ನು ಆಶ್ರಯಿಸದೆ ಮನೆಯವರೇ ಕೃಷಿಯಲ್ಲಿ ತೊಡಗಿಕೊಳ್ಳುವುದರಿಂದ ಕೃಷಿ ಸಂತೋಷದ ಜೊತೆ ಲಾಭವನ್ನೂ ಗಳಿಸುತ್ತೇವೆ’ ಎನ್ನುವರು ಪ್ರದೀಪ್‌.

ಕೃಷಿಯನ್ನು ಒಂದು ವೃತ್ತಿಯಾಗಿ ಸ್ವೀಕರಿಸಬೇಕು. ದಿನದ 6ರಿಂದ 8 ಗಂಟೆ ಅದಕ್ಕಾಗಿ ಮೀಸಲಿಡಬೇಕು. ಆಸಕ್ತಿಯಿಂದ ಕೃಷಿಯಲ್ಲಿ ತೊಡಗಿಕೊಂಡಲ್ಲಿ ಕೃಷಿ ಎಂದಿಗೂ ನಂಬಿದವರ ಕೈ ಬಿಡುವುದಿಲ್ಲ.

- ಪ್ರದೀಪ್‌, ಯುವ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT