ಮಂಗಳವಾರ, ಜೂನ್ 22, 2021
29 °C

ಶಿವಮೊಗ್ಗ: ಇವರು ಇಂದಿಗೂ ಸಂತ್ರಸ್ತರೇ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ವರ್ಷದ ಹಿಂದೆ ತುಂಗಾ ನದಿ ಪ್ರವಾಹದಿಂದ ಸೂರು ಕಳೆದುಕೊಂಡು ಸಂತ್ರಸ್ತರಾಗಿದ್ದ ಶಿವಮೊಗ್ಗ ನಗರದ ಬಹುತೇಕ ನಾಗರಿಕರು ಇಂದಿಗೂ ಬಯಲಲ್ಲಿ ನಿಕೃಷ್ಟ ಜೀವನ ಸಾಗಿಸುತ್ತಿದ್ದಾರೆ.

ಪಾಲಿಕೆ ವ್ಯಾಪ್ತಿಯ ವಿವಿಧ ಬಡಾವಣೆಗಳ 1,355 ಮನೆಗಳಿಗೆ ಹಾನಿಯಾಗಿತ್ತು. 801 ಮನೆಗಳು ಸಂಪೂರ್ಣ ಕುಸಿದಿದ್ದವು. ಅಂದು ತಾತ್ಕಾಲಿಕ ಪರಿಹಾರವಾಗಿ ನಗರ ಪಾಲಿಕೆ ₹ 2.55 ಕೋಟಿ ಪರಿಹಾರ ಒದಗಿಸಿತ್ತು. ಸಂಪೂರ್ಣ ಹಾನಿಯಾದ ಮನೆಗಳಿಗೆ ತಲಾ ₹ 5 ಲಕ್ಷ ನೀಡಲು ತಾಲ್ಲೂಕು ಆಡಳಿತಕ್ಕೆ ಜವಾಬ್ದಾರಿ ನೀಡಲಾಗಿತ್ತು. ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಹಣಕಾಸು ಸೌಲಭ್ಯ ಒದಗಿಸಲು ಸೂಚಿಸಲಾಗಿತ್ತು.

ಸಂಪೂರ್ಣ ಕುಸಿದ ಮನೆಗಳಲ್ಲಿ ಶೇ 10ರಷ್ಟು ಮನೆಗಳೂ ಪೂರ್ಣವಾಗಿಲ್ಲ. ಕೆಲವು ಸಂತ್ರಸ್ತರಿಗೆ ₹ 1 ಲಕ್ಷ, ಕೆಲವರಿಗೆ ₹ 2 ಲಕ್ಷ ಬಂದಿದೆ. ಹಲವು ಮನೆಗಳು ಇನ್ನೂ ಬುನಾದಿಯ ಮಟ್ಟದಲ್ಲೇ ಇವೆ. ಕೆಲವರು ಅರ್ಧಂಬರ್ಧ ಗೋಡೆ ನಿರ್ಮಿಸಿಕೊಂಡಿದ್ದಾರೆ. 

ಜಿಲ್ಲೆಯ ಗ್ರಾಮೀಣ ಭಾಗದಲ್ಲೂ ಸಂಪೂರ್ಣ ಹಾನಿಯಾಗಿದ್ದ 249 ಮನೆಗಳಿಗೆ ₹ 5 ಲಕ್ಷ ಪರಿಹಾರ ದೊರಕಿಲ್ಲ. ಭಾಗಶಃ ಹಾನಿಯಾಗಿದ್ದ 588 ಮನೆಗಳಿಗೆ ತಲಾ ₹ 50 ಸಾವಿರ ಪರಿಹಾರ ನೀಡಲಾಗಿದೆ.

538 ಶಾಲೆಗಳಿಗೆ ಹಾನಿ: ಪಾಲಿಕೆಯ 87 ಶಾಲೆಗಳೂ ಸೇರಿ ಜಿಲ್ಲೆಯಲ್ಲಿ 538 ಪ್ರಾಥಮಿಕ, ಪ್ರೌಢಶಾಲೆಯ ಕಟ್ಟಡಗಳು ಶಿಥಿಲಗೊಂಡಿದ್ದವು. ಅವುಗಳ ದುರಸ್ತಿಗೆ ₹ 56.76 ಕೋಟಿ ಬಿಡುಗಡೆ ಮಾಡುವಂತೆ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ನಗರದ ಶಾಲೆಗಳಿಗೆ ₹ 15 ಕೋಟಿ ಅನುದಾನ ಸಿಕ್ಕಿದೆ. ಗ್ರಾಮೀಣ ಭಾಗದ  50ರಷ್ಟು ಶಾಲೆಗಳು ದುರಸ್ತಿ ಕಂಡಿಲ್ಲ.

300 ಕಾಲು ಸಂಕಗಳಿಗೆ ಬೇಡಿಕೆ: 274 ಕಾಲುಸಂಕಗಳನ್ನು ನಿರ್ಮಿಸಲು ₹ 14.39 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾ ಪಂಚಾಯಿತಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಉದ್ಯೋಗ ಖಾತ್ರಿ ಹಾಗೂ 14ನೇ ಹಣಕಾಸು ನಿಧಿ ಬಳಸಿಕೊಂಡು 150ಕ್ಕೂ ಹೆಚ್ಚು ಸಂಕಗಳನ್ನು ನಿರ್ಮಿಸಲಾಗಿದೆ. ಇನ್ನೂ 300 ಸಂಕಗಳಿಗೆ ಬೇಡಿಕೆಯಿದೆ.

*
ವರ್ಷದ ಹಿಂದೆ ಮನೆ ಕುಸಿದಿದೆ. ಇದುವರೆಗೂ ಪರಿಹಾರ ನೀಡಿಲ್ಲ. ಸುತ್ತಲೂ ಪ್ಲಾಸ್ಟಿಕ್ ಕವರ್ ಕಟ್ಟಿಕೊಂಡು ಜೀವನ ನಡೆಸುತ್ತಿದ್ದೇವೆ. -ಯಲ್ಲಮ್ಮ, ರಾಜೀವ್‌ಗಾಂಧಿ ಬಡಾವಣೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು