ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆಗೆ ವೈದ್ಯರು ಗೈರು: ಈಶ್ವರಪ್ಪ ಗರಂ

ಗೈರಾದ ವೈದ್ಯರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ತಾಕೀತು
Last Updated 4 ಮೇ 2021, 4:59 IST
ಅಕ್ಷರ ಗಾತ್ರ

ಶಿವಮೊಗ್ಗ: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕರೆಯಲಾಗಿದ್ದ ಮಹ್ವತದ ಸಭೆಗೆ ವೈದ್ಯರು ಗೈರು ಹಾಜರಾಗಿರುವುದನ್ನು ಕಂಡ ಸಚಿವ ಕೆ.ಎಸ್.ಈಶ್ವರಪ್ಪ ಗರಂ ಆದರು. ಸಭೆಗೆ ಗೈರಾದ ವೈದ್ಯರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿದೆ. ಈ ನಿಟ್ಟಿನಲ್ಲಿ ಸೋಂಕು ನಿಯಂತ್ರಣ ಕುರಿತು ಸೋಮವಾರ ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಸಿಮ್ಸ್ ಆಡಳಿತಾಧಿಕಾರಿಗಳು, ವೈದ್ಯಾಧಿಕಾರಿಗಳೊಂದಿಗೆ ಸಚಿವರು ಸಮಾಲೋಚನೆ ಸಭೆ ನಡೆಸಿದರು.

‘ಸೋಂಕು ನಿಯಂತ್ರಿಸುವಲ್ಲಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಆರೋಗ್ಯ ಇಲಾಖೆಯ ಸಮಸ್ತ ಸಿಬ್ಬಂದಿಯೊಂದಿಗೆ ಹಗಲಿರುಳು ಶ್ರಮಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ತನೆ ಅಕ್ಷಮ್ಯ. ಮಹತ್ವದ ಸಭೆಗೆ ಗೈರು ಹಾಜರಾಗಿರುವ ವೈದ್ಯರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ’ ಎಂದು ಈಶ್ವರಪ್ಪ ಸಿಮ್ಸ್ ಆಡಳಿತಾಧಿಕಾರಿಗಳಿಗೆ ತಿಳಿಸಿದರು.

ಪಾಳಿ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುವ ಡಿ ಗ್ರೂಪ್‌, ನರ್ಸ್ ಮತ್ತು ಇತರೆ ವಿಭಾಗಗಳ ಸಿಬ್ಬಂದಿ ಹಾಜರಾತಿಯನ್ನು ಸಂಬಂಧಿಸಿದ ಅಧಿಕಾರಿಗಳು ಗಮನಿಸಬೇಕು. ಸಕಾಲದಲ್ಲಿ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು. ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ, ಲಭ್ಯವಿರುವ ಲಸಿಕೆ, ಹಾಸಿಗೆಗಳು, ಕೊರೊನ ಹೊರತುಪಡಿಸಿ ಇತರೆ ಕಾಯಿಲೆಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಕಡಿಮೆ ಬೆಲೆಗೆ ಪಿಪಿಇ ಕಿಟ್ ನೀಡಿ: ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ‘ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ಕೋವಿಡ್ ಸೋಂಕಿತರನ್ನು ನೋಡಲು ಬರುವ ಸಂಬಂಧಿಕರು ಪಿಪಿಇ ಕಿಟ್ ಧರಿಸುವುದು ಕಡ್ಡಾಯವಾಗಿದೆ. ದಿನಕ್ಕೆ 3ರಿಂದ 4 ಬಾರಿ ರೋಗಿಯನ್ನು ಸಂದರ್ಶಿಸುವ ವ್ಯಕ್ತಿ ಪ್ರತಿ ಬಾರಿಯೂ ಪಿಪಿಎ ಕಿಟ್ ಹೊಸದನ್ನು ಖರೀದಿಸಿ ಧರಿಸುವುದು ಅಸಾಧ್ಯವಾಗಿದೆ. ಒಮ್ಮೆ ಬಳಕೆ ಆದ ಕಿಟ್‍ಗಳೇ ಮತ್ತೆಮತ್ತೆ ಬಳಸುತ್ತಿದ್ದಾರೆ. ಇದರಿಂದಾಗಿ ಸೋಂಕು ಹರಡುವ ಆತಂಕವಿದೆ. ಆದ್ದರಿಂದ ಸಾರ್ವಜನಿಕರಿಗೆ ಪಿ‍ಪಿಇ ಕಿಟ್‌ಗಳು ಕಡಿಮೆ ಬೆಲೆಯಲ್ಲಿ ಸಿಗುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಆರ್ಯವೈಶ್ಯ ಅಭಿವೃದ್ಧಿ ನಿಗಮದ ರಾಜ್ಯ ಅಧ್ಯಕ್ಷ ಡಿ.ಎಸ್.ಅರುಣ್, ಸಿಮ್ಸ್ ಆಡಳಿತಾಧಿಕಾರಿ ಡಾ.ಎಸ್.ಒ.ಸಿದ್ದಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ, ಜಿಲ್ಲಾ ಸರ್ಜನ್ ಡಾ. ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT