ಗುರುವಾರ , ಜುಲೈ 7, 2022
23 °C
ಕಳೆಗಟ್ಟಿದ ದೇವಿಯ ತವರು ಗಾಂಧಿ ಬಜಾರ್

ಮಾರಿಕಾಂಬಾ ಜಾತ್ರೆಗೆ ವೈಭವದ ಚಾಲನೆ: ದರ್ಶನಕ್ಕೆ ಮೈಲುಗಟ್ಟಲೆ ಸರದಿ ಸಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ತುಂತುರು ಮಳೆಯ ಮಧ್ಯೆ ಮಂಗಳವಾರ ಕೋಟೆ ಮಾರಿಕಾಂಬಾ ದೇವಿಯ ಜಾತ್ರೆ ವೈಭವದಿಂದ ಆರಂಭವಾಯಿತು.

ಐದು ದಿನಗಳು ನಡೆಯುವ ಜಾತ್ರೆಯ ಮೊದಲ ದಿನ ಮಂಗಳವಾರ ಮುಂಜಾನೆ ಮಾರಿಕಾಂಬೆಗೆ ಬ್ರಾಹ್ಮಣ, ನಾಡಿಗರ ಮನೆಯಲ್ಲಿ ಪೂಜೆ ನೆರವೇರಿತು. ನಂತರ ಮಂಗಳವಾದ್ಯದೊಂದಿಗೆ ತವರು ಮನೆ ಗಾಂಧಿ ಬಜಾರ್‌ಗೆ ಕರೆತರಲಾಯಿತು. ತುಂತುರು ಮಳೆಯ ಮಧ್ಯೆಯೂ ಸಾವಿರಾರು ಜನರು ಕಿಲೋ ಮೀಟರ್‌ಗೂ ಹೆಚ್ಚು ಉದ್ದದ ಸರದಿ ಸಾಲಿನಲ್ಲಿ ನಿಂತು ಶಕ್ತಿ ದೇವತೆ ಮಾರಿಕಾಂಬೆಯ ದರ್ಶನ ಪಡೆದರು. ದೇವಿಗೆ ಹರಕೆ ತೀರಿಸಿದರು. 

ದೇವಿಯ ದರ್ಶನ ಪಡೆಯಲು ಭಕ್ತರು ಮುಂಜಾನೆ ಎರಡು ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದರು. ದೇವಿಗೆ ಸೀರೆ, ಅರಿಸಿಣ, ಕುಂಕುಮ, ಬಳೆ, ಕಣ ಮೊದಲಾದ ಹರಕೆ ತೀರಿಸಿದರು. ದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಮೇರೆ ಮೀರಿದ ಉತ್ಸಾಹ, ಸಂಭ್ರಮ ಗಾಂಧಿ ಬಜಾರ್‌ನಲ್ಲಿ ಮನೆ ಮಾಡಿತ್ತು.

ಬ್ರಾಹ್ಮಣ, ನಾಡಿಗರ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದ ನಂತರ ನಂತರ ಗಾಂಧಿ ಬಜಾರ್‌ನಲ್ಲಿ ವಿಶ್ವಕರ್ಮ ಜನಾಂಗದವರು ಪೂಜೆ ನೆರವೇರಿಸಿದರು. ಭಕ್ತರು ದೇವಿಯ ದರ್ಶನ ಪಡೆಯಲು ಅನುಕೂಲವಾಗುವಂತೆ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಚಿಕ್ಕಮಕ್ಕಳನ್ನು ದೇವಿಯ ಮಡಿಲಿಗೆ ಕೊಟ್ಟು ವಾಪಸ್ ಪಡೆದುಕೊಳ್ಳುತ್ತಿದ್ದರು. ಸರದಿ ಸಾಲಿನಲ್ಲಿ ನಿಂತ ಭಕ್ತರಿಗೆ ನೀರು, ಮಜ್ಜಿಗೆ, ಪುಲಾವ್, ತಂಪು ಪಾನೀಯಗಳನ್ನು ವಿವಿಧ ಸಂಘಟನೆಗಳ ಪದಾಧಿಕಾರಿಗಳು ವಿತರಿಸಿದರು.

ಬೇವಿನ ಸೊಪ್ಪು ತಂದು ದೇವಿ ಹೆಸರಲ್ಲಿ ಕಳಶವಿಟ್ಟು ಪೂಜೆ ಮಾಡಿದರು. ಸಾಮಾನ್ಯವಾಗಿ ಎಲ್ಲರೂ ಹೋಳಿಗೆ, ಪಾಯಸದ ತಯಾರಿಯಲ್ಲಿದ್ದರು. ಬಸ್ ನಿಲ್ದಾಣಗಳ ಜನ ಜಂಗುಳಿ ಹೆಚ್ಚಿತ್ತು. ಸುರಕ್ಷತೆ ದೃಷ್ಟಿಯಿಂದ ಗಾಂಧಿ ಬಜಾರ್, ಕೋಟೆ ಮಾರಿಕಾಂಬ ದೇವಾಲಯ ಸೇರುವ ಸಮರ್ಪಕ ರಸ್ತೆಗಳಲ್ಲಿ ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು. ಕೆಲವು ರಸ್ತೆಗಳಲ್ಲಿ ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿತ್ತು.

1978ರಲ್ಲಿ ಮಾರಿಕಾಂಬಾ ಸೇವಾ ಸಮಿತಿ ರಚನೆಯಾದ ಮೇಲೆ ಕೋಟೆ ರಸ್ತೆಯಲ್ಲಿ ಭವ್ಯವಾದ ದೇವಾಲಯ ನಿರ್ಮಿಸಲಾಗಿದೆ. ವಿಶ್ವಕರ್ಮ ಸಮುದಾಯದವರು ದೇವಿಯ ವಿಗ್ರಹವನ್ನು ನಿರ್ದಿಷ್ಟ ಪಡಿಸಿದ ಮರದಲ್ಲಿ ನಿರ್ಮಿಸಿ, ಅದನ್ನು ಪೂಜಿಸಿದ ನಂತರವೇ ಸಾರ್ವಜನಿಕರ ಪೂಜೆಗೆ ಅವಕಾಶ ಕಲ್ಪಿಸಿಕೊಡುತ್ತಿದ್ದರು ಎಂಬ ವಾಡಿಕೆಯಿದ್ದರೂ, ನಾಡಿಗರ (ಬ್ರಾಹ್ಮಣ) ಮನೆತನದವರು ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಿ, ಮಂಗಳ ದ್ರವ್ಯ ತಂದು, ಉಡಿತುಂಬಿ ಪ್ರಥಮ ಪೂಜೆಯನ್ನು ಮಾಡುತ್ತಿದ್ದರು. ನಂತರ ಮಾರಿಕಾಂಬೆಯ ವಿಗ್ರಹವನ್ನು ನಿರ್ಮಿಸಿದ ವಿಶ್ವಕರ್ಮ ಜನಾಂಗದವರು ದೇವಿಯನ್ನು ಪೂಜಿಸುವ ಪದ್ಧತಿ ಬೆಳೆದು ಬಂದಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು