ಭಾನುವಾರ, ಸೆಪ್ಟೆಂಬರ್ 20, 2020
21 °C

ಶಿವಮೊಗ್ಗ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ‘ಕಾರ್ಪೊರೇಟ್ ಕಂಪನಿಗಳೇ ಕೃಷಿ ಕ್ಷೇತ್ರ ಬಿಟ್ಟು ತೊಲಗಿ’ ಎಂಬ ಘೋಷಣೆಯೊಂದಿಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನೇ ಖಾಸಗಿ ಬಂಡವಾಳದಾರರಿಗೆ, ಕಾರ್ಪೊರೇಟ್ ಕಂಪನಿಗಳಿಗೆ ಒತ್ತೆ ಇಟ್ಟಿದ್ದಾರೆ. ದೇಶದ ಜನರನ್ನು ಮತ್ತೊಮ್ಮೆ ಗುಲಾಮಗಿರಿಗೆ ತಳ್ಳುತ್ತಿದ್ದಾರೆ. ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದಾರೆ. ರೈತರ ಭೂಮಿಯನ್ನು ಕಸಿದುಕೊಂಡು ಹೊರದಬ್ಬುವ ಕಾರ್ಯ ನಡೆದಿದೆ ಎಂದು ಆರೋಪಿಸಿದರು.

1961ರಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದ ನಂತರ ಕೃಷಿಗೆ ಹೆಚ್ಚಿನ ಭೂಮಿ ಮೀಸಲಾಗಿತ್ತು. 1974ರಲ್ಲಿ ಭೂಸುಧಾರಣಾ ನೀತಿಗಳು ಮತ್ತಷ್ಟು ಬದಲಾವಣೆಗೊಂಡು ಜಾರಿಗೆ ಬಂದವು. ಕೃಷಿಗೆ ಭೂಮಿ ಬಳಕೆಯಾಗಬೇಕು. ವ್ಯವಹಾರಿಕ ಉದ್ದೇಶಗಳಿಗೆ ಬಳಕೆಯಾಗಬಾರದು ಎಂದು ಭೂಮಿ ರಕ್ಷಣೆ ಜವಾಬ್ದಾರಿ ರೈತರಿಗೆ ನೀಡಲಾಗಿತ್ತು. ರಾಜ್ಯ ಸರ್ಕಾರ ಈಗ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ರೈತರನ್ನೇ ಕೃಷಿಯಿಂದ ಹೊರಹಾಕುತ್ತಿದೆ ಎಂದು ದೂರಿದರು.

2003ರಲ್ಲಿ ವಿದ್ಯುತ್ ಕ್ಷೇತ್ರ ಖಾಸಗಿ ಒಡೆತನಕ್ಕೆ ವಹಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಈಗ ವಿದ್ಯುತ್ ಉತ್ಪಾದನೆ ಮತ್ತು ವಿತರಣೆ  ಹೊಣೆ ಖಾಸಗಿಯವರಿಗೆ ವಹಿಸಲು ಸುಗ್ರಿವಾಜ್ಞೆ ಹೊರಡಿಸಲಾಗಿದೆ. ರೈತರ ಪಂಪ್‌ಸೆಟ್‌ಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್ ಸ್ಥಗಿತ ಮಾಡಲಾಗುತ್ತದೆ. ಸಾಲದ ಸುಳಿಗೆ ರೈತರನ್ನು ಸಿಲುಕಿಸಿ, ಕೃಷಿ ಕ್ಷೇತ್ರ ತೊರೆಯುವಂತೆ ಮಾಡಲಾಗುತ್ತಿದೆ ಎಂದರು. 

ಕೇಂದ್ರದ ನಿರ್ದೇಶನದಂತೆ ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ಸುಗ್ರಿವಾಜ್ಞೆ ತಂದಿದೆ. ಅಗತ್ಯ ವಸ್ತು ಕಾಯ್ದೆಯಿಂದ ಹಲವು ಉತ್ಪನ್ನಗಳನ್ನು ಕೈಬಿಡಲಾಗಿದೆ. ಕಂಪನಿಗಳು ಮಾಡುವ ದಾಸ್ತಾನು ಮಾರುಕಟ್ಟೆ ಸರಕಾಗಿದೆ. ತಕ್ಷಣ ಇಂತಹ ಎಲ್ಲ ರೈತ ವಿರೋಧಿ ನಿಲುವುಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.

ಅಖಿಲ ಭಾರತ ರೈತ ಸಮನ್ವಯ ಸಮಿತಿ ನೀಡಿದ್ದ ಕರೆಯ ಮೇರೆಗೆ ಹಮ್ಮಿಕೊಂಡಿದ್ದ ಈ ಪ್ರತಿಭಟನೆಯ ನೇತೃತ್ವವನ್ನು ಸಂಘದ ಗೌರವಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಮುಖಂಡರಾದ ಎಸ್.ಶಿವಮೂರ್ತಿ, ಇ.ಬಿ.ಜಗದೀಶ್, ಹಿಟ್ಟೂರು ರಾಜು, ಕೆ.ರಾಘವೇಂದ್ರ, ಸಿ.ಚಂದ್ರಪ್ಪ, ರಾಮಚಂದ್ರಪ್ಪ, ಪಿ.ಡಿ.ಮಂಜಪ್ಪ, ಜ್ಞಾನೇಶ್, ಜಿ.ಎನ್.ಪಂಚಾಕ್ಷರಿ, ಎಚ್.ಇ. ಗಂಗಾಧರಪ್ಪ ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು