ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡೂ ಕಡೆ ಬಿಜೆಪಿ ಸರ್ಕಾರವಿದ್ದರೂ ಜೀವಕ್ಕೆ ಬೆಲೆ ಇಲ್ಲ: ಹರ್ಷನ ಸಹೋದರಿ ಅಶ್ವಿನಿ

Last Updated 26 ಅಕ್ಟೋಬರ್ 2022, 5:22 IST
ಅಕ್ಷರ ಗಾತ್ರ

ಶಿವಮೊಗ್ಗ: ಈಚೆಗೆ ಹತ್ಯೆಯಾಗಿದ್ದ ಬಜರಂಗದಳದ ಕಾರ್ಯಕರ್ತ ಹರ್ಷನ ಕುಟುಂಬದವರಿಗೆ ಗುಂಪೊಂದು ಜೀವಬೆದರಿಕೆ ಹಾಕಿದೆ ಎಂದು ತಿಳಿದುಬಂದಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹರ್ಷನ ಸಹೋದರಿ ಅಶ್ವಿನಿ, ‘ಸೀಗೆಹಟ್ಟಿಯಲ್ಲಿನ ನಮ್ಮ ಮನೆಯ ಬಳಿ ಬಂದಿದ್ದ ಗುಂಪೊಂದು ಕೂಗಾಡಿ ಬೆದರಿಕೆ ಹಾಕಿದೆ.ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರ ಇದ್ದರೂ ನಮ್ಮ ಜೀವಕ್ಕೆ ಬೆಲೆ ಇಲ್ಲವಾಗಿದೆ’ ಎಂದು ಅಳಲು ತೋಡಿಕೊಂಡಿದ್ದಾರೆ.

‘ನಾವು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಗೃಹ ಸಚಿವರು ನಮ್ಮ ಜಿಲ್ಲೆಯವರೇ ಆಗಿದ್ದರೂ ನಮಗೆ ರಕ್ಷಣೆ ಯಾವಾಗ ಸಿಗುತ್ತದೆ’ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಮೆಗ್ಗಾನ್ ಆಸ್ಪತ್ರೆಗೆ ತೆರಳಿದ್ದ ಅಶ್ವಿನಿ, ಗುಂಪಿನಿಂದ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಪ್ರಕಾಶ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

‘ಆಜಾದ್‌ ನಗರದಲ್ಲಿ ನಡೆದ ಕಾರು ಜಖಂ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಾದರೂ ಅಶ್ವಿನಿ ವಿರುದ್ಧ ಕ್ರಮ ಕೈಗೊಂಡಿಲ್ಲ. ಅವರು ಸಾರ್ವಜನಿಕವಾಗಿ ಓಡಾಡಿಕೊಂಡೇ ಇದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮುಸ್ಲಿಂ ಮುಖಂಡರೊಬ್ಬರು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಎಸ್‌.ಪಿ, ‘ಪ್ರಕರಣಗಳ ಗಂಭೀರತೆ ಆಧರಿಸಿ ತಪ್ಪು ಮಾಡಿದ ಎಲ್ಲರ ವಿರುದ್ಧವೂ ನಿಶ್ಚಿತವಾಗಿ ಕ್ರಮ ಕೈಗೊಳ್ಳುತ್ತೇವೆ’ ಎಂದರು.

‘ಗೂಂಡಗಳಿಗೆ ಪೊಲೀಸರು, ಸರ್ಕಾರದ ಭಯ ಇಲ್ಲದಂತಾಗಿದೆ’
ಕೆಲವು ಮುಸ್ಲಿಂ ಗೂಂಡಾಗಳಿಗೆ ಸರ್ಕಾರ ಮತ್ತು ಪೊಲೀಸರ ಭಯ ಇಲ್ಲದಂತಾಗಿದೆ. ಶಿವಮೊಗ್ಗದಲ್ಲಿ ಪಿಎಫ್‌ಐ ಸಂಘಟನೆ ಇನ್ನೂ ಜೀವಂತವಾಗಿದೆಯೇ ಎಂಬುದನ್ನು ಪೊಲೀಸರು ಪತ್ತೆ ಮಾಡಬೇಕಿದೆ ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ಕಿಡಿಕಾರಿದ್ದಾರೆ.

ನಗರದಲ್ಲಿ ನಡೆದ ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಹಲ್ಲೆಯನ್ನು ಯಾರು ಮಾಡಿದ್ದಾರೆ ಎಂಬುದು ತನಿಖೆಯಿಂದ ಹೊರಬರಬೇಕು ಎಂದರು.

**
ಸಾರ್ವಜನಿಕರಲ್ಲಿ ಆತಂಕ ಬೇಡ. ಸೂಕ್ಷ್ಮ ಪ್ರದೇಶಗಳಲ್ಲಿ ನಿಗಾ ಇರಿಸಿದ್ದೇವೆ. ಬೆಳಗಿನಜಾವ ಹಾಗೂ ತಡರಾತ್ರಿ ಪೊಲೀಸರ ಗಸ್ತು ಹೆಚ್ಚಿಸಲಾಗಿದೆ.
–ಜಿ.ಕೆ. ಮಿಥುನ್‌ಕುಮಾರ್‌, ಶಿವಮೊಗ್ಗ ಎಸ್‌.ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT