ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಗಲಭೆ: ಸಿಬ್ಬಂದಿ ಕೊರತೆ, ಬಳಲಿದ ಗುಪ್ತ ದಳ

‘ಕೋಮು ಸೂಕ್ಷ್ಮ’ ಶಿವಮೊಗ್ಗ ಗಲಭೆ
Last Updated 17 ಆಗಸ್ಟ್ 2022, 5:22 IST
ಅಕ್ಷರ ಗಾತ್ರ

ಶಿವಮೊಗ್ಗ: ಅಂದಾಜು 18 ಕಿ.ಮೀ ವ್ಯಾಪ್ತಿ, 3.20 ಲಕ್ಷ ಜನಸಂಖ್ಯೆ ಹೊಂದಿರುವ, ‘ಕೋಮು ಸೂಕ್ಷ್ಮ’ ಪ್ರದೇಶ ಶಿವಮೊಗ್ಗದಲ್ಲಿ ಗುಪ್ತಚರ ಇಲಾಖೆಯಲ್ಲಿ ದೈನಂದಿನ ಕಾರ್ಯ ನಿರ್ವಹಣೆಗೆ ಒಬ್ಬರು ಹೆಡ್‌ ಕಾನ್‌ಸ್ಟೆಬಲ್ ದರ್ಜೆಯ ಸಿಬ್ಬಂದಿ ಮಾತ್ರ ಇದ್ದಾರೆ. ವಿಶೇಷವೆಂದರೆ, ಜಿಲ್ಲಾ ಮುಖ್ಯಸ್ಥರ (ಡಿವೈಎಸ್ಪಿ ದರ್ಜೆ) ಹುದ್ದೆಯೂ ಖಾಲಿ ಇದೆ. ಚಿಕ್ಕಮಗಳೂರಿನ ಅಧಿಕಾರಿಗೆ ಹೆಚ್ಚುವರಿ ಹೊಣೆ ವಹಿಸಲಾಗಿದೆ.

ಫ್ಲೆಕ್ಸ್ ಅಳವಡಿಕೆ ವಿಚಾರದಲ್ಲಿ ಸೋಮವಾರ ನಗರದಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿಯ ಹಿಂದೆ ಗುಪ್ತಚರ ದಳದ ವೈಫಲ್ಯವೂ ಎದ್ದುಕಾಣುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.

ಕೋಮು ಗಲಭೆ ಮರುಕಳಿಸುವುದರಿಂದ ಕರಾವಳಿ ಭಾಗವನ್ನು ಹೊರತುಪಡಿಸಿ ರಾಜ್ಯದಲ್ಲಿಯೇ ಅತ್ಯಂತ ‘ಕೋಮು ಸೂಕ್ಷ್ಮ’ ಪ್ರದೇಶವೆಂದು ಶಿವಮೊಗ್ಗವನ್ನು ಗೃಹ ಇಲಾಖೆ ಗುರುತಿಸಿದೆ. ಕಾಲಕಾಲಕ್ಕೆ ಗುಪ್ತಚರ ದಳದ ಸಿಬ್ಬಂದಿ ಒದಗಿಸುವ ಮಾಹಿತಿಯೂ ಪೊಲೀಸ್ ಇಲಾಖೆಗೆ ಬಲ ನೀಡುತ್ತದೆ. ಆದರೆ, ಅಗತ್ಯ ಸಿಬ್ಬಂದಿ ಇಲ್ಲದ್ದರಿಂದ ಗುಪ್ತಚರ ದಳ ಬಹುತೇಕ ನಿಷ್ಕ್ರಿಯಗೊಂಡಿದೆ.

ಹುದ್ದೆಗಳ ಕಡಿತ: ಜಿಲ್ಲೆಯ ಏಳು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ತಲಾ ಒಬ್ಬರು ಹೆಡ್‌ ಕಾನ್‌ಸ್ಟೆಬಲ್, ಮೂವರು ಎಎಸ್‌ಐ, ಇಬ್ಬರು ಪಿಎಸ್‌ಐ, ಚಾಲಕ ಸೇರಿದಂತೆ ಈಗ 16 ಸಿಬ್ಬಂದಿ ಈಗ ಇದ್ದಾರೆ.

‘ಈ ಮೊದಲು ಜಿಲ್ಲೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿ 40 ಮಂದಿ ಕಾರ್ಯ ನಿರ್ವಹಿಸುತ್ತಿದ್ದರು. 2016ರ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಫ್ಯಾಕ್ಟರಿ ನೌಕರರು ದಿಢೀರ್ ಪ್ರತಿಭಟನೆ ನಡೆಸಿದ ಸಂದರ್ಭ ಸಿಬ್ಬಂದಿ ಕೊರತೆಯ ಕಾರಣ ನೀಡಿ ಇಲ್ಲಿನವರನ್ನು ಅಲ್ಲಿಗೆ ವರ್ಗಾಯಿಸಲಾಯಿತು‘ ಎಂದು ಶಿವಮೊಗ್ಗದ ಗುಪ್ತಚರ ದಳದ ಸಿಬ್ಬಂದಿ ಯೊಬ್ಬರು ಹೇಳುತ್ತಾರೆ.

‘ನೈಸರ್ಗಿಕ ವಿಕೋಪ, ರಾಜಕೀಯ ಬೆಳವಣಿಗೆ, ಕೋಮು ಸೂಕ್ಷ್ಮ ಸಂಗತಿಗಳು, ಪ್ರತಿಭಟನೆ, ರೌಡಿಸಂ, ವಿಚ್ಛಿದ್ರಕಾರಿ ಚಟುವಟಿಕೆ, ನಕ್ಸಲ್ ಚಟುವಟಿಕೆ, ಅಪಘಾತ, ದೈನಂದಿನ ವಿದ್ಯಮಾನಗಳ ಬಗ್ಗೆ ಅಗತ್ಯ ಮಾಹಿತಿ ಸಂಗ್ರಹಿಸಿ ಮೇಲಿನವರಿಗೆ ವರದಿ ಕಳುಹಿಸಬೇಕು. ಆದರೆ, ಅದು ಹೊರೆಯಾಗಿ ಪರಿಣಮಿಸಿದೆ’ ಎಂದು ಅಳಲು ಅವರು ತೋಡಿಕೊಳ್ಳುತ್ತಾರೆ.

‘ಶಿವಮೊಗ್ಗ ನಗರದ ಗುಪ್ತಚರ ಮಾಹಿತಿ ಸಂಗ್ರಹಿಸಲು ಇನ್ನೂ ಕನಿಷ್ಠ 10 ಸಿಬ್ಬಂದಿ ಬೇಕು. ಇತ್ತೀಚೆಗೆ ಹರ್ಷನ ಕೊಲೆ ನಡೆದ ಸಂದರ್ಭ ಶಿವಮೊಗ್ಗಕ್ಕೆ ಬಂದಿದ್ದ ಗುಪ್ತಚರ ದಳದಎಡಿಜಿಪಿ, ಹೆಚ್ಚಿನ ಸಿಬ್ಬಂದಿ ನೇಮಿಸುವ ಭರವಸೆ ನೀಡಿದ್ದರಾದರೂ ಈವರೆಗೆ ಈಡೇರಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಪ್ರತ್ಯೇಕ ನೇಮಕಾತಿ ವ್ಯವಸ್ಥೆ: ಆರಗ ಪೊಲೀಸರನ್ನು ಗುಪ್ತಚರ ದಳಕ್ಕೆ ವರ್ಗಾಯಿಸಿದರೆ ಅಲ್ಲಿಗೆ ಹೋಗುತ್ತಿಲ್ಲ. ಹೋದರೂ ಬೇರೆಡೆಗೆ ಹೋಗುವ ಪ್ರಯತ್ನದಲ್ಲಿಯೇ ಇರುತ್ತಾರೆ. ಹೀಗಾಗಿ, ಗುಪ್ತಚರ ದಳಕ್ಕೆ ಪ್ರತ್ಯೇಕ ನೇಮಕಾತಿ ವ್ಯವಸ್ಥೆ ಮಾಡಿ ಹೆಚ್ಚಿನ ಅಧಿಕಾರಿ, ಸಿಬ್ಬಂದಿ ನೇಮಿಸಿ ಅವರಿಗೆ ವಿಶೇಷ ತರಬೇತಿ ನೀಡಲಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದರು.

*
ಎರಡು ದಿನಗಳ ಹಿಂದಷ್ಟೇ ಸಿಟಿ ಸೆಂಟ್ರಲ್ ಮಾಲ್‌ನಲ್ಲಿ ಸಾವರ್ಕರ್ ಭಾವಚಿತ್ರ ವಿಚಾರದಲ್ಲಿ ವಿವಾದ ಉಂಟಾಗಿತ್ತು. ಆಗಲೇ ಗುಪ್ತಚರ ದಳದವರು ಎಚ್ಚೆತ್ತುಕೊಂಡಿದ್ದರೆ ನಗರದಲ್ಲಿ ಫ್ಲೆಕ್ಸ್ ಗಲಾಟೆ ಮರುಕಳಿಸುತ್ತಿರಲಿಲ್ಲ
-ಕೆ.ಪಿ.ಶ್ರೀಪಾಲ್, ಶಿವಮೊಗ್ಗ ಲಾಯರ್ಸ್ ಗಿಲ್ಡ್ ಅಧ್ಯಕ್ಷ

*
ಶಿವಮೊಗ್ಗ ಅತ್ಯಂತ ಕೋಮು ಸೂಕ್ಷ್ಮಪ್ರದೇಶ. ಇಲ್ಲಿಗೆ ಹೆಚ್ಚಿನ ಸಿಬ್ಬಂದಿ ಅಗತ್ಯವಿದೆ. ಗುಪ್ತಚರ ದಳ ನೇರವಾಗಿ ಸಿಎಂ ವ್ಯಾಪ್ತಿಗೆ ಬರಲಿದೆ. ಅವರೊಂದಿಗೆ ಚರ್ಚಿಸಿ ನೇಮಕಕ್ಕೆ ಕ್ರಮ ವಹಿಸುವೆ.
-ಆರಗ ಜ್ಞಾನೇಂದ್ರ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT