ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೋಟ 2021: ಯಡಿಯೂರಪ್ಪ ರಾಜೀನಾಮೆಯ ಬೇಸರ, ಮಳೆಯ ಅವಾಂತರ

ಖುಷಿಯ ಸಂಗತಿಗಳಿಗಿಂತ ಸಮಸ್ಯೆಗಳ ಸರಮಾಲೆಯೇ ಅಧಿಕ
Last Updated 31 ಡಿಸೆಂಬರ್ 2021, 7:15 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯ ಜನರಿಗೆ 2021 ಖುಷಿಗಿಂತ ಬೇಸರವನ್ನೇ ಹೆಚ್ಚು ನೀಡಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್‌. ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ್ದು, ಅಕಾಲಿಕ ಮಳೆಯಿಂದ ರೈತರು ಸಂಕಷ್ಟ ಅನುಭವಿಸಿದ್ದು ವರ್ಷದ ನೋವಿನ ಸಂಗತಿಗಳು.

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮೊದಲ ಬಾರಿ ಸಚಿವನಾಗಿ, ಅದರಲ್ಲೂ ಗೃಹ ಸಚಿವ ಸ್ಥಾನ ಅಲಂಕರಿಸಿದ್ದು, ಕೊರೊನಾ ಮೂರನೇ ಅಲೆ ದೂರವಾದುದು, ಸುದೀರ್ಘ ಅವಧಿಯ ನಂತರ ಕೊನೆಗೂ ಶಾಲೆ, ಕಾಲೇಜುಗಳು ಪುನರಾರಂಭವಾಗಿರುವುದು ಜನರಿಗೆ ನಿಮ್ಮದಿ ನೀಡಿದ ಸಂಗತಿಗಳು.

ಮುಖ್ಯಮಂತ್ರಿ ಸ್ಥಾನಕ್ಕೆ ಜುಲೈ 26ರಂದು ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದರು. ಅಂದು ರಾಜೀನಾಮೆ ನೀಡುತ್ತಿದ್ದಂತೆ ಶಿಕಾರಿಪುರ ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು. ವರ್ತಕರು ಅಂಗಡಿಗಳನ್ನು ಬಂದ್ ಮಾಡುವ ಮೂಲಕ ತಮ್ಮ ನಾಯಕನ ರಾಜೀನಾಮೆಗೆ ಆಕ್ರೋಶವ್ಯಕ್ತಪಡಿಸಿದ್ದರು.

ಒಂದೂವರೆ ದಶಕಗಳ ಹಿಂದೆ ಕಿಷ್ಕಿಂಧೆಯಂತಿದ್ದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಇಂದು ಸುಂದರ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಪ್ರಮುಖ ಕಾರಣಕರ್ತರಲ್ಲಿ ಬಿ.ಎಸ್. ಯಡಿಯೂರಪ್ಪ ಮೊದಲಿಗರು. ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ರೈಲು ಮಾರ್ಗ, ಶಿಕಾರಿಪುರ, ಸೊರಬ ತಾಲ್ಲೂಕಿನ ನೀರಾವರಿ ಯೋಜನೆಗಳು, ಸುಸಜ್ಜಿತ ವಿಮಾನ ನಿಲ್ದಾಣ, ಶಿವಮೊಗ್ಗದ 46 ಎಕರೆ ವಿಸ್ತಾರದ ಹಳೇ ಜೈಲು ಪ್ರದೇಶದಲ್ಲಿ ಫ್ರೀಡಂ ಪಾರ್ಕ್, ಸಿಗಂದೂರು ಸೇತುವೆ ಅವರ ಇಚ್ಛಾಶಕ್ತಿಯ ಫಲ. ಶಿವಮೊಗ್ಗ ನಗರದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ರೈಲು ಮಾರ್ಗದ ಸಮಸ್ಯೆಗಳಿಗೆ ಕೊನೆಗೂ ಪರಿಹಾರ ದೊರಕಿತು. ರೈಲು ಮಾರ್ಗದ ಮೂರು ಮೇಲು ಸೇತುವೆ ಕಾಮಗಾರಿಗಳು ಆರಂಭವಾದವು. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಅವಧಿಗೆ ಮೊದಲೇ ನಿರ್ಗಮಿಸಿದ್ದು ಅಭಿವೃದ್ಧಿ ಪರ್ವದ ಯುಗಾಂತ್ಯವೆಂದೇ ಜನರು ಬಣ್ಣಸಿದರು.

ವರ್ಷದ ಆರಂಭದಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಭದ್ರಾವತಿಗೆ ಭೇಟಿ ನೀಡಿ ಮೀಸಲು ಪೊಲೀಸ್‌ ಪಡೆ ಮೈದಾನದಲ್ಲಿ ನಿರ್ಮಾಣವಾಗುತ್ತಿರುವ ಕ್ಷಿಪ್ರ ಕಾರ್ಯಪಡೆಯ 97ನೇ ಬೆಟಾಲಿಯನ್ ಘಟಕಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿದರು.

ಲಸಿಕೆ ಅಭಿಯಾನಕ್ಕೆ ಚಾಲನೆ:ಕೊರೊನಾ ಮೊದಲ ಅಲೆಯಲ್ಲಿ ಸಾಕಷ್ಟು ಸಾವು–ನೋವು ಕಂಡಿದ್ದ ಜಿಲ್ಲೆಗೆ ಕೋವಿಡ್‌ ಲಸಿಕೆ ವರದಾನವಾಯಿತು. ವರ್ಷದ ಆರಂಭದಲ್ಲೇ ಲಸಿಕಾ ಅಭಿಯಾನ ಆರಂಭವಾದರೂ, ಎರಡನೇ ಅಲೆಗೆ ಮತ್ತೆ ಜಿಲ್ಲೆ ತತ್ತರಿಸಿದ ನಂತರವೇ ಲಸಿಕೆ ಪಡೆಯಲು ಜನರು ಮುಗಿಬಿದ್ದರು.ಶೇ 80ರಷ್ಟು ಜನರು ಲಸಿಕೆ ಪಡೆದ ಪರಿಣಾಮ ಮೂರನೇ ಅಲೆ ಜಿಲ್ಲೆಯನ್ನು ಹೆಚ್ಚು ಬಾಧಿಸಲಿಲ್ಲ.

ಶಿವಮೊಗ್ಗದಲ್ಲೂ ಮೊಳಗಿದ ದೆಹಲಿ ಹೋರಾಟ:ಐಕ್ಯ ಹೋರಾಟ ಸಮಿತಿ, ರಾಜ್ಯ ರೈತ ಸಂಘವು ನಗರದ ಸೈನ್ಸ್ ಮೈದಾನದಲ್ಲಿ ಮಾರ್ಚ್‌ನಲ್ಲಿ ಹಮ್ಮಿಕೊಂಡಿದ್ದ ರೈತರ ಮಹಾ ಪಂಚಾಯತ್‌ನಲ್ಲಿಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಟಿಕಾಯತ್‌ ಮತ್ತಿತರರು ಭಾಗವಹಿಸಿದ್ದರು. ಇದು ದಕ್ಷಿಣ ಭಾರತದಲ್ಲೇ ನಡೆದ ಮೊದಲ ಸಮಾವೇಶ.

ಅಕಾಲಿಕ ಮಳೆ: ಈ ವರ್ಷ ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾದರೂ ಅಕಾಲಿಕ ಮಳೆ ಕಾರಣ ರೈತರು ಹೆಚ್ಚಿನ ಸಂಕಷ್ಟ ಅನುಭವಿಸಿದರು.

ಮತ್ತೆ ಲಾಕ್‌ಡೌನ್‌ ತಂದ ಸಂಕಷ್ಟ: ಜಿಲ್ಲೆಯಲ್ಲಿ ಎರಡನೇ ಅಲೆ ಆರಂಭವಾದಾಗ ಕೊರೊನಾ ಲಾಕ್‌ಡೌನ್‌ನಿಂದ ಜನರು ಮತ್ತೆ ಸಂಕಷ್ಟ ಅನುಭವಿಸಿದರು.

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ, ಭದ್ರಾವತಿ ನಗರ ಸಭೆ ಕಾಂಗ್ರೆಸ್‌ ತೆಕ್ಕೆಗೆ ಬಂದವು. ಸಾಹಿತ್ಯ ‍ಪರಿಷತ್ ಚುನಾವಣೆಯಲ್ಲಿ ನಾಲ್ಕನೇ ಬಾರಿ ಡಿ. ಮಂಜುನಾಥ್ ಆಯ್ಕೆಯಾದರು.

ಗಣ್ಯರ ನಿಧನ:ಜಿಲ್ಲೆಯವರೇ ಆದ ನಿವೃತ್ತ ರಾಜ್ಯಪಾಲ ರಾಮಾ ಜೋಯಿಸ್‌,ತಾಲ್ಲೂಕಿನ ಹೆಗ್ಗೋಡಿನ ನೀನಾಸಂ ಸಂಸ್ಥೆಯ ಸಂಸ್ಥಾಪಕ ಕೆ.ವಿ. ಸುಬ್ಬಣ್ಣ ಅವರ ಪತ್ನಿ ಶೈಲಜಾ, ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ಅವರು ಈ ವರ್ಷ ನಿಧನರಾದರು.

ತೀರ್ಥಹಳ್ಳಿ ತಾಲ್ಲೂಕು: ಪಟ್ಟಣ ಪಂಚಾಯಿತಿಚುನಾವಣೆಯಲ್ಲಿ 23 ವರ್ಷಗಳ ನಂತರ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಿತು. 78 ವರ್ಷಗಳ ಹಿಂದಿನ ಜಯಚಾಮರಾಜೇಂದ್ರ ಕಮಾನು ಸೇತುವೆಗೆ ಪರ್ಯಾಯವಾಗಿ ₹ 54 ಕೋಟಿ ವೆಚ್ಚದಲ್ಲಿ ಬಾಳೇಬೈಲಿನಲ್ಲಿ ನೂತನ ಸೇತುವೆ ಕಾಮಗಾರಿ ಆರಂಭ. ಕೊರೊನಾ ಕಾರಣ ಅದ್ದೂರಿಯಾಗಿ ನಡೆಯದ ರಾಮೇಶ್ವರ ದೇವರ ಜಾತ್ರೆ.

ಕೈಗಾರಿಕಾ ಪುನಶ್ಚೇತನ ವರ್ಷ

ಭದ್ರಾವತಿ: ಕೈಗಾರಿಕಾ ನಗರ ಭದ್ರಾವತಿಗೆ ಒಂದಿಷ್ಟು ಪುನಶ್ಚೇತನ ನೀಡುವ ರೀತಿಯಲ್ಲಿ ವಿಐಎಸ್ಎಲ್ ಉತ್ಪಾದನೆ ಹೆಚ್ಚಳವಾಗುವ ಜತೆಗೆ ಗುತ್ತಿಗೆ ಕಾರ್ಮಿಕರಿಗೆ ಕೆಲಸದ ಭರವಸೆ ಸೃಷ್ಟಿಸಿದ್ದು 2021ರ ವಿಶೇಷ.

ಹಿಂದಿನ ಸಾಲಿನಲ್ಲಿ ಹೋರಾಟ, ಧರಣಿ ಹಾಗೂ ಕೆಲಸದ ಬೇಡಿಕೆಯ ಜಟಾಪಟಿಯಲ್ಲಿ ಮುಳುಗಿದ್ದರೆ ಪ್ರಸ್ತುತ ವರ್ಷದಲ್ಲಿ ಉತ್ಪಾದನೆಗೆ ತಕ್ಕಂತೆ ಬೇಡಿಕೆ ಹಾಗೂ ಕಚ್ಚಾ ಸಾಮಗ್ರಿಗಳ ಸಮಗ್ರ ಪೂರೈಕೆ ಹೆಚ್ಚಳದ ಪರಿಣಾಮ ಸಹಜವಾಗಿ ಪುನಶ್ಚೇತನ ಹಾದಿಯನ್ನು ಸುಗಮ ಮಾಡಿದೆ.

ಎಂಪಿಎಂ ಕಾರ್ಖಾನೆ ಅರಣ್ಯ ಜಾಗವನ್ನು ರಾಜ್ಯ ಸರ್ಕಾರ ಲೀಸ್ ಮೇಲೆ ನೀಡುವ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿತು. ಖಾಸಗೀಕರಣ ಪ್ರಕ್ರಿಯೆಗೆ ಒಂದಿಷ್ಟು ವೇಗ ದೊರೆತಿದೆ. ಅಲ್ಲಿನ ಕಾಯಂ ನೌಕರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿರ್ಧಾರ ತೆಗೆದುಕೊಳ್ಳಲು ಮುಂದಡಿ ಇಟ್ಟಿದೆ.

ಐದಾರು ವರ್ಷಗಳಿಂದ ಎಂಪಿಎಂ ಉತ್ಪಾದನೆ ಸ್ಥಗಿತವಾಗಿದ್ದ ಬೆನ್ನಲ್ಲೇ ನೌಕರರು ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ಉಂಟಾಗಿತ್ತು. ಆದರೆ, ಪ್ರಸಕ್ತ ಸಾಲಿನ ಪ್ರಯತ್ನಗಳು ಭವಿಷ್ಯದ ದಿನಗಳಲ್ಲಿ ಕಾರ್ಖಾನೆ ಆರಂಭವಾಗುವ ನಿರೀಕ್ಷೆ ಹುಟ್ಟಿಸಿವೆ.

ಎರಡು ಕಾರ್ಖಾನೆಗಳ ಬೆಳವಣಿಗೆಯ ದೃಷ್ಟಿಯಿಂದ ಹಲವು ರೀತಿಯ ಕ್ರಮಗಳು 2021ರಲ್ಲಿ ನಡೆದಿರುವುದು ಸಹಜವಾಗಿ ಆರ್ಥಿಕ ಚೈತನ್ಯ ವೃದ್ಧಿಸುವ ಭರವಸೆ ಮೂಡಿಸಿವೆ.

ಆರಗ ಜ್ಞಾನೇಂದ್ರಗೆ ಒಲಿದ ಸಚಿವ ಸ್ಥಾನ

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ನಂತರ ರಚನೆಯಾದ ಸರ್ಕಾರದಲ್ಲಿ ಮೊದಲ ಬಾರಿ ಆರಗ ಜ್ಞಾನೇಂದ್ರ ಅವರಿಗೆ ಸಚಿವ ಸ್ಥಾನ ಒಲಿಯಿತು. ಅದರಲ್ಲೂ ಗೃಹ ಸಚಿವ ಸ್ಥಾನ ದೊರೆತಿದ್ದು ಜನರ ಸಂಭ್ರಮ ಹೆಚ್ಚಿಸಿತು. ಕೆ.ಎಸ್‌. ಈಶ್ವರಪ್ಪ ಅವರು ಮತ್ತೆ ಸಚಿವ ಸ್ಥಾನ ಗಿಟ್ಟಿಸಿಕೊಂಡು ಜಿಲ್ಲಾ ಉಸ್ತುವಾರಿಗೆ ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT