ತುಮಕೂರು: ಚಲನಚಿತ್ರ ನಟ ಸುದೀಪ್ ಅವರಿಗೆ ತುಮಕೂರು ವಿ.ವಿ ಗೌರವ ಡಾಕ್ಟರೇಟ್ ನೀಡಲು ಮುಂದಾದರೂ ಗೌರವದಿಂದ ಬೇಡವೆಂದಿದ್ದಾರೆ.
ಗೌರವ ಡಾಕ್ಟರೇಟ್ ನೀಡಲು ಪರಿಗಣಿಸುವುದಾಗಿ ಮಾಹಿತಿ ನೀಡಿದಾಗ ಸುದೀಪ್ ಒಪ್ಪಿಕೊಂಡಿಲ್ಲ. ‘ನನಗಿಂತ ದೊಡ್ಡವರು, ಉತ್ತಮ ಕೆಲಸ ಮಾಡಿದವರನ್ನು ಪರಿಗಣಿಸಿ’ ಎಂದು ಹೇಳುವ ಮೂಲಕ ಗೌರವ ತೋರಿಸಿದ್ದಾರೆ ಎಂದು ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ತಿಳಿಸಿದರು.
ತುಮಕೂರು ವಿಶ್ವವಿದ್ಯಾಲಯ ಈ ಬಾರಿ ಸ್ವಾಮೀಜಿ ಸೇರಿದಂತೆ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದೆ.
ಜಿಲ್ಲೆಯವರಾದ ಕೈಗಾರಿಕೋದ್ಯಮಿ ಎಚ್.ಜಿ.ಚಂದ್ರಶೇಖರ್, ಕ್ರೀಡಾಪಟು ಎಸ್.ಸಿ.ನಾಗಾನಂದಸ್ವಾಮಿ ಹಾಗೂ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರನ್ನು ಗೌರವ ಡಾಕ್ಟರ್‌ಗೆ ಆಯ್ಕೆ ಮಾಡಲಾಗಿದೆ.
ವಿ.ವಿ ಆವರಣದಲ್ಲಿ ಆ. 7ರಂದು ನಡೆಯುವ 17ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುತ್ತದೆ.