ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಚಿಕ್ಕಪೇಟೆಯ ದೊಡ್ಡ ಅವಾಂತರ

Last Updated 9 ನವೆಂಬರ್ 2021, 16:39 IST
ಅಕ್ಷರ ಗಾತ್ರ

ತುಮಕೂರು: ನಗರದ ಹೃದಯ ಭಾಗದಲ್ಲಿರುವ ಚಿಕ್ಕಪೇಟೆ ಕಡೆಗೆ ಹೋಗುವುದಿದ್ದರೆ ಒಮ್ಮೆ ಯೋಚಿಸಿ ನೋಡಿ. ಅಪ್ಪಿತಪ್ಪಿ ಆ ಕಡೆಗೆ ಹೆಜ್ಜೆ ಹಾಕಿದರೆ ಹೊರಗೆ ಬರಲು ಒದ್ದಾಡಬೇಕಾಗುತ್ತದೆ. ಅಂತಹ ಕೆಟ್ಟ ಸ್ಥಿತಿಯನ್ನು ಸ್ಮಾರ್ಟ್ ಸಿಟಿ ಅಧಿಕಾರಿಗಳು ನಿರ್ಮಾಣ ಮಾಡಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಚಿಕ್ಕಪೇಟೆ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಗಾರ್ಡನ್‌ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಚಿಕ್ಕಪೇಟೆಗೆ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಒಮ್ಮೆಲೆ ಅಗೆದು ಹಾಕಿದ್ದು, ಈ ಪ್ರದೇಶಕ್ಕೆ ಬರುವುದು ಕಷ್ಟಕರ. ಹೊರಗೆ ಹೋಗಲು ಇನ್ನೂ ಸರ್ಕಸ್ ಮಾಡಬೇಕಿದೆ. ಮೊದಲೇ ಕಿಷ್ಕಿಂದೆಯಾಗಿರುವ ಪ್ರದೇಶದಲ್ಲಿ ರಸ್ತೆಗಳನ್ನು ಅಗೆದು ಬಿಟ್ಟಿರುವುದರಿಂದ ವಾಹನ, ಜನರ ಸಂಚಾರ ದುರ್ಲಬವಾಗಿದೆ.

ಸಾಮಾನ್ಯವಾಗಿ ಜನರ ಸಂಚಾರಕ್ಕೆಅಡಚಣೆಯಾಗದಂತೆ ನೋಡಿಕೊಂಡು ಕಾಮಗಾರಿ ಆರಂಭಿಸಲಾಗುತ್ತದೆ. ಒಂದು ರಸ್ತೆ ಅಭಿವೃದ್ಧಿಪಡಿಸಿದ ನಂತರ ಮತ್ತೊಂದು ರಸ್ತೆ ಕಾಮಗಾರಿ ಆರಂಭಿಸುವುದು ಅಥವಾ ಪರ್ಯಾಯ ರಸ್ತೆ ಮೂಲಕ ಸಾಗುವಂತೆ ವ್ಯವಸ್ಥೆ ಮಾಡಿ ಕೆಲಸ ಕೈಗೆತ್ತಿಕೊಳ್ಳಲಾಗುತ್ತದೆ. ಪರ್ಯಾಯ ಮಾರ್ಗಗಳು ಇಲ್ಲವಾದರೆ ಒಂದು ರಸ್ತೆ ಕೆಲಸ ಮುಗಿಸಿ ಮತ್ತೊಂದಕ್ಕೆ ಕೈ ಹಾಕಲಾಗುತ್ತದೆ. ಆದರೆ ಚಿಕ್ಕಪೇಟೆಯಲ್ಲಿ ಅಂತಹ ಯಾವುದೇ ಮುಂಜಾಗ್ರತೆ, ಎಚ್ಚರಿಕೆ ವಹಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡದೆ ಮನಸ್ಸಿಗೆ ಬಂದಂತೆ ಎಲ್ಲಾ ರಸ್ತೆಗಳನ್ನು ಒಮ್ಮೆಲೆ ಅಗೆದು ಹಾಕಿದ್ದಾರೆ. ತಕ್ಷಣಕ್ಕೆ ಕೆಲಸವನ್ನೂ ಆರಂಭಿಸಿಲ್ಲ. ಪ್ರತಿನಿತ್ಯವೂ ಈ ರಸ್ತೆಗಳಲ್ಲಿ ಸಂಚರಿಸುವ ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.

ಚಿಕ್ಕಪೇಟೆ ಮುಖ್ಯ ರಸ್ತೆ, ಚಿಕ್ಕಪೇಟೆ ವೃತ್ತದಿಂದ ಸಂತೆಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳನ್ನು ಅಗೆದು ಹಾಕಿ ತಿಂಗಳೇ ಕಳೆದಿದ್ದರೂ ಈವರೆಗೂ ಕೆಲಸ ಪೂರ್ಣಗೊಳಿಸಿಲ್ಲ. ಚಿಕ್ಕಪೇಟೆಗೆ ಸಂಪರ್ಕ ಕಲ್ಪಿಸುವ ಸುತ್ತಮುತ್ತಲಿನ ಎಲ್ಲಾ ರಸ್ತೆಗಳ ಸ್ಥಿತಿಯೂ ಇದೇ ರೀತಿಯಾಗಿದೆ. ಮೊದಲೇ ಯೋಜಿಸಿ ಕೆಲಸ ಆರಂಭಿಸಿಲ್ಲ, ಕಾಮಗಾರಿ ಆರಂಭಿಸಿದ ನಂತರವಾದರೂ ಶೀಘ್ರ ಮುಗಿಸುತ್ತಿಲ್ಲ. ತಿಂಗಳುಗಟ್ಟಲೆ ಈ ರೀತಿ ಬಿಟ್ಟರೆ ಜನರು ಏನು ಮಾಡಬೇಕು ಎಂದು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಸಣ್ಣ ಜೆರಾಕ್ಸ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದೇನೆ. ಇದು ಬಿಟ್ಟರೆ ಜೀವನಕ್ಕೆ ಬೇರೆ ದಾರಿ ಇಲ್ಲವಾಗಿದೆ. ರಸ್ತೆ ಕಿತ್ತುಹಾಕಿ ತಿಂಗಳೇ ಕಳೆದಿದ್ದರೂ ಸರಿಪಡಿಸಿಲ್ಲ. ವ್ಯಾಪಾರ ಇಲ್ಲದೆ ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ಸತ್ಯನಾರಾಯಣಶೆಟ್ಟಿ ನೋವು ತೋಡಿಕೊಂಡರು.

ಗಾರ್ಡನ್ ರಸ್ತೆಯೂ ಅವ್ಯವಸ್ಥೆ: ರಿಂಗ್ ರಸ್ತೆ ಮೂಲಕ ಬಂದ ವಾಹನಗಳು ಗುಬ್ಬಿ ಗೇಟ್‌ ದಾಟಿ ಗಾರ್ಡನ್ ರಸ್ತೆಯಲ್ಲಿ ಸಾಗಿ ಕೋಡಿ ಬಸವಣ್ಣ ದೇವಸ್ಥಾನದ ಬಳಿ ಶಿರಾ ರಸ್ತೆಗೆ ಸಂಪರ್ಕ ಪಡೆದುಕೊಳ್ಳುತ್ತವೆ. ಶಿರಾ ಕಡೆಯಿಂದ ಬರುವ ಲಾರಿ ಮತ್ತಿತರ ವಾಹನಗಳು ಗುಬ್ಬಿಗೇಟ್‌, ರಿಂಗ್ ರಸ್ತೆಗೆ ಇದೇ ಮಾರ್ಗದಲ್ಲಿ ಸಾಗಬೇಕು. ದಿಬ್ಬೂರು ಕಡೆಯಿಂದ ಬರುವ ವಾಹನಗಳು ಇದೇ ರಸ್ತೆಯಲ್ಲಿ ನಗರ ಪ್ರವೇಶಿಸಬೇಕು. ಈ ರಸ್ತೆಯನ್ನು ಅಗೆದು ತಿಂಗಳೇ ಕಳೆದಿದ್ದರೂ ಬೇಗ ಪೂರ್ಣಗೊಳಿಸಬೇಕು ಎಂಬ ಚಿಂತನೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಬಂದಂತಿಲ್ಲ.

ಚಿಕ್ಕಪೇಟೆ ಪ್ರದೇಶದ ಯಾವ ರಸ್ತೆಯಲ್ಲೂ ಸಂಚರಿಸಲು ಸಾಧ್ಯವಿಲ್ಲವಾಗಿದ್ದು, ತ್ವರಿತಗತಿಯಲ್ಲಿ ಕೆಲಸ ಪೂರ್ಣಗೊಳಿಸಬೇಕು. ಜನರಿಗೆ ಏಕೆ ಇಷ್ಟೊಂದು ಕಷ್ಟ ಕೊಡುತ್ತಿದ್ದಾರೆ ಎಂದು ರಮೇಶ್ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT