ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸದಲ್ಲಿ ಹಿನ್ನಡೆ: ಸಚಿವರ ಬೇಸರ

ಕೆಡಿಪಿ ಪೂರ್ವಭಾವಿ ಸಭೆ: ಜಿಲ್ಲಾ ಅಂಕಿ–ಅಂಶ ನೋಟ ಪುಸ್ತಕ ಬಿಡುಗಡೆ
Last Updated 13 ಏಪ್ರಿಲ್ 2021, 5:06 IST
ಅಕ್ಷರ ಗಾತ್ರ

ತುಮಕೂರು: ನರೇಗಾದಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದಿಂದ ಕೈಗೊಂಡ ಕಾಮಗಾರಿಗಳು ಪ್ರಗತಿಯಾಗಿಲ್ಲ ಎಂದುಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯ ಬಗ್ಗೆ ಕನಿಷ್ಠ ಜ್ಞಾನ ಹೊಂದಿರಬೇಕು. ಈ ಬಗ್ಗೆ ಕೆಡಿಪಿ ಸಭೆಗೆ ಸಮರ್ಪಕ ಮಾಹಿತಿ ಒದಗಿಸಬೇಕು ಎಂದು ಸೋಮವಾರ ನಡೆದ ಕೆಡಿಪಿ ಪೂರ್ವಭಾವಿ ಸಭೆಯಲ್ಲಿ ಸೂಚಿಸಿದರು.

ಗ್ರಾಮ ವಿಕಾಸಲ್ಲೂ ಹಿನ್ನಡೆ: ಚಿಕ್ಕನಾಯಕನಹಳ್ಳಿ ಸೇರಿದಂತೆ ಜಿಲ್ಲೆಯ ಯಾವ ತಾಲ್ಲೂಕಿನಲ್ಲೂ ಗ್ರಾಮ ವಿಕಾಸ ಯೋಜನೆ ಪ್ರಗತಿ ಕಂಡಿಲ್ಲ. ಹಾಗಾಗಿ ಯೋಜನೆಗೆ ಮೀಸಲಾಗಿರುವ ಪೂರ್ಣ ಪ್ರಮಾಣದ ಅನುದಾನ ಬಳಸಿ ಗುರಿ ಸಾಧಿಸಬೇಕು ಎಂದು ನಿರ್ದೇಶನ ನೀಡಿದರು.

ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳಬೇಕು. ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರಿಗೆ ಮೀಸಲಿಟ್ಟ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ನರೇಗಾ ಯೋಜನೆಯಡಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ ನೀರು ಪೂರೈಕೆ ಮಾಡಬೇಕು ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು ತಾಲ್ಲೂಕುವಾರು ಜಿಲ್ಲಾ ಅಭಿವೃದ್ಧಿಗೆ ಪೂರಕವಾದ ಮ್ಯಾಪಿಂಗ್ ರೂಪರೇಷೆ ತಯಾರಿಸಬೇಕು. ಇದರಿಂದ ಆದ್ಯತೆ ಮೇರೆಗೆ ಅಭಿವೃದ್ಧಿ ಕಾಮಗಾರಿಗೆ ಒತ್ತು ಕೊಡಲು ಸುಲಭ ಸಾಧ್ಯವಾಗುತ್ತದೆ. ಮುಂದಿನ ಕೆಡಿಪಿ ಸಭೆಯೊಳಗೆ ಮ್ಯಾಪಿಂಗ್ ತಯಾರಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಹೊಸ ಬಡಾವಣೆ ನಿರ್ಮಾಣ ಮಾಡುವಾಗ ಭೂ ಪರಿವರ್ತನೆಯಾದ ನಿವೇಶನದಲ್ಲಿ ಸಮುದಾಯ ಭವನಗಳಿಗೆ ಜಾಗ ಮೀಸಲಿಡುವಂತೆ ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಸೂಚನೆ ಕೊಡಬೇಕು. ಆ ಮೂಲಕ ಸಮುದಾಯ ಭವನಗಳ ನಿರ್ಮಾಣಕ್ಕೆ ಅಡಚಣೆಯಾಗಿರುವ ಜಾಗದ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಸಲಹೆ ಮಾಡಿದರು.

ಗ್ರಾಮೀಣ ವಸತಿ ಯೋಜನೆಗಳಡಿ 2010-11ನೇ ಸಾಲಿನಿಂದ ಬಾಕಿ ಉಳಿದಿರುವ ಮನೆಗಳನ್ನು ಶೀಘ್ರ ಪೂರ್ಣಗೊಳಿಸಬೇಕು. 2011-15ನೇ ಸಾಲಿನಲ್ಲಿ ವಸತಿ ಸೌಲಭ್ಯಕ್ಕೆ ಆಯ್ಕೆಯಾದ ಫಲಾನುಭವಿಗಳ ಪೈಕಿ ಈವರೆಗೂ ಮನೆ ನಿರ್ಮಿಸಿಕೊಳ್ಳದ ಫಲಾನುಭವಿಗಳಿಗೆ ನೋಟಿಸ್ ನೀಡಬೇಕು. ಮನೆ ನಿರ್ಮಾಣ ಪ್ರಕ್ರಿಯೆ ಆರಂಭಿಸದ ಫಲಾನುಭವಿಗಳ ಮಂಜೂರಾತಿ ರದ್ದುಪಡಿಸಿ ಪ್ರಸಕ್ತ ಸಾಲಿನಲ್ಲಿ ಆಯ್ಕೆಯಾದವರಿಗೆ ಆದ್ಯತೆ ಕೊಡಬೇಕು. ಅಲೆಮಾರಿ ಜನಾಂಗದವರಿಗೆ ಮನೆ ಕಟ್ಟಿಕೊಳ್ಳಲು ನಿವೇಶನ ಕಲ್ಪಿಸಬೇಕು ಎಂದು ಸೂಚಿಸಿದರು.

ಬೇಸಿಗೆ ಅವಧಿಯಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಫಲಾನುಭವಿಗಳ ಪಟ್ಟಿಯನ್ನು ಕೆಡಿಪಿ ಸಭೆಗೆ ಒದಗಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿದ್ಯಾಕುಮಾರಿ, ‘ಸಚಿವರು ನೀಡಿರುವ ಎಲ್ಲಾ ನಿರ್ದೇಶನ ಪಾಲಿಸಬೇಕು. ಕೆಡಿಪಿ ಸಭೆಗೆ ಸಚಿವರ ನಿರ್ದೇಶನದಂತೆ ಸಮರ್ಪಕ ಮಾಹಿತಿ ಒದಗಿಸಬೇಕು’ ಎಂದರು.

ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿ.ಪಂ ಉಪಕಾರ್ಯದರ್ಶಿ ಟಿ.ಕೆ. ರಮೇಶ್ ಉಪಸ್ಥಿತರಿದ್ದರು.

2019-20ನೇ ಸಾಲಿನ ‘ತುಮಕೂರು ಜಿಲ್ಲಾ ಅಂಕಿ– ಅಂಶಗಳ ನೋಟ’ ಪುಸ್ತಕವನ್ನು ಸಚಿವರು ಬಿಡುಗಡೆ ಮಾಡಿದರು. ಈ ವೇಳೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಡಿ. ರಂಗಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT