ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಛಾಯಾಗ್ರಾಹಕರು ಸಾಲಗಾರರಾಗಬೇಡಿ: ಎಚ್.ಎಸ್.ನಾಗೇಶ್‌

Published 10 ಫೆಬ್ರುವರಿ 2024, 8:02 IST
Last Updated 10 ಫೆಬ್ರುವರಿ 2024, 8:02 IST
ಅಕ್ಷರ ಗಾತ್ರ

ತುಮಕೂರು: ಹಗಲಿರುಳು ದುಡಿದು ಅದರಿಂದ ಬಂದ ಹಣವನ್ನು ಹೊಸ ಕ್ಯಾಮೆರಾಗಳಿಗೆ ಹಾಕಿ ಸಾಲಗಾರರಾಗುವ ಬದಲು, ಒಂದಿಷ್ಟು ಉಳಿತಾಯ ಮಾಡಿ, ಕುಟುಂಬಗಳಿಗೆ ಭದ್ರತೆ ಒದಗಿಸುವಂತೆ ಛಾಯಾಗ್ರಾಹಕರ ಸಂಘದ ರಾಜ್ಯ ಘಟಕ ಅಧ್ಯಕ್ಷ ಎಚ್.ಎಸ್.ನಾಗೇಶ್‌ ಸಲಹೆ ಮಾಡಿದರು.

ನಗರದಲ್ಲಿ ಶುಕ್ರವಾರ ಫೋಟೊ ಮತ್ತು ವಿಡಿಯೋಗ್ರಾಫರ್ಸ್‌ ಸಂಘದಿಂದ ಆಯೋಜಿಸಿದ್ದ ಹಿಂದಿನ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಅಭಿನಂದನೆ ಹಾಗೂ ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಸುಮಾರು 2.50 ಲಕ್ಷ ಛಾಯಾಗ್ರಾಹಕರಿದ್ದು, ಅವರೆಲ್ಲ ಒಂದಾಗಿ ಸರ್ಕಾರದ ಮುಂದೆ ಬೇಡಿಕೆ ಇಡಬೇಕು. ಇದೇ ವರ್ಷದ ಕೊನೆಯಲ್ಲಿ ತುಮಕೂರಿನಲ್ಲಿ ರಾಜ್ಯಮಟ್ಟದ ಫೋಟೊ ಮತ್ತು ವಿಡಿಯೋಗ್ರಾಫರ್ಸ್‍ಗಳ ಸಮಾವೇಶ ನಡೆಸುವ ಚಿಂತನೆ ಇದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ‘ಕೋವಿಡ್‌ ಸಮಯದಲ್ಲಿ ಛಾಯಾಗ್ರಾಹಕರು ಅನುಭವಿಸಿದ ಕಷ್ಟದ ಪರಿಚಯವಿದೆ. ಜಿಲ್ಲಾ ಆಡಳಿತ ನಿಮ್ಮ ಮನವಿಗೆ ಸ್ಪಂದಿಸಿ ಕೆಲಸ ಮಾಡಲಿದೆ’ ಎಂದು ಭರವಸೆ ನೀಡಿದರು.

ಕೆಪಿಸಿಸಿ ವಕ್ತಾರ ನಿಕೇತ್‌ರಾಜ್‌ ಮೌರ್ಯ, ‘ನೂರಾರು ವರ್ಷಗಳ ನೆನಪನ್ನು ಶಾಶ್ವತವಾಗಿಸುವ ಛಾಯಾಗ್ರಾಹಕರು, ಮೊಬೈಲ್‍ನಿಂದಾಗಿ ದೊಡ್ಡ ಪೈಪೋಟಿ ಎದುರಿಸುತ್ತಿದ್ದಾರೆ. ಸರ್ಕಾರ ಅಸಂಘಟಿತ ವಲಯದಲ್ಲಿರುವ ಛಾಯಾಗ್ರಾಹಕರನ್ನು ಗುರುತಿಸಬೇಕು’ ಎಂದು ಹೇಳಿದರು.

ಫೋಟೊ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎಚ್.ಅನಿಲ್‍ಕುಮಾರ್‌, ‘ಒಂದು ಸ್ವಂತ ನಿವೇಶನ ಖರೀದಿಸಿ ಸಂಘದ ಕಟ್ಟಡ ಕಟ್ಟುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಕಟ್ಟಡ ನಿರ್ಮಾಣಕ್ಕೆ ಶಾಸಕ ಜ್ಯೋತಿಗಣೇಶ್ ಅವರು ಒಂದು ವರ್ಷಕ್ಕೆ ₹5 ಲಕ್ಷದಂತೆ 2 ವರ್ಷದಲ್ಲಿ ₹10 ಲಕ್ಷ ನೆರವು ನೀಡುವ ಭರವಸೆ ಕೊಟ್ಟಿದ್ದಾರೆ. ಜತೆಗೆ ಸಂಘದ ಸದಸ್ಯರು ಕೈ ಜೋಡಿಸಬೇಕು’ ಎಂದರು.

ಛಾಯಾಗ್ರಾಹಕರಾದ ಭಕ್ತವತ್ಸಲ, ಶಾಂತರಾಜು, ಫಾರೂಕ್‌ ಅಹ್ಮದ್‌, ಸಿದ್ದರಾಜು, ಪ್ರಕಾಶ್, ಮಲ್ಲಿಕಾರ್ಜುನ ದುಂಡ ಅವರನ್ನು ಸನ್ಮಾನಿಸಲಾಯಿತು. ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಕಾಂಗ್ರೆಸ್ ಮುಖಂಡ ಇಕ್ಬಾಲ್‌ ಅಹ್ಮದ್‌, ಫೋಟೊ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಎನ್‌.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎನ್.ರಮೇಶ್, ಪದಾಧಿಕಾರಿಗಳಾದ ಪಾಂಡುರಂಗಯ್ಯ, ನವೀನ್‍ಕುಮಾರ್‌, ಆರ್‌.ವಿನಯ್‍ಕುಮಾರ್, ಸಿ.ಎನ್‌.ರವಿಕುಮಾರ್‌, ಸಿದ್ದೇಶ್, ಮಧುಸೂಧನ್, ಟಿ.ಆರ್‌.ಪ್ರದೀಪ್‌, ಸಾಧಿಕ್‍ಪಾಷ, ರಾಜೇಶ್, ವೀರಭದ್ರಯ್ಯ, ಡಿ.ಎನ್.ಸಿದ್ದರಾಜು, ಸಂತೋಷ್‌ಕುಮಾರ್, ರೇಣುಕಾಪ್ರಸಾದ್‌, ಚಿ.ನಿ.ಪುರುಷೋತ್ತಮ್ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT