ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೇನಾನಿಗಳು 2021- ಕೊರೊನಾ ಕಷ್ಟದ ಮಧ್ಯೆ ಕಾಯಕವೇ ಕೈಲಾಸ ಎಂದ ತುಮಕೂರಿನವರು

Last Updated 31 ಡಿಸೆಂಬರ್ 2020, 19:32 IST
ಅಕ್ಷರ ಗಾತ್ರ

ಮನೆಯ ಗೋಡೆ ಮೇಲೆ ತೂಗುತ್ತಿದ್ದ ಹಳೆಯ ಕ್ಯಾಲೆಂಡರ್‌ ಬದಲಾಗಿದೆ. ಅದರ ಸ್ಥಳದಲ್ಲಿ 2021ರ ರಂಗುರಂಗಿನ ಹೊಸ ಕ್ಯಾಲೆಂಡರ್‌ ಬಂದು ಕೂತಿದೆ. ಬದುಕಿನ ಬಂಡಿ ಎಳೆಯುವ ಅಂಕಿಗಳ ಮೇಲೆ ಬಣ್ಣ ಮೆತ್ತಿಕೊಂಡಿದೆ. ಹೊಸ ವರ್ಷದ ಮೊದಲ ದಿನ ಸುಮ್ಮನೆ ಕುಳಿತು ಹಿಂದಿನ ವರ್ಷದತ್ತ ಒಮ್ಮೆ ಕಣ್ಣೋಟ ಬೀರಿದರೆ ನೆನಪುಗಳ ದೊಡ್ಡ ಸಂತೆಯ ಬಾಗಿಲು ತೆರೆದುಕೊಳ್ಳುತ್ತದೆ. ಆ ಸಂತೆಯಲ್ಲಿ ಹುಡುಕಿದರೆ ನಲಿವಿಗಿಂತ ನೋವಿನ ಮೂಟೆಗಳೇ ಹೆಚ್ಚು ಸಿಗುತ್ತವೆ.

ಎಲ್ಲರೂ ಕೋವಿಡ್ ಸಂಕಷ್ಟದ ಕುಲುಮೆಯಲ್ಲಿ ಬೇಯುತ್ತಿದ್ದೇವೆ. ಕೊರೊನಾ ತಂದಿತ್ತ ಸಂಕಷ್ಟದ ಹೊರೆಯನ್ನು ತುಸು ಇಳಿಸಿಕೊಂಡು ಹೊಸ ಭರವಸೆಯ ಹೆಜ್ಜೆಗಳನ್ನಿಡುತ್ತಾ ನೂತನ ವರ್ಷವನ್ನು ಬರಮಾಡಿಕೊಳ್ಳುವ ಹೊತ್ತು ಇದಾಗಿದೆ. ಈ ಸುಸಮಯವು ಸಕಾರಾತ್ಮಕ ಆಲೋಚನೆಗಳಿಗೆ ಸ್ಫೂರ್ತಿಯಾಗಲಿ ಎಂಬ ದೃಢ ಸಂಕಲ್ಪದೊಟ್ಟಿಗೆ ‘ಪ್ರಜಾವಾಣಿ’ ದಿಟ್ಟಹೆಜ್ಜೆ ಇಟ್ಟಿದೆ.

ಈ ಸಂಕಷ್ಟದಲ್ಲಿ ತಮ್ಮ ಅವಿರತ ಶ್ರಮದ ಮೂಲಕ ಜನರಿಗೆ ನೆರವಾದ ಸಾಧಕರನ್ನು ಪರಿಚಯಿಸುವ ಕೆಲಸ ಮಾಡಿದ್ದೇವೆ. ಹೊಸ ವರ್ಷದ ಹಾದಿಯಲ್ಲಿ ಇನ್ನಷ್ಟು ಮಂದಿಗೆ ಇದು ಪ್ರೇರಣೆಯಾಗಲಿ ಎಂಬುದೇ ನಮ್ಮ ಆಶಯ ಹಾಗೂ ಹಂಬಲ.

ಪ್ರಚಾರಕ್ಕೆ ಹಂಬಲಿಸಿದೇ ಸದ್ದಿಲ್ಲದೆ ಕೆಲಸ ಮಾಡುತ್ತಿರುವ ಇನ್ನೂ ಅನೇಕರೂ ನಮ್ಮ ನಡುವಿದ್ದಾರೆ. ಇಂತಹವರ ಸಂತತಿ ನೂರ್ಮಡಿಯಾಗಲಿ. ಇವರ ಅರ್ಪಣಾ ಮನೋಭಾವ ಹೊಸ ವರ್ಷದ ಹೊಸ್ತಿಲಲ್ಲಿ ಎಲ್ಲರಿಗೂ ಮಾದರಿಯಾಗಲಿ ಎಂಬ ಸದಾಶಯ ನಮ್ಮದು...

1. ಮಗಳಿಂದ ದೂರ, ರೋಗಿಗಳಿಗೆ ಉಪಚಾರ

ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಸ್ಟಾಫ್‌ ನರ್ಸ್‌ ಆಗಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾಶ್ರೀ, ಕೋವಿಡ್ ಸಂದರ್ಭದಲ್ಲಿ ಎರಡು ತಿಂಗಳ ಕಾಲ ಮನೆಗೆ ಹೋಗದೆ ಕೆಲಸ ನಿರ್ವಹಿಸಿದವರು. ಮೂರು ವರ್ಷದ ಮಗಳಿಂದ ಈ ಅವಧಿಯಲ್ಲಿ ದೂರವಿದ್ದರು. ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡವರು.

‘ಕೋವಿಡ್‌ ರೋಗಿಗಳನ್ನು ನೋಡಿಕೊಳ್ಳಲು ಅವರ ಕುಟುಂಬದವರು ಇರುವುದಿಲ್ಲ. ನಾವೇ ಕುಟುಂಬದವರಾಗಿ ನೋಡಿಕೊಂಡೆವು. ಗುಣಮುಖರಾದಾಗ ನಮ್ಮ ಕುಟುಂಬದವರೇ ಗುಣವಾದಂತೆ ಅನಿಸುತ್ತಿತ್ತು. ಮುಂದೆ ಯಾವ ಸಾಂಕ್ರಾಮಿಕ ರೋಗಗಳು ಬಂದರು ಅದನ್ನು ನನ್ನ ವೃತ್ತಿ ಜೀವನದಲ್ಲಿ ಎದುರಿಸಬಲ್ಲೆ ಎನ್ನುವ ಆತ್ಮವಿಶ್ವಾಸವನ್ನು ಕೋವಿಡ್‌ ಚಿಕಿತ್ಸೆಯ ದಿನಗಳು ನೀಡಿದೆ’ ಎಂದು ವಿದ್ಯಾಶ್ರೀ ಸ್ಮರಿಸುತ್ತಾರೆ.

‘ನಾನು ಕೊರೊನಾ ವಿಚಾರದಲ್ಲಿ ಕೆಲಸ ಮಾಡುವಾಗ ಪ್ರಮುಖವಾಗಿ ಕುಟುಂಬ ಧೈರ್ಯ ತುಂಬಿತು. ರಜೆಯನ್ನೂ ಹಾಕಲಿಲ್ಲ. ಪ್ರಾರಂಭದಲ್ಲಿ ಕೊರೊನಾ ಸೋಂಕಿತರಿಗೆ ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಚಿಕಿತ್ಸೆ ನೀಡುವುದರಿಂದ ನಮಗೆ ಏನು ತೊಂದರೆ ಇಲ್ಲ ಎನ್ನುವ ಮಾನಸಿಕ ಸ್ಥೈರ್ಯ ತುಂಬಿಕೊಳ್ಳಲು ಒಂದಷ್ಟು ಸಮಯ ಬೇಕಾಯಿತು. ರೋಗಿಗಳಿಗೆ ಔಷಧಕ್ಕಿಂತ ಉಪಚಾರವೇ ಮುಖ್ಯ ಎನ್ನುವುದು ನಂತರ ತಿಳಿಯಿತು’ ಎನ್ನುವರು.

2.ಗಟ್ಟಿಗೊಳಿಸಿದ ಕೋವಿಡ್‌ ಅನುಭವ

‘ಕೋವಿಡ್‌ ವೃತ್ತಿ ಜೀವನದಲ್ಲಿ ಸಾಕಷ್ಟು ಹೊಸತನ್ನು ಕಲಿಸಿತು’ –ಹೀಗೆ ಹೇಳುವುದು ತುಮಕೂರು ಜಿಲ್ಲಾ ಕೋವಿಡ್ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ಟಾಫ್ ನರ್ಸ್ ಟಿ.ಎಸ್‌. ಸೌಮ್ಯಶ್ರೀ. ಸೌಮ್ಯಶ್ರೀ ಸಹ ಕೊರೊನಾ ಆರಂಭದಿಂದಲೂ ಐಸಿಯು ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಜತೆಗಿನ ಅವರ ಅನುಭವ ಅವರನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

‘ಮೊದಮೊದಲು ಮಾಸ್ಕ್‌ ಹಾಕಿಕೊಳ್ಳಲು ಕಷ್ಟಪಡುತ್ತಿದ್ದೆ. ನಂತರ ಪಿಪಿಇ ಕಿಟ್‌ ಇಲ್ಲದೆ ಕೆಲಸ ಮಾಡಲು ಕಷ್ಟ ಎನ್ನುವಷ್ಟರ ಮಟ್ಟಿಗೆ ಅದಕ್ಕೆ ಒಗ್ಗಿಹೋಗಿದ್ದೇನೆ. ಮುಖ್ಯವಾಗಿ ಪರಿಸ್ಥಿತಿಯ ಅನಿವಾರ್ಯ ಹಾಗೂ ಮಾಡಲೇಬೇಕೆಂಬ ಮನಸ್ಸು ಇದ್ದರೆ ಎಲ್ಲದ್ದಕ್ಕೂ ಒಗ್ಗಿಕೊಳ್ಳಬಹುದು’ ಎನ್ನುವುದು ಅವರ ಅನುಭವದ ನುಡಿ.

ಒಮ್ಮೆ ಪಿಪಿಇ ಕಿಟ್‌ ಧರಿಸಿ ಕೆಲಸ ಆರಂಭಿಸಿದರೆ ಪಾಳಿ ಮುಗಿಸಿ ಬಂದು ಪಿಪಿಇ ತೆಗೆದಾಗ ಬೆವರ ನೀರಿಳಿಯುತ್ತಿತ್ತು. ನಿರ್ಜಲೀಕರಣ ಆಗುವುದರಿಂದ ಪಿಪಿಇ ಧರಿಸಿ ಕೆಲಸ ಮಾಡುವ ಬಹುತೇಕ ಸಿಬ್ಬಂದಿಯು ಮೂರರಿಂದ ನಾಲ್ಕು ಕೆ.ಜಿ ತೂಕ ಕಳೆದುಕೊಂಡಿದ್ದಾರೆ. ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಸಂದರ್ಭ ಬಂದಾಗ ಆರಂಭದಲ್ಲಿ ನನಗೆ ಸ್ವಲ್ಪ ಭಯವಾಗಿತ್ತು. ನನ್ನ ಪತಿ ಧೈರ್ಯ ತುಂಬಿದರು. ನಾನು ಪ್ರತ್ಯೇಕವಾಗಿ ಹಾಸ್ಟೆಲ್‌ನಲ್ಲಿ ಇರುತ್ತೇನೆ ಎಂದೆ. ಆದರೆ ಅವರು ‘ಬೇಡ ಮನೆಗೆ ಬಾ. ಏನು ಆಗಲ್ಲಾ, ಯಾರು ಮಾಡದ ಕೆಲಸವೇನಲ್ಲ’ ಎಂದು ಪ್ರೋತ್ಸಾಹಿಸಿದ್ದರು. ಇದು ಕೋವಿಡ್‌ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು’ ಎಂದು ಸೌಮ್ಯಶ್ರೀ ಸ್ಮರಿಸುವರು.

3. ಶವಸಂಸ್ಕಾರಕ್ಕೆ ನೋಡಲಿಲ್ಲ ಜಾತಿ, ಧರ್ಮ

ಮಹಮ್ಮದ್ ಜಹೀರುದ್ದೀನ್
ಮಹಮ್ಮದ್ ಜಹೀರುದ್ದೀನ್

ಕೋವಿಡ್‌ನಿಂದ ಮೃತಪಟ್ಟವರ ಶವಸಂಸ್ಕಾರಕ್ಕೆ ಅಗತ್ಯವಿರುವ ಬ್ಯಾಗ್ ಸಿದ್ಧಪಡಿಸಿದ ರೂವಾರಿ ಮಹಮ್ಮದ್ ಜಹೀರುದ್ದೀನ್. ತುಮಕೂರು ತಾಲ್ಲೂಕು ಬೆಳಗುಂಬದ ವಡ್ಡರಹಳ್ಳಿಯ ಮಹಮ್ಮದ್ ಜಹೀರುದ್ದೀನ್ ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಬದುಕಿಗಾಗಿ ಅವರು ಕನ್ನಡಕ ವ್ಯಾಪಾರ ಮಾಡುತ್ತಾರೆ.

ಆರಂಭದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಶವಸಂಸ್ಕಾರ ಮಾಡುವುದಕ್ಕೆ ಹಿಂದು ಮುಂದು ನೋಡುವಾಗ ಜಹೀರುದ್ದೀನ್ ಸ್ನೇಹಿತರ ಜತೆ ಈ ಕಾರ್ಯದಲ್ಲಿ ತೊಡಗಿದರು. ಕೋವಿಡ್‌ನಿಂದ ಮೃತಪಟ್ಟವರ ಶವಸಂಸ್ಕಾರಕ್ಕೆ ಬ್ಯಾಗ್ ಸಿದ್ಧಗೊಳಿಸುವಂತೆ ನಗರದ ಚಿಕ್ಕಪೇಟೆಯ ಟೈಲರ್ ಗಣೇಶ್ ಎಂಬುವವರಿಗೆ ಕೋರಿದರು. ಜಹೀರುದ್ದೀನ್ ನೀಡಿದ ಸಲಹೆ ಅನುಸಾರವೇ ಆರು ಬೆಲ್ಟ್‌ಗಳ ಬ್ಯಾಗನ್ನು ಗಣೇಶ್ ಸಿದ್ಧಗೊಳಿಸಿದರು.ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟ ಶೇ 85ರಷ್ಟು ಶವಗಳ ಸಂಸ್ಕಾರವನ್ನು ಜಹೀರ್ ಮತ್ತು ಸ್ನೇಹಿತರು ನಡೆಸಿದ್ದಾರೆ.

‘ಕೆಲವರು ಶವಸಂಸ್ಕಾರ ನಡೆಸಿದ ನಂತರ ಹಣ ಸಹ ಕೊಡಲು ಮುಂದೆ ಬಂದಿದ್ದಾರೆ. ಜೀವನ ಇಷ್ಟೇ ಸರ್. ಇರುವವರೆಗೂ ಬಡಿದಾಟ. ನಾನು ಮಾಡುವುದು ಸಾಮಾಜಿಕ ಕೆಲಸ ಎಂದುಕೊಂಡಿದ್ದೇನೆ. ಇದಕ್ಕೆ ಹಣ ಪಡೆಯಲು ಸಾಧ್ಯವಿಲ್ಲ. ಯಾವ ಜಾತಿ ಧರ್ಮದವರು ಮೃತಪಟ್ಟಿರುತ್ತಾರೋ ಅದರಂತೆಯೇ ಸಂಸ್ಕಾರ ನೆರವೇರಿಸುತ್ತೇವೆ’ ಎಂದು ಜಹೀರ್ ಹೇಳುತ್ತಾರೆ.

4. ಕುಟುಂಬದ ನೈತಿಕ ಬಲ, ರೋಗಿಗಳ ಸೇವೆಗೆ ಆನೆಬಲ

ಡಾ.ಚಂದ್ರಶೇಖರ್
ಡಾ.ಚಂದ್ರಶೇಖರ್

ಜಿಲ್ಲಾ ಆಸ್ಪತ್ರೆಯ ಐಸಿಯು ವಾರ್ಡ್‌ನ ಕೊರೊನಾ ನೋಡಲ್‌ ಅಧಿಕಾರಿ ಡಾ.ಚಂದ್ರಶೇಖರ್, ಕೊರೊನಾ ಆರಂಭದಿಂದ ಇಂದಿನವರೆಗೂ ಪೂರ್ಣ ಪ್ರಮಾಣದಲ್ಲಿ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯಲು ಸಾಧ್ಯವಾಗಿಲ್ಲ. ಕೆಲಸವಿದ್ದ ದಿನಗಳಲ್ಲಿ ಆಸ್ಪತ್ರೆಯಲ್ಲಿ ಉಳಿದರೆ, ಉಳಿದ ದಿನಗಳಲ್ಲಿ ಲಾಡ್ಜ್‌ನಲ್ಲಿ ಇಲ್ಲವೆ ಮನೆಯಲ್ಲಿ ಪ್ರತ್ಯೇಕವಾಗಿ ವಾಸ. ಮನೆಗೆ ಹೋದರೂ ಕುಟುಂಬದ ಜತೆ ಇಂದಿಗೂ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

ನಾವು ರೋಗಿಗಳೊಂದಿಗೆ ನೇರ ಸಂಪರ್ಕಕ್ಕೆ ಬರುವುದರಿಂದ ಕುಟುಂಬ ರಕ್ಷಣೆಯೂ ಮುಖ್ಯ. ಹಾಗಾಗಿ ತಾಯಿಗೆ ಸ್ವಲ್ಪ ದಿನ ತಮ್ಮನ ಮನೆಯಲ್ಲಿ ಇರುವಂತೆ ಸಲಹೆ ನೀಡಿದ್ದೆ. ಆದರೆ, ತಾಯಿ ‘ನೀನು ರೋಗಿಗಳ ಸೇವೆ ಮಾಡು. ನಾವು ನಿನ್ನ ಸೇವೆ ಮಾಡುತ್ತೇವೆ’ ಎಂದು ಕಣ್ಣೀರಾದರು. ಮನೆಯಲ್ಲೇ ಉಳಿದರು. ಆತಂಕದಲ್ಲಿದ್ದ ನನಗೆ ಕುಟುಂಬವೇ ನೈತಿಕ ಬೆಂಬಲ ತುಂಬಿತು’ ಎನ್ನುತ್ತಾರೆ ಚಂದ್ರಶೇಖರ್.

‘ನಮ್ಮ ಸಂಪೂರ್ಣ ಸಮಯವನ್ನು ಕೊರೊನಾ ನಿಯಂತ್ರಿಸಲು ಮೀಸಲಿಟ್ಟಿದ್ದೇವೆ. ಆತಂಕಕ್ಕೆ ಒಳಗಾದ ಸಿಬ್ಬಂದಿಗೆ ಕೌನ್ಸೆಲಿಂಗ್‌ ಮಾಡಿ ಧೈರ್ಯ ತುಂಬಿದೆವು. ರೋಗಿಯ ಆರೋಗ್ಯದ ಆತಂಕ ಇದ್ದೇ ಇದೆ. ಆದರೆ ವೈಯಕ್ತಿಕ ಆತಂಕ ಇಲ್ಲವೇ ಇಲ್ಲ. ಎಷ್ಟೇ ಶ್ರಮ ಹಾಕಿದರೂ ಕೆಲವರನ್ನು ಸಾವಿನಿಂದ ತಪ್ಪಿಸಲು ಆಗಲೇ ಇಲ್ಲ. ಈ ಬಗ್ಗೆ ಬೇಸರವಿದೆ’ ಎನ್ನುವರು.

5. ಆಸ್ಪತ್ರೆಗೆ ಸಾಗಿಸುವ ಕಾಯಕ ನಿರಂತರ

ಪ್ರಭುದೇವಯ್ಯ ದೇವರಮನಿ
ಪ್ರಭುದೇವಯ್ಯ ದೇವರಮನಿ

ಜಿಲ್ಲಾ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಪ್ರಭುದೇವಯ್ಯ ದೇವರಮನಿ ಮೂಲತಃ ಬೆಳಗಾವಿ ಜಿಲ್ಲೆಯವರು. ಎರಡು ವರ್ಷಗಳಿಂದ ಇಲ್ಲಿ ಆಂಬುಲೆನ್ಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಆರಂಭವಾದ ನಂತರ ರಜೆಯ ಬಗ್ಗೆ ಗಮನವಹಿಸದೆ ದೀರ್ಘವಾಗಿ ಕೆಲಸ ಮಾಡಿದ್ದಾರೆ.

ಆರಂಭದಲ್ಲಿ ಅಳುಕುತ್ತಲೇ ರೋಗಿಗಳನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆತಂದ ಅವರು ನಂತರ ಸಾಮಾನ್ಯ ರೋಗಿಗಳನ್ನು ಕರೆ ತರುವ ರೀತಿಯಲ್ಲಿಯೇ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ಕರೆ ತಂದರು.

‘ಕೋವಿಡ್ ಹಂತ ಹಂತವಾಗಿ ಹೆಚ್ಚುತ್ತಿತ್ತು. ಆ ಸಂದರ್ಭದಲ್ಲಿ ನನ್ನ ಸಹೋದ್ಯೋಗಿ ಊರಿಗೆ ಹೋದವರು ಅಲ್ಲಿಯೇ ಲಾಕ್ ಆದರು. ನನಗೆ ಹೆಚ್ಚಿನ ಕೆಲಸ ಬಿತ್ತು. ಬೆಳಿಗ್ಗೆ ಕೆಲಸ ಆರಂಭವಾದರೆ ರಾತ್ರಿಯವರೆಗೂ ನಿರಂತರವಾಗಿ ಕೆಲಸಗಳನ್ನು ಮಾಡುತ್ತಿದ್ದೆವು’ ಎಂದು ಮಾಹಿತಿ ನೀಡುವರು.

6. ಸೀಲ್ ಡೌನ್‌, ಸೀಲ್‌ ಒಪನ್‌ ರೂವಾರಿ

ಕೆಂಪಣ್ಣ
ಕೆಂಪಣ್ಣ

1997ರಿಂದ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಕೆಂಪಣ್ಣ, ಕೋವಿಡ್ ಪೀಡಿತರ ಮನೆಗಳನ್ನು ಸೀಲ್‌ಡೌನ್ ಮತ್ತು ಸೀಲ್‌ ಒಪನ್ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರೇ ಹೇಳುವಂತೆ 30ಕ್ಕೂ ಹೆಚ್ಚು ಕಡೆಗಳಲ್ಲಿ ಈ ಕೆಲಸ ಮಾಡಿದ್ದಾರೆ. ಕೋವಿಡ್ ಕೆಲಸದಲ್ಲಿ ತೊಡಗಿರುವಾಗಲೇ ಕೋವಿಡ್‌ಗೆ ತುತ್ತಾಗಿ ಚಿಕಿತ್ಸೆ ಸಹ ಪಡೆದವರು. ಗುಣವಾದ ನಂತರ ಮತ್ತೆ ಈ ಕೆಲಸದಲ್ಲಿ ತೊಡಗಿಸಿಕೊಂಡರು.

‘ಕೋವಿಡ್ ಸಮಯದಲ್ಲಿ ನಾಲ್ಕು ತಿಂಗಳು ಇದೇ ಕೆಲಸ ಮಾಡಿದೆ. ಬೆಳಿಗ್ಗೆ 5.30ಕ್ಕೆ ಹಾಜರಾತಿ ಹಾಕಿ ಕೆಲಸದಲ್ಲಿ ತೊಡಗಿದರೆ ಬೆಳಿಗ್ಗೆ 10ಕ್ಕೆ ಕೆಲಸ ಮುಗಿಯುತ್ತಿತ್ತು. ಆರಂಭದಲ್ಲಿ ಯಾವುದೇ ಸುರಕ್ಷಾ ಸಾಧನಗಳು ಇಲ್ಲದೆಯೇ ಸೀಲ್‌ಡೌನ್‌ ಕೆಲಸಗಳನ್ನು ಮಾಡಿದೆವು. ಈ ಕೆಲಸ ಮಾಡುವಾಗಲೇ ನನಗೂ ಕೋವಿಡ್ ತಗುಲಿತು. ಚಿಕಿತ್ಸೆ, ಹೋಂ ಕ್ವಾರಂಟೈನ್ ಎಂದು 21 ದಿನ ರಜೆ ಕೊಟ್ಟಿದ್ದರು’ ಎಂದು ಸ್ಮರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT