ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಬ್ಬಿ: ಪೊಲೀಸರ ಸರ್ಪಗಾವಲಿನ ನಡುವೆ ರಸ್ತೆ ತಡೆ

Published 30 ಮೇ 2024, 13:25 IST
Last Updated 30 ಮೇ 2024, 13:25 IST
ಅಕ್ಷರ ಗಾತ್ರ

ಗುಬ್ಬಿ: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್‌ ಕಾಮಗಾರಿ ವಿರೋಧಿಸಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ ಗೃಹ ಕಚೇರಿ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆ ಹಿನ್ನಲೆಯಲ್ಲಿ ತಾಲ್ಲೂಕಿನಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.

ಮುಖ್ಯ ರಸ್ತೆಗಳ ಆಯಕಟ್ಟಿನ ಜಾಗಗಳಲ್ಲಿ ಪೊಲೀಸರು ಸರ್ಪಗಾವಲು ಇತ್ತು. ತಾಲ್ಲೂಕಿನ ಗಡಿ ಕಳ್ಳಿಪಾಳ್ಯದ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾರ ಸಂಖ್ಯೆಯಲ್ಲಿದ್ದ ಪೊಲೀಸರು ಕಟ್ಟುನಿಟ್ಟಿನ ವಿಚಾರಣೆ ನಂತರ ಪ್ರಯಾಣಿಕರನ್ನು ಮುಂದೆ ಕಳುಹಿಸುತ್ತಿದ್ದರು.

ಪಟ್ಟಣದ ಹೆದ್ದಾರಿಯಲ್ಲಿ ಗುಂಪು ಸೇರಿದ ಪ್ರತಿಭಟನಕಾರರು ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು.  ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.

ಅವೈಜ್ಞಾನಿಕವಾಗಿ ನಿರ್ಮಿಸುತ್ತಿರುವ ಕಾಲುವೆ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಎಕ್ಸ್‌ಪ್ರೆಸ್‌ ಕಾಲುವೆ ನಿರ್ಮಾಣವಾದಲ್ಲಿ ಜಿಲ್ಲೆಗೆ ಅದರಲ್ಲಿಯೂ ವಿಶೇಷವಾಗಿ ತಾಲ್ಲೂಕಿಗೆ ಅನ್ಯಾಯವಾಗುವುದರಿಂದ ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸಲು ಬಿಡುವುದಿಲ್ಲ. ಮಾಗಡಿಗೆ ನಿಗದಿಗೊಳಿಸಿರುವ ನೀರನ್ನು ಪ್ರಸ್ತುತ ಇರುವ ಹೇಮಾವತಿ ಕಾಲುವೆಯಲ್ಲಿಯೇ ತೆಗೆದುಕೊಂಡು ಹೋಗಲು ಅಭ್ಯಂತರ ಇಲ್ಲ ಎಂದು ಮುಖಂಡ ಶಂಕರ್ ಕುಮಾರ್ ಹೇಳಿದರು.

ಗ್ರಾಮೀಣ ಭಾಗದಲ್ಲಿಯೂ ಪೊಲೀಸರನ್ನು ನಿಯೋಜಿಸುವ ಮೂಲಕ ಸರ್ಕಾರ ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಖಂಡನೀಯ. ಯಾವುದೇ ಕಾರಣಕ್ಕೂ ರೈತ ಸಂಘವು ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT