ಮಂಗಳವಾರ, ಮೇ 17, 2022
29 °C
ಕಲ್ಲು ಕ್ವಾರಿಯಲ್ಲಿ ನಿಷೇಧಿತ ಸ್ಫೋಟಕಗಳ ಬಳಕೆ: ಸ್ಥಳೀಯರ ಆರೋಪ

ಕಲ್ಲು ಕ್ವಾರಿಯಲ್ಲಿ ನಿಷೇಧಿತ ಸ್ಫೋಟಕ: ಖಾಲಿಯಾಗುತ್ತಿದೆ ಏಳುವರಸೆ ಗುಡ್ಡ!

ಸುಪ್ರತೀಕ್.ಎಚ್.ಬಿ. Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ಕಲ್ಲು ಗಣಿಗಾರಿಕೆ ಹೆಸರಿನಲ್ಲಿ ತಾಲ್ಲೂಕಿನ ಪ್ರಮುಖ ಬೆಟ್ಟ, ಗುಡ್ಡಗಳೇ ಕಣ್ಮರೆಯಾಗುವ ಆತಂಕ ಎದುರಾಗಿದೆ.

ಬಂಡೆಗೇಟ್, ಶಾಂತಿನಿವಾಸ ಎಸ್ಟೇಟ್ ಬಳಿಯ ಬೆನ್ನಾಯನಹಳ್ಳಿನ ಅಂಕೇನಹಳ್ಳಿ ಗುಡ್ಡದಲ್ಲಿ (ಏಳು ವರಸೆ ಗುಡ್ಡ) ಕಲ್ಲುಗಣಿಗಾರಿಕೆ ನಡೆಯುತ್ತಿರುವುದರಿಂದ ಸುತ್ತಲಿನ ಹತ್ತಾರು ಹಳ್ಳಿಗಳ ಜನರು ತೊಂದರೆ ಅನುಭವಿಸುತ್ತಿದ್ದು, ವ್ಯಾಪಕ ದೂರುಗಳು ಕೇಳಿಬರುತ್ತಿವೆ.

12 ಎಕರೆ ವಿಸ್ತೀರ್ಣ ಹೊಂದಿರುವ ಗುಡ್ಡದಲ್ಲಿ 5.34 ಎಕರೆಯಷ್ಟನ್ನು 2020ರಿಂದ 2022ರವರಗೆ ಗಣಿಗಾರಿಕೆಗೆ ಅನುಮತಿ ಪಡೆಯಲಾಗಿದೆ. ನಿತ್ಯವೂ ಸ್ಫೋಟಕಗಳನ್ನು ಬಳಸಲಾಗುತ್ತಿದೆ. ‘ರಿಗ್ ಬ್ಲಾಸ್ಟ್’ ಎಂಬ ನಿಷೇಧಿತ ಸ್ಫೋಟಕಗಳನ್ನು ಬಳಸುತ್ತಿರುವುದರಿಂದ ಸುತ್ತಲಿನ ಹತ್ತಾರು ಹಳ್ಳಿಗಳಿಗೆ ಇದರ ಕಂಪನದ ಅನುಭವವಾಗುತ್ತಿದೆ ಎನ್ನುತ್ತಾರೆ ಸ್ಥಳೀಯರಾದ ರೋಹನ್.

ಗುಡ್ಡದಿಂದ ಕೆಲವೇ ಮೀಟರ್‌ಗಳ ಅಂತರದಲ್ಲಿ 2-3 ಗ್ರಾಮಗಳಿವೆ. ಗ್ರಾಮಗಳಲ್ಲಿನ ಕೊಳವೆ ಬಾವಿಗಳ ನೀರು ಬತ್ತಿದೆ. ಕಂಪನಕ್ಕೆ ಭೂಮಿಯ ಒಳಪದರದಲ್ಲಿ ಇದ್ದ ನೀರಿನ ನೆಲೆ ಇಲ್ಲದಂತಾಗುತ್ತಿದೆ.

‘ಸಂಜೆ ಮಾತ್ರ ಬ್ಲಾಸ್ಟ್ ಮಾಡುತ್ತಿದ್ದು, ಅದಕ್ಕೆ ಮೊದಲು ಸೈರನ್ ಹಾಕಲಾಗುತ್ತಿದೆ. ಆಗ ಯಾರೂ ಮನೆಯೊಳಗೆ ಇರಬಾರದು. ಇದ್ದು ಪ್ರಣಾಪಾಯವಾದರೆ ನಮಗೆ ಸಂಬಂಧವಿಲ್ಲ’ ಎನ್ನುತ್ತಾರೆ ಗುತ್ತಿಗೆ ಕಂಪನಿ ಸಿಬ್ಬಂದಿ.

ಸ್ಫೋಟದ ನಂತರ 4-5 ಕಿ.ಮೀ. ದೂರದವರೆಗೂ ಹೊಗೆ ಆವರಿಸಲಿದ್ದು, ಒಬ್ಬರು ಇನ್ನೊಬ್ಬರಿಗೆ ಕಾಣುವುದಿಲ್ಲ. ಪರಿಸರದಲ್ಲಿ ಕೆಟ್ಟ ಗಾಳಿ ಸೇರಿ ಉಸಿರಾಡಲು ಸಾಧ್ಯವಾಗದಂತಹ ವಾಸನೆ ನಿರ್ಮಾಣವಾಗುತ್ತದೆ. ಈಗಾಗಲೇ ಮನೆಗಳ ಗೋಡೆಗಳಲ್ಲಿ ಬಿರುಕು ಬಿಟ್ಟಿದೆ ಎಂದು ಶಾಂತಿನಿವಾಸ್ ಎಸ್ಟೇಟ್ ಜನರು ಆರೋಪಿಸುತ್ತಿದ್ದಾರೆ.

‘ಸ್ಥಳೀಯರ ದೂರಿನ ಮೇರೆಗೆ ಬಿಜೆಪಿ ಮುಖಂಡ ಲೋಕೇಶ್ವರ ಕಲ್ಲುಗಣಿಗಾರಿಕೆಯ ಸ್ಥಳಕ್ಕೆ ತೆರಳಿದ ಸಂದರ್ಭದಲ್ಲಿ ಸ್ಫೋಟಕಗಳನ್ನು ತುಂಬಿದ ವಾಹನವೊಂದನ್ನು ಪತ್ತೆಹಚ್ಚಿದ್ದು, ಅದರ ವಿಡಿಯೊ ಸೆರೆ ಹಿಡಿದಿದ್ದಾರೆ. ಇದನ್ನು ಕಂಡ ಅಲ್ಲಿನ ಸಿಬ್ಬಂದಿ ವಾಹನದಲ್ಲಿದ್ದ ಸ್ಫೋಟಕಗಳನ್ನು ಗುಡ್ಡದ ತುಂಬ ಎಲ್ಲೆಂದರಲ್ಲಿ ಎಸೆದಿದ್ದಾರೆ. ಅತ್ಯಧಿಕ ಸ್ಫೋಟಕಗಳಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಸ್ಥಳೀಯರಾದ ಭರತ್.

ಗುಡ್ಡದ ಸುತ್ತಲೂ ನಾಲ್ಕೈದು ಕೆರೆಗಳಿವೆ. ಪಕ್ಕದಲ್ಲೇ ಈರಲಗೆರೆ ಅರಣ್ಯ ಪ್ರದೇಶವಿದೆ. ಗಣಿಗಾರಿಕೆಯಿಂದಾಗಿ ಅಲ್ಲಿನ ಜೀವ ಸಂಕುಲ ಕಣ್ಮರೆಯಾಗುತ್ತಿದೆ. ಇಲ್ಲಿನ ಕೆರೆ– ಕಟ್ಟೆಗಳ ನೀರನ್ನು ಜಾನುವಾರುಗಳು ಕುಡಿಯುತ್ತಿಲ್ಲ. ಕೆಲ ದಿನಗಳ ಹಿಂದೆ ಸಾಮೂಹಿಕವಾಗಿ ಪಕ್ಷಿಗಳು ಕೆರೆ ಪಕ್ಕ  ಸತ್ತು ಬಿದ್ದಿದ್ದವು ಎಂದು ಗ್ರಾಮಸ್ಥರೊಬ್ಬರು ನೆನಪಿಸಿಕೊಂಡರು.

ಗಣಿಗಾರಿಕೆ ಸ್ಥಳಕ್ಕೆ ಒಂದು ಕಿ.ಮೀ. ದೂರದಿಂದ ನೇರವಾಗಿ ವಿದ್ಯುತ್ ಪ್ರವರ್ತಕದಿಂದಲೇ ವಿದ್ಯುತ್ ಕದಿಯುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ಗುಡ್ಡದಲ್ಲಿ ಗಣಿಗಾರಿಕೆ ಪ್ರಾರಂಭವಾಗಿ ಕೆಲವೇ ತಿಂಗಳಲ್ಲಿ ಶೇ 40ರಷ್ಟು ಗುಡ್ಡವು ಬರಿದಾಗಿದೆ. ಪರವಾನಗಿಯ ಅವಧಿ ಮುಗಿಯುವ ಮೊದಲೇ ಗುಡ್ಡ ಬರಿದಾಗುವ ಮುನ್ಸೂಚನೆ ಕಾಣುತ್ತಿದೆ. ಕಲ್ಲು ಕ್ವಾರಿಯ ಸುತ್ತಲೂ ಹತ್ತಾರು ಜೆಲ್ಲಿ ಕ್ರಷರ್‌ಗಳು ತಲೆ ಎತ್ತಿವೆ.

ಸದ್ಯಕ್ಕೆ ಗಣಿಗಾರಿಕೆ ನಡೆಯುತ್ತಿರುವ ಗುಡ್ಡವನ್ನು ಯಾರೇ ಬಂದು ವೀಕ್ಷಿಸಿದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿರುವ ಗಣಿಗಾರಿಕೆ ಗುತ್ತಿಗೆ ಮಾದರಿಗೂ ವಾಸ್ತವಿಕವಾಗಿ ನಡೆಯುತ್ತಿರುವ ಮಾದರಿಗೂ ತಾಳಮೇಳವೇ ಇಲ್ಲದಿರುವುದು ಸ್ಪಷ್ಟವಾಗುತ್ತದೆ. ಸುಮಾರು 50 ಅಡಿಗೂ ಹೆಚ್ಚಿನ ಅಳದವರೆಗೂ ಬಂಡೆಯನ್ನು ಸ್ಫೋಟಿಸುತ್ತಿರುವುದು ಕಾಣಸಿಗುತ್ತದೆ.

ಗುಡ್ಡದ ಮೇಲ್ಬಾಗದಿಂದ ತಳಭಾಗದವರೆಗೂ ಕೊಳವೆ ಬಾವಿ ಮಾದರಿಯಲ್ಲಿ ರಂಧ್ರವನ್ನು ಕೊರೆದು ಅದಕ್ಕೆ ಸ್ಫೋಟಕ ಬಳಸಿ ಸ್ಫೋಟಿಸಲಾಗುತ್ತಿದೆ. ಇದರಿಂದಾಗಿ ಪೂರ್ಣ ಪ್ರಮಾಣದ ಗುಡ್ಡವೇ ಕಂಪಿಸುವ ಜೊತೆಗೆ ಸುತ್ತಲಿನ 5-6 ಕಿ.ಮೀ. ದೂರಕ್ಕೂ ಭೂಮಿ ಕಂಪಿಸುತ್ತದೆ. ಇಂತಹ ಬ್ಲಾಸ್ಟ್ ಮಾಡಬಾರದೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸ್ಪಷ್ಟವಾಗಿ ತಿಳಿಸಿದ್ದರೂ ಅದನ್ನೇ ಮಾಡುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು