ತುಮಕೂರು: ಕಲೆ, ಸಾಹಿತ್ಯ, ಪ್ರಕೃತಿ ನಮ್ಮ ಬದುಕಿನ ಜತೆಗೆ ಬೆಸೆದುಕೊಂಡಿದೆ. ಸಾಹಿತಿಗಳಿಗೆ ಮನ್ನಣೆ ನೀಡುವ ಸಂಸ್ಕೃತಿ ನಮ್ಮದು ಎಂದು ಎಲೆರಾಂಪುರ ಮಠದ ಹನುಮಂತನಾಥ ಸ್ವಾಮೀಜಿ ಹೇಳಿದರು.
ನಗರದಲ್ಲಿ ಶನಿವಾರ ಕೋಳಾಲ ಗ್ರಾಮ ಪಂಚಾಯಿತಿ, ಮಾರುತಿ ಕಲಾ ಸಂಘ, ಸೌಬನ ಪ್ರಕಾಶನದಿಂದ ಹಮ್ಮಿಕೊಂಡಿದ್ದ ಲೇಖಕ ಉಮೇಶ್ ಎನ್.ಯಲಚಿಗೆರೆ ರಚನೆಯ ‘ಸುಜನರ ಕೋಳಾಲ ಆದಿ-ಆಧುನಿಕ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಾಶ್ಚಿಮಾತ್ಯ ದೇಶದ ಮತ್ತು ನಮ್ಮ ರಾಷ್ಟ್ರದ ಸಂಸ್ಕೃತಿಯಲ್ಲಿ ವ್ಯತ್ಯಾಸವಿದೆ. ಗಿಡ–ಮರ, ಪ್ರಾಣಿ–ಪಕ್ಷಿ, ಪ್ರಕೃತಿಯನ್ನು ಆರಾಧಿಸುವ ಗುಣ ಭಾರತೀಯರಲ್ಲಿದೆ. ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ, ವೇದಿಕೆ ಕಲ್ಪಿಸುವ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ, ‘ನಮ್ಮ ಮೂಲ ಸಂಸ್ಕೃತಿ, ಆಚರಣೆಗಳು ನಶಿಸುತ್ತಿವೆ. ಹಳ್ಳಿ ವಾತಾವರಣ ಮರೆಯಾಗುತ್ತಿದೆ. ಯುವಕರು ಬದುಕು ಕಟ್ಟಿಕೊಳ್ಳಲು ನಗರಗಳಲ್ಲಿ ನೆಲೆಸಿದ್ದು, ಗ್ರಾಮೀಣ ಪ್ರದೇಶದಲ್ಲಿ ವಯೋವೃದ್ಧರು ಮಾತ್ರ ಉಳಿದಿದ್ದಾರೆ. ಈ ಬದಲಾವಣೆ ನಮ್ಮ ಸಾಂಸ್ಕೃತಿಕ ಬದುಕಿಗೆ ಧಕ್ಕೆ ತಂದಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಉಪನ್ಯಾಸಕರಾದ ರಾಮಲಿಂಗೇಶ್ವರ, ಎ.ಓ.ನರಸಿಂಹಮೂರ್ತಿ ಕೃತಿ ಕುರಿತು ಮಾತನಾಡಿದರು. ಲೇಖಕಿ ಬಾ.ಹ.ರಮಾಕುಮಾರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಪದಾಧಿಕಾರಿಗಳಾದ ರುದ್ರಮೂರ್ತಿ ಎಲೆರಾಂಪುರ, ಎಂ.ಎಚ್.ನಾಗರಾಜು, ಅಖಿಲ ಕುಂಚಿಟಿಗ ಮಹಾ ಮಂಡಳ ಅಧ್ಯಕ್ಷ ಎಚ್.ರಂಗಹನುಮಯ್ಯ, ಉಪನ್ಯಾಸಕ ಕೆ.ವಿ.ಮುದ್ದುವೀರಪ್ಪ, ಕೆಂಪೇಗೌಡ ಬ್ಯಾಂಕ್ ಅಧ್ಯಕ್ಷ ಎಲ್.ಲಿಂಗಣ್ಣ, ಕೋಳಾಲ ಗ್ರಾ.ಪಂ ಅಧ್ಯಕ್ಷ ಕೆ.ಜಿ.ಶ್ರೀನಿವಾಸಮೂರ್ತಿ, ಮಾರುತಿ ಕಲಾ ಸಂಘದ ಅಧ್ಯಕ್ಷ ಬಿ.ಆರ್.ಅನೀಶ್, ಕುಂಚಶ್ರೀ ಸಹಕಾರ ಬ್ಯಾಂಕ್ ಅಧ್ಯಕ್ಷ ಡಿ.ಕೆ.ರಂಗನಾಥ್ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.