ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಕೆ ಕಂಡ ಹುಣಸೆ ಹಣ್ಣಿನ ಬೆಲೆ

ಆವಕ ಹೆಚ್ಚಳ*ಉತ್ತಮ ಬೆಲೆ* ಇನ್ನೂ ಒಂದು ತಿಂಗಳು ಬೆಲೆ ಸ್ಥಿರ
Published 27 ಫೆಬ್ರುವರಿ 2024, 0:30 IST
Last Updated 27 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ತುಮಕೂರು: ರಾಜ್ಯದ ಅತಿದೊಡ್ಡ ಹುಣಸೆ ಹಣ್ಣಿನ ಮಾರುಕಟ್ಟೆಯಾದ ನಗರದ ಎಪಿಎಂಸಿಗೆ ಹಣ್ಣಿನ ಆವಕದಲ್ಲಿ ಹೆಚ್ಚಳವಾಗಿದ್ದು, ಉತ್ತಮ ಬೆಲೆಯೂ ಸಿಗುತ್ತಿದೆ. ಆವಕ ಹೆಚ್ಚಿದಂತೆ ಧಾರಣೆಯೂ ಕುಸಿಯಬಹುದು ಎಂಬ ಆತಂಕ ಸದ್ಯದ ಮಟ್ಟಿಗೆ ದೂರವಾದಂತೆ ಕಾಣುತ್ತಿದೆ.

ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ಗುಣಮಟ್ಟದ ಹಣ್ಣು ಕ್ವಿಂಟಲ್‌ಗೆ ₹27 ಸಾವಿರದವರೆಗೂ ಮಾರಾಟವಾಗಿದೆ. ಗುಣಮಟ್ಟದ ಹಣ್ಣಿಗೆ ಉತ್ತಮ ಬೆಲೆ ಸಿಗುತ್ತಿದೆ. ಗುಣಮಟ್ಟ ಇಲ್ಲದಿದ್ದರೆ ಧಾರಣೆ ಸಹಜವಾಗಿ ಕಡಿಮೆಯಾಗುತ್ತಿದೆ. ಹೊರಗಡೆಯಿಂದ ಬರುವ ವ್ಯಾಪಾರಿಗಳು ಸಹ ಗುಣಮಟ್ಟದ ಹಣ್ಣಿಗೆ ಹೆಚ್ಚು ಹಣ ಕೊಟ್ಟು ಕೊಂಡುಕೊಳ್ಳುತ್ತಿದ್ದಾರೆ. ಹಾಗಾಗಿ, ಬೆಲೆ ಏರಿಕೆಯಾಗುತ್ತಿದೆ ಎಂದು ವರ್ತಕರು ಹೇಳುತ್ತಿದ್ದಾರೆ.

ಸೋಮವಾರ ಬಟವಾಡಿ ಎಪಿಎಂಸಿ ಮಾರುಕಟ್ಟೆಗೆ ಸುಮಾರು 20 ಲೋಡ್‌ ಹುಣಸೆ ಬಂದಿದೆ. ಗುಣಮಟ್ಟದ ಹಣ್ಣು ಕ್ವಿಂಟಲ್‌ಗೆ ₹27 ಸಾವಿರಕ್ಕೆ ಮಾರಾಟವಾಗಿದೆ. ಅದಕ್ಕಿಂತ ಸ್ವಲ್ಪ ಕಡಿಮೆ ಗುಣಮಟ್ಟದ ಹಣ್ಣು ₹20 ಸಾವಿರದಿಂದ ₹27 ಸಾವಿರದ ವರೆಗೆ, ಸಾಧಾರಣ ಗುಣಮಟ್ಟದ ಹಣ್ಣು ₹15 ಸಾವಿರದಿಂದ ₹19 ಸಾವಿರ ಹಾಗೂ ಅತ್ಯಂತ ಕಡಿಮೆ ದರ್ಜೆಯ ಹಣ್ಣು ಕ್ವಿಂಟಲ್‌ಗೆ ₹10 ಸಾವಿರದಿಂದ ₹12 ಸಾವಿರಕ್ಕೆ ಮಾರಾಟವಾಗಿದೆ.

ಹೆಚ್ಚಿನ ಪ್ರಮಾಣದಲ್ಲಿ ಹುಣಸೆ ಹಣ್ಣು ಬರಲಾರಂಭಿಸಿದರೆ ಬೆಲೆ ಇಳಿಕೆಯಾಗಬಹುದು. ಹಿಂದಿನ ವರ್ಷ ಇದೇ ಅವಧಿಯಲ್ಲಿ ಧಾರಣೆ ಇಳಿಕೆಯಾಗಿತ್ತು. ಈ ಬಾರಿಯೂ ಅಂಥದ್ದೆ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ರೈತರಲ್ಲಿ ಇತ್ತು. ಆದರೆ ಈ ಸಲ ಸದ್ಯದ ಮಟ್ಟಿಗೆ ಬೆಲೆ ಕುಸಿಯುವಂತೆ ಕಾಣುತ್ತಿಲ್ಲ. ಇನ್ನೂ ಒಂದು ತಿಂಗಳ ಕಾಲ ಇದೇ ದರ ಇರುತ್ತದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಆವಕವೂ ಹೆಚ್ಚುತ್ತಿದೆ. ಖರೀದಿದಾರರು ಹೊರಗಡೆಯಿಂದ ಬರುತ್ತಿದ್ದಾರೆ. ಗುಣಮಟ್ಟದ ಹಣ್ಣು ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ. ಗುಣಮಟ್ಟದ ಹಣ್ಣಿಗೆ ಬೆಲೆ ಇದ್ದೇ ಇದೆ ದೇವೇಂದ್ರಪ್ಪ ವರ್ತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT