ಶನಿವಾರ, ಅಕ್ಟೋಬರ್ 1, 2022
23 °C
ಕ್ವಿಟ್‌ ಇಂಡಿಯಾ ಚಳವಳಿ ಭಾಗವಾಗಿ ಅನಂತೇಶ್ವರ ದೇವಸ್ಥಾನದ ಮಾನಸ್ಥಂಭದ ಮೇಲೆ ರಾರಾಜಿಸಿದ ತ್ರಿವರ್ಣ ಧ್ವಜ

ಉಡುಪಿ: 8 ದಶಕಗಳ ಹಿಂದೆ ಉಡುಪಿಯಲ್ಲಿ ಹಾರಿತ್ತು ತಿರಂಗ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

ಉಡುಪಿ: ಅದು 1942ರ ಸಮಯ. ಮಹಾತ್ಮಾ ಗಾಂಧೀಜಿ ಕರೆ ನೀಡಿದ್ದ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ (ಕ್ವಿಟ್‌ ಇಂಡಿಯಾ) ಚಳವಳಿ ದೇಶದಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಆ ಕಿಚ್ಚಿನ ಒಂದು ಕಿಡಿ ಉಡುಪಿಯಲ್ಲಿ ಪ್ರಜ್ವಲಿಸಿ ಇಡೀ ಜಿಲ್ಲೆಗೆ ದೇಶಪ್ರೇಮ ವ್ಯಾಪಿಸಿತು. ಆ ಚಾರಿತ್ರಿಕ ಘಟನೆ ನಡೆದಿದ್ದು ಕೃಷ್ಣಮಠದ ರಥಬೀದಿಯಲ್ಲಿರುವ ಅನಂತೇಶ್ವರ ದೇವಸ್ಥಾನದ ಎದುರಿಗಿರುವ ಮಾನಸ್ಥಂಭದ ಮೇಲೆ.

ಮಾನಸ್ಥಂಬದ ಮೇಲೆ ಹಾರಿತು ತ್ರಿವರ್ಣ: 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯ ಭಾಗವಾಗಿ ಪ್ರಸ್ತುತ ದೇಶದಾದ್ಯತ ‘ಹರ್‌ ಘರ್‌ ತಿರಂಗ’ ಕಾರ್ಯಕ್ರಮದಡಿ ಮನೆ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಲಾಗುತ್ತಿದ್ದರೆ, 8 ದಶಕಗಳಿಗೂ ಮುನ್ನವೇ ಉಡುಪಿಯಲ್ಲಿ ತ್ರಿವರ್ಣ ಧ್ವಜ ರಾರಾಜಿಸಿತ್ತು.

ಐತಿಹಾಸಿಕ ಘಟನೆ:

ಆ.8ರ ಮಧ್ಯರಾತ್ರಿ ಮಹಾತ್ಮಾ ಗಾಂಧೀಜಿ ಮುಂಬೈನಲ್ಲಿ ‘ಕ್ವಿಟ್‌ ಇಂಡಿಯಾ’ ಘೋಷಣೆ ಮೊಳಗಿಸಿದಾಗ ಚಳವಳಿಯ ಕಾವು ಉಡುಪಿಗೂ ತಲುಪಿ ಇಲ್ಲಿನ ಹೋರಾಟಗಾರರನ್ನು ಬಡಿದೆಬ್ಬಿಸಿತ್ತು. ‘ಪ್ರತಿಯೊಬ್ಬ ಭಾರತೀಯನೂ ಸ್ವತಂತ್ರ ಹಾಗೂ ನೇತಾರ’ ಎಂದು ಘೋಷಿಸಿಕೊಳ್ಳಬೇಕು ಎಂಬ ಗಾಂಧೀಜಿ ಕರೆ ಪ್ರೇರೇಪಿಸಿತು.

ಅದರಂತೆ ಅಂದಿನ ಮುಂಚೂಣಿ ಹೋರಾಟಗಾರರಾದ ಶ್ರೀನಿವಾಸ ಉಪಾಧ್ಯಾಯ ಪಣಿಯಾಡಿ (ಎಸ್‌.ಯು.ಫಣಿಯಾಡಿ) ನೇತೃತ್ವದಲ್ಲಿ ಬಿಸಿ ರಕ್ತದ ಯುವಕರ ಪಡೆ ಕ್ವಿಟ್‌ ಇಂಡಿಯಾ ಚಳವಳಿಯ ಭಾಗವಾಗಿ ಉಡುಪಿಯ ಪ್ರಮುಖ ಪರಿಸರ ಹಾಗೂ ಅತ್ಯಂತ ಎತ್ತರದ ಸ್ಥಳದಲ್ಲಿ ಕೇಸರಿ, ಬಿಳಿ, ಹಸಿರು ಹಾಗೂ ಮಧ್ಯೆ ಚರಕವನ್ನೊಳಗೊಂಡ ತ್ರಿವರ್ಣ ಧ್ವಜವನ್ನು ಹಾರಿಸಲು ನಿರ್ಧರಿಸಿ ಬ್ರಿಟಿಷರಿಗೆ ಪತ್ರ ಬರೆದು ಬಹಿರಂಗ ಸವಾಲೊಡ್ಡಿದರು.

ಅದರಂತೆ, ಎಸ್‌.ಯು.ಫಣಿಯಾಡಿ ಅವರ ಗರಡಿಯಲ್ಲಿದ್ದ ಅತ್ಯಂತ ಚಾಣಾಕ್ಷ ಹಾಗೂ ನೆರಳು ಬೆಳಕಿನಾಟದ ತಾಂತ್ರಿಕತೆಯಲ್ಲಿ ಫಳಗಿದ್ದ ಯು.ಶೇಷ ಶೇರಿಗಾರ್‌ ತ್ರಿವರ್ಣ ಧ್ವಜ ಹಾರಿಸುವ ಕಾರ್ಯದ ಮುಂದಾಳತ್ವ ವಹಿಸಿಕೊಂಡರು. ಉಡುಪಿಯ ಕೃಷ್ಣಮಠದ ಕಟ್ಟಿಗೆ ರಥದ ಮೇಲೆ ಅಥವಾ ಕೃಷ್ಣಮಠದ ರಥಬೀದಿಯಲ್ಲಿರುವ ಅನಂತೇಶ್ವರ ದೇವಸ್ಥಾನದ ಎದುರಿಗಿರುವ ಮಾನಸ್ಥಂಭದ ಮೇಲೆ ತ್ರಿವರ್ಣ ಧ್ವಜ ಹಾರಿಸಲು ನಿರ್ಧರಿಸಲಾಯಿತು.

ಈ ವಿಷಯ ಗುಪ್ತವಾರ್ತೆಯ ಮೂಲಕ ಬ್ರಿಟಿಷರ ಕಿವಿ ಮುಟ್ಟಿತು. ತ್ರಿವರ್ಣ ಧ್ವಜ ಹಾರಿಸಲು ತಡೆಯಲು ಕೃಷ್ಣಮಠದ ಪರಿಸರದ ಸುತ್ತಲೂ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಪೊಲೀಸರನ್ನು ನಿಯೋಜಿಸಲಾಯಿತು. ದಿನದ 24 ಗಂಟೆ ಪೊಲೀಸರು ಪಹರೆಗೆ ನಿಂತರು. ಆಗಸ್ಟ್‌ 12ರ ಮಧ್ಯರಾತ್ರಿ ಪೊಲೀಸರ ಹದ್ದಿನ ಕಣ್ಣುಗಳನ್ನು ತಪ್ಪಿಸಿದ ಯು.ಶೇಷ ಶೇರಿಗಾರ್‌ ನೇತೃತ್ವದ ತಂಡ ಧ್ವಜ ಹಾರಿಸಲು ಬೇಕಾದ ಸಾಮಾಗ್ರಿಗಳನ್ನು ಅನಂತೇಶ್ವರ ದೇವಸ್ಥಾನದ ಪೌಳಿಯ ಮಾಡಿನ ಮೇಲೆ ಇರಿಸುತ್ತಾರೆ.

ಆ.13ರಂದು ಮಧ್ಯರಾತ್ರಿ ಹಗ್ಗ ಹಾಗೂ ಬಿದಿರಿನ ಸಹಾಯದಿಂದ ದೇವಸ್ಥಾನದ ಮಾಡಿನ ಮೇಲೆ ಸಾಗುತ್ತಾ 40 ಅಡಿ ಎತ್ತರದ ಮಾನಸ್ಥಂಭದ ತುದಿಯಲ್ಲಿ ತ್ರಿವರ್ಣ ಧ್ವಜ ಹಾರಿಸುವಲ್ಲಿ ಯಶಸ್ವಿಯಾಗುತ್ತಾರೆ. ಬಳಿಕ ಎಲ್ಲರೂ ಅಜ್ಞಾತರಾಗುತ್ತಾರೆ. ಈ ಘಟನೆ ಉಡುಪಿಯಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಬ್ಬಿಸುತ್ತದೆ.

ಮನೆ ಮನೆಗಳಲ್ಲಿ ತಿರಂಗ ರಾರಾಜಿಸುವಂತೆ ಮಾಡುತ್ತದೆ. ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ತ್ರಿವರ್ಣ ಹಾರಿಸಿ ಬ್ರಿಟಿಷರಿಗೆ ಸಡ್ಡು ಹೊಡೆದರೆ ಕೆಲವರು ಮನೆಯ ಹೆಂಚುಗಳ ಸಂದಿಯಲ್ಲಿ ತ್ರಿವರ್ಣ ಹಾರಿಸಿ ಸಂಭ್ರಮಿಸುತ್ತಾರೆ. ಸರಣಿ ತ್ರಿವರ್ಣ ಧ್ವಜಗಳ ಹಾರಾಟ ನೋಡಿ ಬ್ರಿಟಿಷರು ಕಂಗಾಲಾಗಿದ್ದರು ಎಂದು ಅಂದಿನ ಐತಿಹಾಸಿಕ ಘಟನಾವಳಿಗಳನ್ನು ತೆರೆದಿಟ್ಟರು ಉಡುಪಿಯ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು