ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿಗೆ ಪಿಪಿಪಿ ಮಾದರಿ ಮೆಡಿಕಲ್ ಕಾಲೇಜು: ಬಸವರಾಜ ಬೊಮ್ಮಾಯಿ ಭರವಸೆ

ಕಾಮಗಾರಿಗೆ ನಾನೇ ಅಡಿಗಲ್ಲು ಹಾಕುತ್ತೇನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ
Last Updated 12 ಆಗಸ್ಟ್ 2021, 14:19 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಪಿಪಿಪಿ ಮಾದರಿಯಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆಯಾಗಲಿದ್ದು, ಕಾಮಗಾರಿಯ ಭೂಮಿಪೂಜೆಗೆ ಬಂದು ಅಡಿಗಲ್ಲು ಹಾಕುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಗುರುವಾರ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನೂತನ ಜಿಲ್ಲಾ ಆಸ್ಪತ್ರೆಯ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ‘ಸರ್ಕಾರಿ ಮೆಡಿಕಲ್‌ ಕಾಲೇಜು ಇಲ್ಲದ ಜಿಲ್ಲೆಗಳಲ್ಲಿ ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲಾಗುತ್ತಿದ್ದು, ಮೊದಲ ಪಟ್ಟಿಯಲ್ಲಿ ಜಿಲ್ಲೆಗೆ ಮೆಡಿಕಲ್‌ ಕಾಲೇಜು ಮಂಜೂರು ಮಾಡಲಾಗುವುದು’ ಎಂದು ಆಶ್ವಾಸನೆ ನೀಡಿದರು.

ಉಡುಪಿ ನಗರಕ್ಕೆ ಸುಸಜ್ಜಿತ ಒಳಚರಂಡಿ ವ್ಯವಸ್ಥೆ ಅಗತ್ಯವಿದ್ದು, ಮುಂದಿನ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಸಭೆಯಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಒಪ್ಪಿಗೆ ನೀಡಲಾಗುವುದು ಎಂದು ಬೊಮ್ಮಾಯಿ ಹೇಳಿದರು.

ಸಮರ್ಥ ನಿರ್ವಹಣೆ:

ಕೋವಿಡ್‌ ಒಂದನೇ ಹಾಗೂ ಎರಡನೇ ಅಲೆ ಜನರ ಜೀವನವನ್ನು ಸಂಕಷ್ಟಕ್ಕೆ ದೂಡಿದೆ. ಹೆಚ್ಚು ಸಾವು–ನೋವುಗಳು ಸಂಭವಿಸಿವೆ. ಇದರ ಮಧ್ಯೆಯೂ ಕೋವಿಡ್‌ ಸವಾಲುಗಳನ್ನು ಸರ್ಕಾರ ಸಮರ್ಥವಾಗಿ ಎದುರಿಸಿದೆ. ಸೋಂಕು ನಿಯಂತ್ರಣಕ್ಕೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ತೆಗೆದುಕೊಂಡ ಸಕಾಲಿಕ ನಿರ್ಣಯಗಳಿಂದ ಕೋವಿಡ್‌ ಎರಡನೇ ಅಲೆಯನ್ನು ನಿಭಾಯಿಸಲು ಸಾದ್ಯವಾಯಿತು ಎಂದು ಬೊಮ್ಮಾಯಿ ಹೇಳಿದರು.

ಸ್ವಾತಂತ್ರ್ಯಾ ನಂತರ ಆರೋ‌ಗ್ಯ ಕ್ಷೇತ್ರಕ್ಕೆ ಸಿಗಬೇಕಾದ ಆದ್ಯತೆ ಕೊಡದ ಪರಿಣಾಮ ಕೋವಿಡ್‌ ಸಂದರ್ಭದಲ್ಲಿ ಸವಾಲು, ಸಂಕಷ್ಟಗಳನ್ನು ಎದುರಿಸಬೇಕಾಯಿತು. ಸಂಕಷ್ಟವನ್ನು ಅವಕಾಶವಾಗಿ ಸ್ವೀಕರಿಸಿದ ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರವನ್ನು ಬಲಗೊಳಿಸಲು ದಿಟ್ಟ ನಿರ್ಧಾರ ತೆಗೆದುಕೊಂಡು, 25,000 ಆಮ್ಲಜನಕ ವ್ಯವಸ್ಥೆ ಹೊಂದಿರುವ ಬೆಡ್‌ ಹಾಗೂ 6 ಸಾವಿರ ವೆಂಟಿಲೇಟರ್‌ಗಳನ್ನು ಆಸ್ಪತ್ರೆಗಳಿಗೆ ಒದಗಿಸಿದೆ ಎಂದರು.

ದೊಡ್ಡ ಪ್ರಮಾಣದಲ್ಲಿ ಲಸಿಕೆ ಹಾಕಲು ಅಗತ್ಯವಿದ್ದ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡಲಾಗಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ಬೆಡ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಎರಡನೇ ಅಲೆ ತಡೆಗೆ ಆರೋಗ್ಯ ಇಲಾಖೆಯಿಂದ ಉತ್ತಮ ಕೆಲಸಗಳು ನಡೆದಿವೆ ಎಂದು ಶ್ಲಾಘಿಸಿದರು.

ಹಿಂದೆ, ಮಣಿಪಾಲದ ಕೆಎಂಸಿ ಆಸ್ಪತ್ರೆ ಹೊರತುಪಡಿಸಿ ಜಿಲ್ಲೆಯಲ್ಲಿ ಕೋವಿಡ್‌ ಪ್ರಯೋಗಾಲಯ ಇರಲಿಲ್ಲ. ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಯೋಗಾಲಯವಿದ್ದು, ಪರೀಕ್ಷೆಯ ಸಾಮರ್ಥ್ಯವನ್ನು 2,000 ರಿಂದ 4,000 ಹೆಚ್ಚಿಸಲಾಗಿದೆ. ಆಮ್ಲಜನಕ ಕೊರತೆ ಎದುರಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಜನರ ಪ್ರಾಣ ಉಳಿಸಲು ಹಾಗೂ ಆರೋಗ್ಯ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದರು.

ಸಚಿವ ಕೆ.ಸುಧಾಕರ್ ಮಾತನಾಡಿ, ಸಂಭಾವ್ಯ ಕೋವಿಡ್‌ ಮೂರನೇ ಅಲೆ ತಡೆಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಡಿ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಎರಡನೇ ಅಲೆಯ ಸಾವು ನೋವು ಮೂರನೇ ಅಲೆಯಲ್ಲಿ ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದ ಆರೋಗ್ಯ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಪ್ರತಿ ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಕೃತಕ ಆಮ್ಲಜನಕ ಪ್ಲಾಂಟ್‌ಗಳ ನಿರ್ಮಾಣ ಹಾಗೂ ಆಮ್ಲಜನಕ ಟ್ಯಾಂಕರ್‌ಗಳ ಅಳವಡಿಕೆಗೆ ನಿರ್ಧರಿಸಲಾಗಿದೆ. ಕಳೆದ ನಾಲ್ಕೈದು ತಿಂಗಳಲ್ಲಿ 4,000 ವೈದ್ಯರ ನೇಮಕಾತಿ ಮಾಡಿಕೊಳ್ಳಲಾಗಿದೆ. ಪ್ರತಿಯೊಬ್ಬರಿಗೂ ಉಚಿತ ಹಾಗೂ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಸಿಗಬೇಕು ಎಂಬುದು ಸರ್ಕಾರದ ಉದ್ದೇಶ ಎಂದರು.

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್, ಶಾಸಕ ಲಾಲಾಜಿ ಮೆಂಡನ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ.ಜಗದೀಶ್‌, ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್‌ ಇದ್ದರು.

‘ವಾತ್ಸಲ್ಯ ಕಾರ್ಯಕ್ರಮ ರಾಜ್ಯಕ್ಕೆ ವಿಸ್ತರಣೆ’

ಕೋವಿಡ್ ಮೂರನೇ ಅಲೆ ಮಕ್ಕಳಿಗೆ ಮಾರಕವಾಗಬಹುದು ಎಂಬ ತಜ್ಞರ ಎಚ್ಚರಿಕೆ ಹಿನ್ನೆಲೆಯಲ್ಲಿ ಉಡುಪಿ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಆರಂಭಿಸಲಾಗಿರುವ ವಾತ್ಸಲ್ಯ ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು. ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅಪೌಷ್ಟಿಕತೆ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಅಗತ್ಯ ಪೌಷ್ಟಿಕ ಆಹಾರ ಹಾಗೂ ಔಷಧಗಳನ್ನು ನೀಡಲಾಗುವುದು. ಮುಂದಿನವಾರ ವಾತ್ಸಲ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT