ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾಪುರ: ವಾರಾಹಿಗೆ ರಕ್ಷಿತಾರಣ್ಯ, ಡೀಮ್ಡ್ ಫಾರೆಸ್ಟ್‌ ಕಂಟಕ

₹ 1,000 ಕೋಟಿ ದಾಟಿ ಮುಂದುವರಿಯುತ್ತಿರುವ ಯೋಜನೆ
Last Updated 6 ಜನವರಿ 2022, 19:30 IST
ಅಕ್ಷರ ಗಾತ್ರ

ಕುಂದಾಪುರ: ಕರಾವಳಿಯ ಮೊದಲ ಬೃಹತ್ ನೀರಾವರಿ ಯೋಜನೆ ಎಂಬ ಹೆಗ್ಗಳಿಕೆ ಹೊಂದಿರುವ ವಾರಾಹಿ ಯೋಜನೆಯ ಕಾಮಗಾರಿಗೆ ವೇಗ ಪಡೆದುಕೊಂಡಿದ್ದೇ ಕಳೆದ 18 ವರ್ಷಗಳ ಈಚೆಗೆ. 1980ರಲ್ಲಿ ಕಾಮಗಾರಿಗೆ ಶಂಕು ಸ್ಥಾಪನೆಯಾದರೂ ನಂತರದ 25 ವರ್ಷ ಯೋಜನೆ ಕುಟುಂತಾ ಸಾಗಿತು. ಈ ಅವಧಿಯಲ್ಲಿ ವ್ಯಯವಾಗಿದ್ದು ಕೇವಲ ₹ 37 ಕೋಟಿ. ನಂತರದ 17 ವರ್ಷಗಳಲ್ಲಿ ಯೋಜನಾ ವೆಚ್ಚ ಸಾವಿರ ಕೋಟಿಯ ಗಡಿ ದಾಟಿರುವುದು ವಿಶೇಷ.

₹ 9.43 ಕೋಟಿ ಅಂದಾಜು ವೆಚ್ಚದಲ್ಲಿ ಆರಂಭವಾದ ವರಾಹಿ ಯೋಜನೆಯು ಸರ್ಕಾರಗಳು ಹಾಗೂ ಅಧಿಕಾರಿಗಳು ಬದಲಾದಂತೆಲ್ಲ ಗಾತ್ರ ಹಿಗ್ಗಿಸಿಕೊಳ್ಳುತ್ತಾ ಬಂದಿದೆ. ಯೋಜನೆ ಅನುಷ್ಠಾನಕ್ಕೆ ಮೊದಲು ಮಣ್ಣಿನ ಪರೀಕ್ಷೆ, ರಕ್ಷಿತಾರಣ್ಯದ ವ್ಯಾಪ್ತಿ, ಡೀಮ್ಡ್ ಫಾರೆಸ್ಟ್ ವ್ಯಾಪ್ತಿ, ನೀರಿನ ಹರಿವು, ಋತುಮಾನಗಳಲ್ಲಿ ನೀರಿನ ಲಭ್ಯತೆಯ ಪ್ರಮಾಣ ಗುರುತಿಸುವಲ್ಲಿ ವೈಜ್ಞಾನಿಕ ವಿಧಾನಗಳನ್ನು ಸರಿಯಾಗಿ ಪಾಲಿಸಿಲ್ಲ ಎಂಬ ಆರೋಪಗಳಿವೆ. ಕಾಮಗಾರಿ ವೇಳೆ ಅಲ್ಲಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಜರಿತ ಈ ಆರೋಪಗಳಿಗೆ ಪುಷ್ಟಿ ನೀಡುತ್ತವೆ.

ಕಾಲುವೆ ನಿರ್ಮಾಣಗೊಂಡು ವರ್ಷಗಳೇ ಕಳೆದರೂ ನೀರು ಹರಿಯದ ಪರಿಣಾಮ, ನಾಲೆಯಲ್ಲಿ ಊಳು ತುಂಬಿ ಮಳೆಗಾಲದಲ್ಲಿ ಕಾಲುವೆಯಿಂದ ಉಕ್ಕಿ ಹರಿದು ಹಲವು ಕಡೆಗಳಲ್ಲಿ ನೆರೆ ಸೃಷ್ಟಿಯಾಯಿತು. ಯೋಜನೆಯ ಅನುಷ್ಠಾನಕ್ಕೆ ಮುನ್ನ ಪೂರ್ವ ತಯಾರಿ ಕೊರತೆಯ ಕಾರಣ ವಾರಾಹಿ ಕಾಮಗಾರಿ ಅನುಷ್ಠಾನದ ಪ್ರತಿ ಹಂತದಲ್ಲಿಯೂ ಅಡ್ಡಿಗಳನ್ನು ಎದುರಿಸಬೇಕಾಯಿತು.

ರಕ್ಷಿತಾರಣ್ಯ ಗುರುತಿಸುವಲ್ಲಿ ಗೊಂದಲ:ಕಾಲುವೆಗಳು ನಿರ್ಮಾಣವಾಗಬೇಕಾದ ಹಾದಿಯಲ್ಲಿ ಬರುವ ರಕ್ಷಿತಾರಣ್ಯವನ್ನು ನಿಖರವಾಗಿ ಗುರುತಿಸುವಲ್ಲಿ ಹಾಗೂ ಭೂಸ್ವಾಧೀನ ಪ್ರಕ್ರಿಯೆಯ ತೊಡಕಿನಿಂದ ಕಾಮಗಾರಿ ವೇಗ ಪಡೆದುಕೊಳ್ಳುವಲ್ಲಿ ವಿಫಲವಾಯಿತು ಎಂಬ ದೂರುಗಳಿವೆ. ಟೆಂಡರ್ ಪ್ರಕ್ರಿಯೆಗೂ ಮುನ್ನವೇ ಅಡೆ-ತಡೆಗಳನ್ನು ನಿವಾರಿಸಿಕೊಂಡಿದ್ದರೆ, ನೀರಾವರಿ ನಿಗಮ ದೊಡ್ಡ ‘ಬೆಲೆ’ ತೆರಬೇಕಾಗಿರಲಿಲ್ಲ. ಸರ್ಕಾರದ ಇಲಾಖೆಗಳ ನಡುವಿನ ಸಮನ್ವಯತೆ ಕೊರತೆಯೂ ಯೋಜನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ ಎನ್ನುತ್ತಾರೆ ತಜ್ಞರು.

1979ರಲ್ಲಿ ಆಡಳಿತಾತ್ಮಕ ಮಂಜೂರಾತಿ ಪಡೆದು, 1995ರ ಜೂನ್‌ 6ರಂದು 15.40 ಹೆಕ್ಟೆರ್‌ ಅರಣ್ಯ ಭೂಮಿ ಹಾಗೂ 2004ರ ಮಾರ್ಚ್ 15ರಂದು 129.60 ಹೆಕ್ಟೆರ್ ಅರಣ್ಯ ಭೂಮಿ ಸೇರಿ 145 ಹೆಕ್ಟೆರ್ ಭೂಮಿಯನ್ನು ವಾರಾಹಿ ಯೋಜನೆಗೆ ಡೈವರ್ಟ್ ಮಾಡಿ ಅನುಮತಿ ನೀಡಲಾಗಿತ್ತು. ಇದರಲ್ಲಿ ಎಷ್ಟು ಭೂಮಿ ಬಳಕೆಯಾಗಿದೆ, ಎಷ್ಟು ಉಳಿದಿದೆ ಎನ್ನುವ ಗೊಂದಲದಿಂದ ಕಾಲುವೆ ನಿರ್ಮಾಣ ಕಾರ್ಯದಲ್ಲಿ ತೊಡಕು ಉಂಟಾಗಿತ್ತು.

ಅರಣ್ಯ ಇಲಾಖೆಯಲ್ಲಿನ ತಾಂತ್ರಿಕ ತೊಡಕುಗಳ ನಿವಾರಣೆಗೆ ಅಂದಿನ ರಾಜ್ಯಸಭಾ ಸದಸ್ಯರಾಗಿದ್ದ ಆಸ್ಕರ್ ಫರ್ನಾಂಡಿಸ್ ನೇತೃತ್ವದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಯ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಹಲವು ಸಭೆಗಳನ್ನು ನಡೆಸಲಾಯಿತಾದರೂ ರಕ್ಚಿತಾರಣ್ಯ ಪ್ರದೇಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಇಂದಿಗೂ ಬಗೆಹರಿಯದೆ ಉಳಿದುಕೊಂಡಿವೆ.

1979ರಿಂದ 2021ರವರೆಗೂ ವಾರಾಹಿ ಯೋಜನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮೂಲ ಯೋಜನೆಯಲ್ಲಿ ಎಡದಂಡೆ ಕಾಲುವೆ 78.80 ಕಿ.ಮೀ ಉದ್ದ ಹಾಗೂ ಬಲದಂಡೆ ಕಾಲುವೆ 70.20 ಕಿ.ಮೀ ಹಾಗೂ ಎಡದಂಡೆ ಏತ ನೀರಾವರಿ ಕಾಲುವೆ 54 ಕಿ.ಮೀ ಎಂದು ಪ್ರಸ್ತಾಪಿಸಲಾಗಿತ್ತು. ಬಳಿಕ, ಹಲವು ಕಾರಣಗಳನ್ನು ಮುಂದಿಟ್ಟು ಯೋಜನೆಯ ಸ್ವರೂಪವನ್ನು ಬದಲಿಸಲಾಯಿತು. ಎಡದಂಡೆ, ಬಲದಂಡೆ ಕಾಮಗಾರಿಯ ವಿಸ್ತೀರ್ಣವೂ ಬದಲಾಯಿತು.

‘ಮಾತಿಗೆ ತಪ್ಪಬೇಡಿ; ನೀರು ಬಿಡಿ’
ಪ್ರತಿವರ್ಷದ ಡಿಸೆಂಬರ್ ಮೊದಲ ವಾರದಲ್ಲಿ ಕಾಲುವೆಯಲ್ಲಿ ನೀರು ಹರಿಸುತ್ತೇವೆ ಎನ್ನುವ ಬದ್ಧತೆಯನ್ನು ಇಲಾಖೆಯ ಅಧಿಕಾರಿಗಳು ಉಳಿಸಿಕೊಳ್ಳಬೇಕು. ಸಕಾಲದಲ್ಲಿ ಕಾಲುವೆಯಲ್ಲಿ ನೀರು ಹರಿದರೆ ಹಿಂಗಾರು ಬೆಳೆಗೆ ಅನುಕೂಲವಾಗುತ್ತದೆ. ಯೋಜನೆಯ ಉದ್ದೇಶ ಸಾರ್ಥಕತೆ ಆಗುತ್ತದೆ ಎನ್ನುತ್ತಾರೆ ಕೃಷಿಕ ರಾಘವೇಂದ್ರ ಗಾಣಿಗ.

‘ಪೂರ್ಣ ಈಡೇರದ ಕನಸು’
ಮುಂಗಾರಿನ ಬಳಿಕ ಹಿಂಗಾರು ಬೆಳೆಗೆ ಅನುಕೂಲವಾಗಲು ಇಂದಲ್ಲ ನಾಳೆ ನಮ್ಮೂರಿಗೆ ವಾರಾಹಿ ಕಾಲುವೆಯಲ್ಲಿ ನೀರು ಬರುತ್ತದೆ. ಬದುಕು ಹಸನಾಗುತ್ತದೆ ಎಂದು ಕಾದಿದ್ದ ಅದೆಷ್ಟೊ ಹಿರಿಯ ಜೀವಗಳು ಉಸಿರು ಚೆಲ್ಲಿಯಾಗಿದೆ. ಸಮೃದ್ಧ ಕೃಷಿ ತೋಟಗಳ ನಡುವೆ ಬದುಕು ಕಟ್ಟಿಕೊಳ್ಳಬೇಕು ಎಂದು ಕನಸು ಕಂಡಿದ್ದ ಯುವ ಮನಸ್ಸುಗಳು ಪರ್ಯಾಯ ಆಯ್ಕೆ ಮಾಡಿಕೊಳ್ಳುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT