ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ಶೇ 99.90 ರೆಗ್ಯುಲರ್ ವಿದ್ಯಾರ್ಥಿಗಳು ಹಾಜರು

Last Updated 19 ಜುಲೈ 2021, 14:14 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಾದ್ಯಂತ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಗೊಂದಲಗಳಿಲ್ಲದೆ ನಡೆಯಿತು. ಕೋರ್‌ ವಿಷಯಗಳಾದ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳಿಗೆ ನಡೆದ ಪರೀಕ್ಷೆಯಲ್ಲಿ ಶೇ 99.90 ರೆಗ್ಯುಲರ್ ವಿದ್ಯಾರ್ಥಿಗಳು ಹಾಜರಾಗಿದ್ದರು.

ಕೋವಿಡ್‌ ಆತಂಕ ಹಾಗೂ ಬದಲಾದ ಪರೀಕ್ಷಾ ಪದ್ಧತಿಯ ಗೊಂದಲಗಳ ನಡುವೆಯೂ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರು. ಜಿಲ್ಲೆಯ 259 ಪ್ರೌಢಶಾಲೆಗಳ 12,866 ವಿದ್ಯಾರ್ಥಿಗಳು 77 ಕೇಂದ್ರಗಳಲ್ಲಿ ಪರೀಕ್ಷೆ ಬರೆದರು.

ಈ ವರ್ಷ 12,866 ರೆಗ್ಯುಲರ್ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ 13 ಮಕ್ಕಳು ಗೈರು ಹಾಜರಾಗಿದ್ದರು. ಗಣಿತ ವಿಷಯದಲ್ಲಿ 204 ಖಾಸಗಿ, 520 ರಿಪಿಟರ್ಸ್‌, ವಿಜ್ಞಾನ ವಿಷಯದಲ್ಲಿ 220 ಖಾಸಗಿ, 555 ರಿಪಿಟರ್ಸ್‌, ಸಮಾಜ ವಿಜ್ಞಾನ ವಿಷಯದಲ್ಲಿ 206 ಖಾಸಗಿ ಹಾಗೂ 356 ರಿಪಿಟರ್ಸ್‌ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಮೂರೂ ವಿಷಯಗಳಲ್ಲಿ ತಲಾ ಒಬ್ಬರು ಬಂದಿರಲಿಲ್ಲ.

ಜಿಲ್ಲೆಯ ಒಟ್ಟಾರೆ ಹಾಜರಾತಿ ಪ್ರಮಾಣವನ್ನು ನೋಡುವುದಾದರೆ ಶೇ 99.90ರಷ್ಟು ರೆಗ್ಯುಲರ್ ವಿದ್ಯಾರ್ಥಿಗಳು, ಗಣಿತ ವಿಷಯದಲ್ಲಿ ಶೇ 99.51ರಷ್ಟು ಖಾಸಗಿ, 99.81ರಷ್ಟು ರಿಪಿಟರ್ಸ್‌, ವಿಜ್ಞಾನ ವಿಷಯದಲ್ಲಿ ಶೇ 99.55ರಷ್ಟು ಖಾಸಗಿ ಹಾಗೂ 99.45ರಷ್ಟು ರಿಪಿಟರ್ಸ್‌ ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ ಶೇ 99.52ರಷ್ಟು ಖಾಸಗಿ ಹಾಗೂ ಶೇ 100ರಷ್ಟು ರಿಪಿಟರ್ಸ್‌ ವಿದ್ಯಾರ್ಥಿಗಳು ಹಾಜರಾಗಿದ್ದರು.

ಜಿಲ್ಲಾಧಿಕಾರಿ ಜಿ.ಜಗದೀಶ್‌, ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್‌, ಮಂಗಳೂರು ವಿಭಾಗದ ಸಿಟಿಒ ಸಹನಿರ್ದೇಶಕ ಸಿಪ್ರಿಯನ್‌ ಮೊಂತೆರೊ ಹಾಗೂ ಡಿಡಿಪಿಐ ಎನ್‌.ಎಚ್‌.ನಾಗೂರ ಪರೀಕ್ಷಾ ಕೇಂದ್ರಗಳಿಗೆ ಭೇಟಿನೀಡಿ ಸಿದ್ಧತೆ ಪರಿಶೀಲಿಸಿದರು.

ಸಮಸ್ಯೆ ಎದುರಾಗಿಲ್ಲ:ಜಿಲ್ಲೆಯಲ್ಲಿ ಹಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಬರಲು ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿತ್ತು. ಆಯಾ ಪರೀಕ್ಷಾ ಕೇಂದ್ರದ ಸಿಬ್ಬಂದಿ, ಶಾಲೆಗಳ ಶಿಕ್ಷಕರು ಅಗತ್ಯವಿದ್ದವರಿಗೆ ಸಾರಿಗೆ ವ್ಯವಸ್ಥೆ ಮಾಡಿದ್ದರು. ಪರೀಕ್ಷೆ ಮುಗಿದ ಬಳಿಕ ಮಕ್ಕಳಿಗೆ ಬಿಸ್ಕತ್ ಹಾಗೂ ಬಾಳೆಹಣ್ಣು ವಿತರಿಸಲಾಯಿತು ಎಂದು ಡಿಡಿಪಿಐ ಎನ್‌.ಎಚ್‌.ನಾಗೂರ ತಿಳಿಸಿದರು. ಬೆಳಿಗ್ಗೆ 10.30ಕ್ಕೆ ಆರಂಭವಾದ ಪರೀಕ್ಷೆ 1.30ರವರೆಗೆ ನಡೆಯಿತು.

ಬಿಡುವು ನೀಡಿದ ವರುಣ:ಜಿಲ್ಲೆಯಲ್ಲಿ ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆ ಸೋಮವಾರ ಕೊಂಚ ಬಿಡುವು ನೀಡಿದ್ದರಿಂದ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅನುಕೂಲವಾಯಿತು. ಬೆಳಿಗ್ಗೆ 8.30ಕ್ಕೆ ಬಹುತೇಕ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಬಳಿ ಜಮಾಯಿಸಿದ್ದರು.

ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷಾ ಮಾದರಿ ಬದಲಾಗಿದ್ದ ಕಾರಣ ವಿದ್ಯಾರ್ಥಿಗಳ ಮೊಗದಲ್ಲಿ ಸಣ್ಣ ಆತಂಕ ಕಾಣುತ್ತಿತ್ತು. ಆದರೂ, ಉತ್ಸಾಹದಿಂದ ಪರೀಕ್ಷಾ ಕೊಠಡಿಯತ್ತ ಮಕ್ಕಳು ಹೆಜ್ಜೆಹಾಕಿದರು. ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳು ಹಾಗೂ ಆಯಾ ಪರೀಕ್ಷಾ ಕೇಂದ್ರದ ಸಿಬ್ಬಂದಿ ಥರ್ಮಲ್ ಸ್ಕ್ಯಾನರ್ ಮೂಲಕ ವಿದ್ಯಾರ್ಥಿಗಳ ದೇಹದ ಉಷ್ಣತೆ ಪರೀಕ್ಷಿಸಿ ಕೈಗೆ ಸ್ಯಾನಿಟೈಸರ್ ಹಾಕಿ ಮಾಸ್ಕ್‌ ಕೊಟ್ಟು ಕೊಠಡಿಯ ಒಳಗೆ ಬಿಟ್ಟರು.

***
‘ಹೊಸ ಪರೀಕ್ಷಾ ಪದ್ಧತಿಯಲ್ಲಿ ಪ್ರಶ್ನೆಪತ್ರಿಕೆ ಕಷ್ಟವಾಗಿರಬಹುದು ಹಾಗೂ ಓಎಂಆರ್‌ ಶೀಟ್‌ನಲ್ಲಿ ಟಿಕ್‌ ಮಾಡುವಾಗ ಗೊಂದಲಗಳಾಗಬಹುದು ಎಂಬ ಆತಂಕವಿತ್ತು. ಪ್ರಶ್ನೆಪತ್ರಿಕೆ ಕೈಗೆ ಸಿಕ್ಕ ಬಳಿಕ ಮನಸ್ಸು ನಿರಾಳವಾಯಿತು. ಪರೀಕ್ಷೆಯಲ್ಲಿ ಸುಲಭದ ಪ್ರಶ್ನೆಗಳು ಬಂದಿದ್ದವು. ಡಯಾಗ್ರಮ್ ಬಿಡಿಸುವ ಗೋಜು ಇರಲಿಲ್ಲ. ಉತ್ತಮ ಅಂಕಗಳನ್ನು ನಿರೀಕ್ಷೆ ಮಾಡಿದ್ದೇನೆ.
–ಖುಷಿ, ಇಂದ್ರಾಳಿ ಶಾಲೆ

***

ಪರೀಕ್ಷೆ ಬಹಳ ಕಷ್ಟ ಇರುತ್ತದೆ ಎಂದು ಎಣಿಸಿದ್ದೆ. ಆದರೆ, ಅಂದುಕೊಂಡಷ್ಟು ಕಷ್ಟ ಇರಲಿಲ್ಲ. ಮೊದಲ ದಿನದ ಪರೀಕ್ಷೆಯನ್ನು ಖುಷಿಯಿಂದ ಬರೆದಿದ್ದೇನೆ. ಹಾಗೆಯೇ ಉಳಿದ ವಿಷಯಗಳ ಪರೀಕ್ಷೆಯನ್ನೂ ಬರೆಯುತ್ತೇನೆ. ಹೆಚ್ಚು ಅಂಕಗಳು ಬರುವ ನಿರೀಕ್ಷೆ ಇದೆ.
–ತ್ರಿಶಾ, ಸೇಂಟ್‌ ಸಿಸಿಲಿಸ್ ಶಾಲೆ

***

ಕೊರೊನಾದಿಂದಾಗಿ ಈ ವರ್ಷ ಶಾಲೆಗಳು ನಡೆಯಲಿಲ್ಲ. ಆನ್‌ಲೈನ್‌ನಲ್ಲಿಯೇ ಕಲಿಯಬೇಕಾಯಿತು. ಆನ್‌ಲೈನ್ ಕಲಿಕೆ ಅಷ್ಟು ಒಳ್ಳೆಯ ಕಲಿಕಾ ಕ್ರಮವಲ್ಲ. ತರಗತಿ ಕಲಿಕೆ ಹೆಚ್ಚು ಪರಿಣಾಮಕಾರಿ. ಮಕ್ಕಳ ಕೈಗೆ ಮೊಬೈಲ್ ಸಿಕ್ಕರೆ ಅದರಲ್ಲೇ ಮಗ್ನರಾಗಿ, ಪಠ್ಯೇತ್ತರ ಚಟುವಟಿಕೆಗಳಿಂದ ದೂರವಾಗುತ್ತಾರೆ. ಹಾಗಾಗಿ, ಮುಂದಿನ ವರ್ಷ ಶಾಲೆಗಳು ಆರಂಭವಾಗಬೇಕು. ಅದಕ್ಕೂ ಮುನ್ನ ಮಕ್ಕಳಿಗೆ ಕೋವಿಡ್‌ ಲಸಿಕೆ ಹಾಕಬೇಕು.
–ವಿಜಯ್‌ ಕುಮಾರ್, ಪೋಷಕರು

***

ಮೂರು ವಿಷಯಗಳ ಪರೀಕ್ಷೆಯನ್ನು ಒಂದೇ ದಿನ ನಡೆಸುವ ಸರ್ಕಾರದ ನಿರ್ಧಾರ ಸರಿಯಲ್ಲ. ಇದರಿಂದ ಮಕ್ಕಳ ಮೇಲೆ ಒತ್ತಡ ಬೀಳುತ್ತದೆ. ಪರೀಕ್ಷೆ ಬರೆದರೆ ಜ್ಞಾನ ತುಂಬಾ ಸಮಯ ಉಳಿಯುತ್ತೆ, ಟಿಕ್‌ ಮಾಡಿ ಉತ್ತರಿಸುವುದು ಮನಸ್ಸಿನಲ್ಲಿ ಉಳಿಯುವುದಿಲ್ಲ. ಹೆಚ್ಚಿನ ಮಕ್ಕಳು ಆತಂಕದಿಂದಲೇ ಪರೀಕ್ಷೆ ಬರೆದಿದ್ದಾರೆ. ಜತೆಗೆ ಶಾಲೆಯಲ್ಲಿ ಕಲಿತಂತೆ ಮಕ್ಕಳು ಆನ್‌ಲೈನ್‌ನಲ್ಲಿ ಕಲಿಯಲು ಸಾಧ್ಯವಿಲ್ಲ. ಮಕ್ಕಳ ಕೈಗೆ ಮೊಬೈಲ್ ಸಿಕ್ಕರೆ ಬೆಳಿಗ್ಗಿನಿಂದ ಸಂಜೆಯವರೆಗೂ ನೋಡುತ್ತಲೇ ಇರುತ್ತಾರೆ. ಆರೋಗ್ಯದ ದೃಷ್ಟಿಯಿಂದ ಇದು ಸರಿಯಲ್ಲ. ಶಾಲೆಗಳು ಆರಂಭವಾದರೆ ಉತ್ತಮ.
–ವಿಜಯ್ ರಾಜ್‌, ಪೋಷಕರು

***

ಕೋವಿಡ್‌ ಕೇರ್ ಕೇಂದ್ರದಲ್ಲಿ ಪರೀಕ್ಷೆ ಬರೆದರು
ಕಾರ್ಕಳ ತಾಲ್ಲೂಕಿನ ಇಬ್ಬರು, ಬ್ರಹ್ಮಾವರ ತಾಲ್ಲೂಕಿನ ಇಬ್ಬರು ಹಾಗೂ ಕುಂದಾಪುರ ತಾಲ್ಲೂಕಿನ ಒಬ್ಬ ಸೇರಿ ಜಿಲ್ಲೆಯಲ್ಲಿ 5 ವಿದ್ಯಾರ್ಥಿಗಳು ಕೋವಿಡ್‌ ಕೇರ್ ಕೇಂದ್ರದಲ್ಲಿ ಪರೀಕ್ಷೆ ಬರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT