ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರು ಬೇಸಿಗೆಯಲ್ಲೂ ಬತ್ತದೆ ಕೃಷಿ ಭೂಮಿಗೆ ನೀರುಣಿಸುತ್ತಿರುವ ಕಟ್ಟಿಂಗೇರಿ ಕೆರೆ

Published 11 ಏಪ್ರಿಲ್ 2024, 7:25 IST
Last Updated 11 ಏಪ್ರಿಲ್ 2024, 7:25 IST
ಅಕ್ಷರ ಗಾತ್ರ

ಶಿರ್ವ: ಕಾಪು ತಾಲ್ಲೂಕು ಮೂಡುಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಿಂಗೇರಿ ಕೆರೆ ವರ್ಷವಿಡೀ ತುಂಬಿ ತುಳುಕುತ್ತದೆ. ಪರಿಸರದ ಪ್ರಾಣಿ–ಪಕ್ಷಿಗಳು, ಜೀವಜಂತುಗಳಿಗೆ ನೀರುಣಿಸುವುದರ ಜೊತೆಗೆ ನೂರಾರು ಎಕರೆ ಕೃಷಿ ಭೂಮಿಗೆ ನೀರು ಒದಗಿಸುವ ಮೂಲಕ ರೈತರಿಗೆ ವರದಾನವಾಗಿದೆ. ಪ್ರಸ್ತುತ ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು, ಹೂಳೆತ್ತುವ ಕಾರ್ಯ ನಡೆಯಬೇಕಿದೆ. 

500 ಎಕ್ರೆ ಜಮೀನಿಗೆ ಅಂತರ್ಜಲ ಮೂಲವಾಗಿರುವ, ಐತಿಹಾಸಿಕ ಹಿನ್ನೆಲೆ ಇರುವ ಕಟ್ಟಿಂಗೇರಿ ಕೆರೆ, ಕಟ್ಟಿಂಗೇರಿ ಗ್ರಾಮದ ಕಾಮಧೇನು. ಬಿರು ಬೇಸಿಗೆಯಲ್ಲೂ ಅಂತರ್ಜಲ ಬತ್ತದೆ ಇರುವುದು ಆಶ್ಚರ್ಯಕರ ಸಂಗತಿ ಎನಿಸಿದೆ. ಸರ್ವೇ ನಂ. 61/1ರಲ್ಲಿ 5.78 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿ ಚಾಚಿಕೊಂಡಿರುವ ಕೆರೆಯಿಂದ ಕಟ್ಟಿಂಗೇರಿ ಸೇರಿದಂತೆ ಪರಿಸರದ ಮಾಣಿಬೆಟ್ಟು, ಎಡ್ಮೇರು, ಬೆಳಂಜಾಲೆ ಊರುಗಳ ಕೃಷಿಕರಿಗೆ ಅನುಕೂಲವಾಗಿದೆ.

500 ವರ್ಷಗಳ ಇತಿಹಾಸ ಇರುವ ಕೆರೆಯಲ್ಲಿ ಈವರೆಗೂ ದುರಂತಗಳು ನಡೆದಿಲ್ಲ. ಕೆರೆಗೆ ಸಂಬಂಧಿಸಿದಂತೆ ಸ್ಥಳೀಯ 2 ಕುಟುಂಬಗಳಿಗೆ 110 ವರ್ಷಗಳ ಹಿಂದೆ ವ್ಯಾಜ್ಯ ನಡೆದು ಅಂದಿನ ಮದ್ರಾಸ್ ಹೈಕೋರ್ಟ್ ನೀಡಿದ ತೀರ್ಪಿನ ದಾಖಲೆ ಇದೆ. ಅಂತರರಾಷ್ಟ್ರೀಯ ಖ್ಯಾತಿಯ ರೇಖಾಚಿತ್ರ ಕಲಾವಿದ ಕೆ.ಕೆ.ಹೆಬ್ಬಾರ್ ಅವರಿಗೆ ಬಾಲ್ಯದಲ್ಲಿ ಇಲ್ಲಿನ ಪರಿಸರ, ಪಕ್ಷಿಗಳು, ಬಂಡೆ, ಆವೆಮಣ್ಣು, ಕೆಂಪು ಕಲ್ಲು ಪ್ರೇರಣೆ ನೀಡಿದ ಬಗ್ಗೆ ಉಲ್ಲೇಖ ಇದೆ.

ಪ್ರತಿ ವರ್ಷ ಕಾವೇರಿ ಸಂಕ್ರಮಣಕ್ಕೆ ಊರಿನ ಕೃಷಿಕರು ಸೇರಿ ಕೆರೆಗೆ ಸಂಬಂಧಿಸಿದ ಕಿಂಡಿ ಅಣೆಕಟ್ಟಿಗೆ ಹಲಗೆ ಜೋಡಿಸುವ ಪರಂಪರೆ ಇಂದಿಗೂ ಮುಂದುವರಿದಿದೆ. ಅಣೆಕಟ್ಟಿಗೆ ಹಲಗೆ ಜೋಡಿಸಿದ ನಂತರ ನೀರಿನ ವ್ಯಾಪ್ತಿ 8 ಎಕರೆಗಿಂತಲೂ ಅಧಿಕವಾಗುತ್ತದೆ. 1998–99ರ ಅವಧಿಯಲ್ಲಿ ಅಂದಿನ ಜಿಲ್ಲಾ ಪರಿಷತ್ ಸದಸ್ಯರಾಗಿದ್ದ ಪೆರ್ಣಕಿಲ ಶಂಕರ ನಾಯಕ್‌ ಅವರ ಮುತುವರ್ಜಿಯಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ₹7 ಲಕ್ಷ ಅನುದಾನದಲ್ಲಿ ಕೆರೆಯ ಹೂಳೆತ್ತಿ, ಕೆರೆದಂಡೆ ಪುನರ್ ನಿರ್ಮಾಣ ಮಾಡಲಾಗಿದೆ. 2009–10ರಲ್ಲಿ ಶಾಸಕರಾಗಿದ್ದ ಲಾಲಾಜಿ ಆರ್.ಮೆಂಡನ್ ಅವರ ಮೂಲಕ ₹32 ಲಕ್ಷ ಅನುದಾನದಲ್ಲಿ ಪೂರ್ಣ ಪ್ರಮಾಣದಲ್ಲಿ ಹೂಳೆತ್ತಿದ್ದು, ಕಿಂಡಿ ಅಣೆಕಟ್ಟು ದುರಸ್ತಿ ಮಾಡಲಾಗಿತ್ತು.

ಕಟ್ಟಿಂಗೇರಿ ಜನರಿಗೆ ಮೂಲಸೌಕರ್ಯ ಕೊರತೆ: ಕೆರೆಯ ಹೂಳೆತ್ತುವ ಕಾರ್ಯವಲ್ಲದೆ ಆವರಣ ನಿರ್ಮಾಣ ಆಗಬೇಕಾಗಿದೆ. ಗ್ರಾಮೀಣ ಪ್ರಕೃತಿ ರಮಣೀಯ ಪರಿಸರದಲ್ಲಿ ಇರುವ ಕೆರೆಯನ್ನು ಪುನಶ್ಚೇತನಗೊಳಿಸಿ ಉಳಿಸುವ ಕಾರ್ಯಕ್ಕೆ ಸರ್ಕಾರ, ಸಂಬಂಧಪಟ್ಟ ಇಲಾಖೆ ಗಮನ ಹರಿಸಬೇಕಾಗಿದೆ. ಕಾಪು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇನ್ನೂ ಕುಗ್ರಾಮವಾಗಿಯೇ ಉಳಿದ ಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಿಂಗೇರಿ ಗ್ರಾಮದಲ್ಲಿ ರಸ್ತೆ, ಸೇತುವೆ, ಬಸ್‌ ಸೌಕರ್ಯ ಸೇರಿದಂತೆ ಹಲವಾರು ಮೂಲಸೌಕರ್ಯಗಳ ಕೊರತೆ ಇದೆ. ಸರ್ಕಾರದ ಗಮನ ಸೆಳೆಯಲು ಗ್ರಾಮಸ್ಥರೆಲ್ಲ ಒಟ್ಟಾಗಿ ಈಚೆಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರದ ಕರೆ ನೀಡಿ ಪ್ರತಿಭಟನೆ ನಡೆಸಿದ್ದಾರೆ.

ಬ್ರಹ್ಮಲಿಂಗೇಶ್ವರ ದೇವರು ಜಳಕಕ್ಕೆ ಬರುವ ಕೆರೆ: 500 ವರ್ಷಗಳ ಹಿಂದೆ ಈ ಭಾಗದ ರೈತಾಪಿ ವರ್ಗದ ಜನರು ಸೇರಿ ಕಟ್ಟಿದ ಕೆರೆಯಾದ್ದರಿಂದ ಕಟ್ಟಿಂಗೇರಿ ಎಂದು ಹೆಸರು ಬಂದಿದೆ. ತುಂಗೆಬೈಲು, ದೇವರ ಕೆರೆ ಎಂಬ ಹೆಸರಿನಿಂದಲೂ ಕರೆಯುತ್ತಿದ್ದರು ಎಂಬುದಕ್ಕೆ ದಂತಕತೆಗಳಿವೆ. ಕೆರೆಯ ಅಣತಿ ದೂರದಲ್ಲಿ ಭೃಗು ಮಹರ್ಷಿ ಪ್ರತಿಷ್ಠಾಪಿತ 900 ವರ್ಷ ಇತಿಹಾಸ ಇರುವ ಬ್ರಹ್ಮಲಿಂಗೇಶ್ವರ ದೇವಸ್ಥಾನವಿದ್ದು, ಜಾತ್ರೆ ಸಂದರ್ಭದಲ್ಲಿ ದೇವರು ಜಳಕಕ್ಕೆ ಬರುವ ಸಂಪ್ರದಾಯ ಇದೆ. ಹಲವಾರು ಪವಾಡಗಳು ನಡೆದ ವಿಚಾರಗಳು ಇಂದಿಗೂ ಕಥೆಗಳ ರೂಪದಲ್ಲಿ ಜನಮಾನಸದಲ್ಲಿ ಉಳಿದಿದೆ ಎನ್ನುತ್ತಾರೆ ಉಡುಪಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್.

ಐತಿಹಾಸಿಕ ಕಟ್ಟಿಂಗೇರಿ ಕೆರೆ
ಐತಿಹಾಸಿಕ ಕಟ್ಟಿಂಗೇರಿ ಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT