ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾಪುರ: ತೈಲ ತ್ಯಾಜ್ಯದಿಂದ ಜೀವ ಸಂಕುಲ ನಾಶ

Published 8 ಜೂನ್ 2023, 5:10 IST
Last Updated 8 ಜೂನ್ 2023, 5:10 IST
ಅಕ್ಷರ ಗಾತ್ರ

ರಾಜೇಶ್ ಕೆ.ಸಿ

ಕುಂದಾಪುರ: ದೃಷ್ಟಿ ಹರಿಸಿದಷ್ಟೂ ನೀಲಿ ಸೆರೆಗಿನಂತೆ ಕಾಣುವ, ಹಾಲು ಬಣ್ಣದ ನೊರೆ ಉಕ್ಕಿಸಿ ತೀರದಲ್ಲಿ ಇದ್ದವರನ್ನು ಇನ್ನಿಲ್ಲದಂತೆ ಹುಚ್ಚೆಬ್ಬಿಸುವ ಅರಬ್ಬೀ ಸಮುದ್ರದ ಉದ್ದನೆಯ ಕಡಲ ತೀರ ಯಾರಿಗೆ ತಾನೆ ಇಷ್ಟವಾಗದು ಹೇಳಿ?. ಹಾಗಂತ ರಜಾ ಕಾಲದ ಮಜಾವನ್ನು ಅನುಭವಿಸಲು ಕಡಲ ತೀರಕ್ಕೆ ಮಕ್ಕಳೊಂದಿಗೆ ಆಗಮಿಸುವವರು ಕಡಲ ನೀರಿಗೆ ಇಳಿಯುವ ಮುನ್ನ ಹತ್ತು ಬಾರಿ ಯೋಚಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಇದಕ್ಕೆ ಕಾರಣ ಕಳೆದ ಕೆಲವು ದಿನಗಳಿಂದ ತನ್ನ ಶುದ್ಧ ಬಣ್ಣವನ್ನು ಕಳೆದುಕೊಂಡು ಕಲುಷಿತವಾಗಿರುವ ಸಮುದ್ರದ ನೀರು. ಕಡಲ ತೀರದಲ್ಲಿ ಎಲ್ಲೆಂದರಲ್ಲಿ ದನದ ಸೆಗಣಿ ಮುದ್ದೆಯಂತೆ ಬಿದ್ದಿರುವ ತ್ಯಾಜ್ಯ. ಪ್ರತಿ ಬಾರಿ ಮಳೆಗಾಲದ ಪೂರ್ವದಲ್ಲಿ ಸಮುದ್ರ ನೀರು, ತೀರದಲ್ಲಿ ಕಾಣಿಸುವ ಮಾನವನಿರ್ಮಿತ ಜಲಮಾಲಿನ್ಯದ ಈ ಕೊಡುಗೆ ಜಲ ಜೀವಸಂಕುಲಕ್ಕೆ, ಮಾನವನಿಗೆ ಇನ್ನಿಲ್ಲದಂತೆ ಕಾಡುತ್ತಿದೆ. ಸಮುದ್ರ ನೀರನ್ನು ಸೂಕ್ಷ್ಮವಾಗಿ ಗಮನಿಸಿದರೆ ನೀರಿನ ಮೇಲ್ಪದರದಲ್ಲಿ ತೇಲುವ ಕಪ್ಪು, ಕಂದು ಮಿಶ್ರಿತ ಎಣ್ಣೆಯ ಹೊಳಪನ್ನು ಕಾಣುವ ದ್ರವ, ತೀರದಲ್ಲಿ ಡಾಮರಿನ ಮುದ್ದೆಯಂತೆ ಬಿದ್ದಿರುವ ತ್ಯಾಜ್ಯ ಯಥೇಚ್ಛವಾಗಿ ಕಾಣಸಿಗುತ್ತಿವೆ. ಸಮುದ್ರದಲ್ಲಿನ ಕಚ್ಚಾ ತೈಲದ ಹವಾಮಾನದಿಂದಾಗಿ ಡಾಮರ್ ರೂಪದ ‘ಟಾರ್‌ ಬಾಲ್ಸ್‌’ ನಿರ್ಮಾಣವಾಗುತ್ತಿದೆ. ನೀರಿನ ಮೇಲೆ ತೇಲುವ ಅವುಗಳನ್ನು ಅಲೆಗಳು ವಿವಿಧ ಕಡೆಗಳಿಗೆ ಕೊಂಡೊಯ್ಯುತ್ತವೆ.

ಸಮುದ್ರದ ಜಲಚರ ಪರಿಸರ ನಾಶಕ್ಕೆ ಕಾರಣವಾಗುವ ತೈಲೋತ್ಪನ್ನಗಳ ವಿಷ ತ್ಯಾಜ್ಯಗಳ ಹುಟ್ಟುವಿಕೆ ಬಗ್ಗೆ ಆಳವಾದ ಅಧ್ಯಯನ ನಡೆಯಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಇದನ್ನು ತಡೆಯುವ ಬಗ್ಗೆ ವ್ಯಾಪಕ ಜಾಗೃತಿ ಕಾರ್ಯಕ್ರಮಗಳು ರೂಪಗೊಳ್ಳಬೇಕು.
ಪ್ರದೀಪ್‌ ಬಂಗೇರ ಚಾತ್ರಬೆಟ್ಟು, ಸಾಮಾಜಿಕ ಚಿಂತಕರು.

ಸಮುದ್ರ ಜೀವಿಗಳಿಗೆ ಮಾರಣಾಂತಿಕವಾಗಿರುವ ಈ ಕಪ್ಪು ದ್ರವದ ಹುಟ್ಟಿಗೆ ಕಾರಣವಾಗಿರುವುದು ಪೆಟ್ರೋಲಿಯಂ ಉತ್ಪನ್ನಗಳ ತೈಲ ತ್ಯಾಜ್ಯಗಳು. ಸಮುದ್ರದಲ್ಲಿ ಸಂಚಾರ ಮಾಡುವ ಹಡಗು, ಬೋಟ್, ದೋಣಿ, ಸಬ್‌ಮೆರಿನ್ ಮುಂತಾದವುಗಳ ತೈಲ ತ್ಯಾಜ್ಯಗಳು. ತೈಲಸಾಗಾಟ ಹಡುಗುಗಳಿಂದ ಹೊರಸೂಸುವ ತೈಲೋತ್ಪನ್ನಗಳು, ಸಮುದ್ರ, ನದಿ ತೀರ ದಂಡೆಯಲ್ಲಿ ಇರುವ ಕೈಗಾರಿಕಾ ಘಟಕಗಳಿಂದ ಸಮುದ್ರ ಸೇರುವ ತ್ಯಾಜ್ಯ, ಸಂಸ್ಕರಣಾ ಘಟಕಗಳಿಂದ ಹೊರಬರುವ ಲವಣಯುಕ್ತ ತ್ಯಾಜ್ಯ, ಒಳಚರಂಡಿಯ ಮಲಿನಯುಕ್ತ, ನಿರುಪಯುಕ್ತ ತ್ಯಾಜ್ಯ ಸೇರಿ ಸಮುದ್ರದಲ್ಲಿ ಈ ರೀತಿಯ ಡಾಮರ್‌ನಂತಹ ಗಟ್ಟಿ ದ್ರವಗಳ ಹಾನಿಕಾರಕ ತ್ಯಾಜ್ಯ ಹುಟ್ಟಿಕೊಳ್ಳುತ್ತದೆ.

ವಿವಿಧ ರೀತಿಯ ವಿಷಯುಕ್ತ, ಹಾನಿಕಾರಕ ಜಿಗುಟು ಅಂಶಗಳಿಂದ ಒಟ್ಟಾಗುವ ಈ ದ್ರವ ರೂಪದ ತ್ಯಾಜ್ಯ ಸಮುದ್ರ ಜೀವಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಸಮುದ್ರ ಜೀವಿಗಳ ಮೈಗೆ ಅಂಟಿಕೊಳ್ಳುವ ಈ ತ್ಯಾಜ್ಯದ ಜಿಗುಟು ಅವುಗಳ ಬೆಳವಣಿಗೆಯನ್ನು ಕುಂಠಿತಗೊಳಿಸುವುದಲ್ಲದೆ, ಸಾವಿನ ದವಡೆಗೂ ದೂಡುತ್ತವೆ. ಮೀನು, ಇತರ ಜಲಚರಗಳ ಸಂತಾನೋತ್ಪತಿಗೂ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿವೆ. ಹವಳದ ದಂಡೆಗಳು, ಸಾಕಣಿಕೆಯ ಮೀನುಗಳು, ಕಡಲಾಮೆಗಳು ಸೇರಿದಂತೆ ಜಲಚರಗಳಿಗೆ ಇದು ವಿನಾಶಕಾರಿಯಾಗಿದೆ. ಸಮುದ್ರದ ಜೈವಿಕ ಆಹಾರ ಸರಪಳಿಯನ್ನೇ ಬುಡಮೇಲು ಮಾಡುವಷ್ಟು ಈ ತ್ಯಾಜ್ಯದ ಚಕ್ರವ್ಯೂಹ ವಿಸ್ತಾರವಾಗಿದೆ.

ಪ್ರತಿ ಮಳೆಗಾಲದ ಪೂರ್ವದಲ್ಲಿ ಉಂಟಾಗುವ ಜಲ ಮಾಲಿನ್ಯದಿಂದಾಗಿ ಲಕ್ಷಾಂತರ ಸಂಖ್ಯೆಯ ಜೀವಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದರೂ ಪರಿಸರ ಸಂರಕ್ಷಣೆ ಕುರಿತು ಗಂಭೀರ ಚಿಂತನೆ ನಡೆಸದೆ ಇರುವುದು ಖೇದಕರ.
ಕಿಶೋರಕುಮಾರ ಬೈಂದೂರು

ಪ್ರವಾಸಿಗರು, ಆಹ್ಲಾದ ವಾತಾವರಣಕ್ಕಾಗಿ ತೀರ ಪ್ರದೇಶಕ್ಕೆ ಬರುವವರ ಉತ್ಸಾಹವನ್ನು ಕುಂಠಿತಗೊಳಿಸುವಂತೆ ಅಸಹ್ಯವಾಗಿ ಎಲ್ಲೆಂದರಲ್ಲಿ ಬಿದ್ದುಕೊಂಡಿರುವ ಈ ತ್ಯಾಜ್ಯ ಮಕ್ಕಳು, ಸೂಕ್ಷ್ಮ ಚರ್ಮ ಹೊಂದಿರುವವರಿಗೆ ತುರಿಕೆ, ಅಲರ್ಜಿ ಅನುಭವ ಉಂಟು ಮಾಡುತ್ತವೆ. ಸುಲಭದಲ್ಲಿ ಕರಗದೆ ಉಳಿಯುವ ಈ ಗಟ್ಟಿ ತ್ಯಾಜ್ಯ ಕೊನೆಗೆ ಸಮುದ್ರದ ತಳ ಭಾಗದಲ್ಲಿ ಶಾಶ್ವತವಾಗಿ ಉಳಿದು ಬಿಡುತ್ತವೆ. ಜಲಚರಗಳ ಜೀವಕ್ಕೆ ಸಂಚಕಾರ ತರುವ ಈ ತ್ಯಾಜ್ಯ ನಿವಾರಣೆಯ ಬಗ್ಗೆ ಗಂಭೀರ ಚಿಂತನೆ ನಡೆಯದೆ ಇದ್ದರೆ ಶೀಘ್ರದಲ್ಲಿ ಪ್ರಕೃತಿಯ ಒಟ್ಟಾರೆ ಜೈವಿಕ ಸರಪಳಿ ಅಸ್ತವ್ಯಸ್ತವಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಕಡಲಾಮೆಗಳಿಗೆ ಮಾರಕ

ಅಪರೂಪದ ನಾಶದ ಅಂಚಿನಲ್ಲಿರುವ ಕಡಲಾಮೆಗಳ ಸಂತಾನೋತ್ಪತ್ತಿಗೆ ದ್ರವ ರೂಪದ ತೈಲ ತ್ಯಾಜ್ಯ ಮಾರಕವಾಗುತ್ತಿದೆ. ಅವುಗಳ ಬೆಳವಣಿಗೆಗೂ ತೊಡಕು ಉಂಟಾಗಬಹುದು ಎನ್ನುವ ಆತಂಕ ಎದುರಾಗಿದೆ. ಕಳೆದ ಕೆಲವು ವರ್ಷಗಳಿಂದ ಕೋಡಿ ಮರವಂತೆ ಹೊನ್ನಾವರ ಸೇರಿದಂತೆ ಕರಾವಳಿಯ ಅನೇಕ ಕಡೆಗಳಲ್ಲಿ ಅನೇಕ ಉತ್ಸಾಹಿ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಅರಣ್ಯ ಇಲಾಖೆ ಸಾಮಾಜಿಕ ಕಾರ್ಯಕರ್ತರು ಸೇರಿ ನೂರಾರು ಜನರು ಸಮುದ್ರದ ತೀರದ ದಂಡೆಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿದ್ದಾರೆ. ಕಡಲಾಮೆಗಳನ್ನು ಉಳಿಸಲು ರಾತ್ರಿ ಹಗಲೆನ್ನದೆ ನಿಸ್ವಾರ್ಥವಾಗಿ ಶ್ರಮ ಪಡುತ್ತಿದ್ದಾರೆ.

ಸಮುದ್ರದ ನೀರನ್ನು ಕಂದು ಬಣ್ಣವನ್ನಾಗಿಸಿರುವ ಜಲತ್ಯಾಜ್ಯ
ಸಮುದ್ರದ ನೀರನ್ನು ಕಂದು ಬಣ್ಣವನ್ನಾಗಿಸಿರುವ ಜಲತ್ಯಾಜ್ಯ
ನೀರಿನ ಮೇಲೆ ಹೆಪ್ಪು ಗಟ್ಟಿದಂತೆ ತೇಲುತ್ತಿರುವ ತೈಲೋತ್ಪನ್ನಗಳ ವಿಷಯುಕ್ತ ತ್ಯಾಜ್ಯ
ನೀರಿನ ಮೇಲೆ ಹೆಪ್ಪು ಗಟ್ಟಿದಂತೆ ತೇಲುತ್ತಿರುವ ತೈಲೋತ್ಪನ್ನಗಳ ವಿಷಯುಕ್ತ ತ್ಯಾಜ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT