ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ ಮಠಕ್ಕೆ ಮುಸ್ಲಿಂರಿಂದ ಜಾಗ ವಿಚಾರ: ರೈಗೆ ರಕ್ಷಿತ್ ಶೆಟ್ಟಿ ಪರೋಕ್ಷ ಕೌಂಟರ್

Last Updated 11 ಮಾರ್ಚ್ 2023, 11:14 IST
ಅಕ್ಷರ ಗಾತ್ರ

ಬೆಂಗಳೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಮಿಥುನ್ ರೈ ಇತ್ತೀಚೆಗೆ ಮೂಡುಬಿದಿರೆ ಪುತ್ತಿಗೆ ಮಸೀದಿಯೊಂದರ ಸಮಾರಂಭದಲ್ಲಿ `ಉಡುಪಿ ಕೃಷ್ಣ ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜರು' ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಕುರಿತು ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ.

ದೇವಾಲಯಗಳ ನಗರಿ ಉಡುಪಿಗೆ ಸಾವಿರಕ್ಕೂ ಹೆಚ್ಚು ವರ್ಷದ ಬರೆದಿಟ್ಟಿರುವ ಇತಿಹಾಸ ಇದೆ. ನಿಮಗೆ ಈ ಬಗ್ಗೆ ಗೊತ್ತಿರದಿದ್ದರೇ ಏಕೆ ಸಾರ್ವಜನಿಕ ಸಮಾರಂಭಗಳಲ್ಲಿ ನಿಮ್ಮ ಅಜ್ಞಾನ ಪ್ರದರ್ಶಿಸುತ್ತೀರಿ? ಎಂದು ಪರೋಕ್ಷವಾಗಿ ಮಿಥುನ್ ರೈ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಬಕೆಟ್ ಹಿಡಿಯಬೇಡಿ ಎಂದು ಪ್ರದೀಪ್ ಶೆಟ್ಟಿ ಅವರು ರಕ್ಷಿತ್ ಶೆಟ್ಟಿ ಅವರಿಗೆ ಹೇಳಿದ್ದಕ್ಕೆ, ‘ಈ ವಿಚಾರದಲ್ಲಿ ಬಕೆಟ್ ಅಲ್ಲ, ಟ್ಯಾಂಕರ್ ಹಿಡಿಯುತ್ತೇನೆ. ಉಡುಪಿ ನನ್ನ ಜನ್ಮಸ್ಥಳ. ಮುಸ್ಲಿಂ ರಾಜ ಯಾವ ಜಾಗವನ್ನು ಮಠಕ್ಕೆ ಕೊಟ್ಟರೊ ಗೊತ್ತಿಲ್ಲ. ಆದರೆ, ಖಂಡಿತವಾಗಿಯೂ ರಥ ಬೀದಿಯ ಜಾಗ ಕೊಟ್ಟಿಲ್ಲ. ಅನಂತೇಶ್ವರ ಮಂದಿರ ಕೃಷ್ಣ ಮಠ ಹಾಗೂ ಚಂದ್ರಮೌಳೇಶ್ವರ ಮಂದಿರಕ್ಕಿಂತ ಹಳೆಯದು’ ಎಂದಿದ್ದಾರೆ.

ಉಡುಪಿ ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜರು: ರೈ ವಿವಾದ

ಪುತ್ತಿಗೆ ನೂರಾನಿ ನವೀಕೃತ ಮಸೀದಿಯಲ್ಲಿ ಈಚೆಗೆ ‘ನಮ್ಮೂರ ಮಸೀದಿ ನೋಡ ಬನ್ನಿ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ಮಾತನಾಡಿದ ಮಿಥುನ್ ರೈ, ‘ಬಪ್ಪನಾಡು ದೇವಿ ಒಲಿದದ್ದು ಬಪ್ಪ ಬ್ಯಾರಿಗೆ, ಕವತಾರಿನಲ್ಲಿನ ಕೊರಗಜ್ಜನ ಕಟ್ಟೆಗೆ ಅರ್ಚಕರು ಮುಸ್ಲಿಂ ಸಮುದಾಯದವರು. ಉಡುಪಿ ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜರು. ಅತ್ತೂರು ಚರ್ಚ್‌, ಸುಬ್ರಹ್ಮಣ್ಯ ದೇವಸ್ಥಾನ, ಉಳ್ಳಾಲ ದರ್ಗಾದಲ್ಲಿ ಸರ್ವಧರ್ಮದವರು ಪ್ರಾರ್ಥನೆ ಸಲ್ಲಿಸುತ್ತಾರೆ’ ಎಂದಿದ್ದರು. ಅವರ ಹೇಳಿಕೆಯ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ.

ಪೇಜಾವರ ಶ್ರೀಗಳು 2017ರಲ್ಲಿ `ಉಡುಪಿ ಕೃಷ್ಣ ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜರು' ಎಂದು ಪತ್ರಿಕೆಗೆ ನೀಡಿದ್ದ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಮಿಥುನ್ ರೈ ಹೇಳಿಕೆಯನ್ನು ಕೆಲವರು ಸಮರ್ಥಿಸಿಕೊಂಡಿದ್ದಾರೆ.

ಹೇಳಿಕೆಯನ್ನು ತಿರುಚಲಾಗಿದೆ

ಪುತ್ತಿಗೆ ಮಸೀದಿಯಲ್ಲಿ ಸೌಹಾರ್ದದ ಬಗ್ಗೆ ಮಾತನಾಡುವಾಗ `ಉಡುಪಿ ಕೃಷ್ಣ ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜರು' ಎಂದು ಪೇಜಾವರ ಶ್ರೀಗಳು 2017ರಲ್ಲಿ ಮಾಧ್ಯಮಕ್ಕೆ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ನಾನು ಹೇಳಿದ್ದೆ. ಬಿಜೆಪಿಯವರು ರಾಜಕೀಯ ಸಂಘರ್ಷಕ್ಕಾಗಿ ನನ್ನ ಹೇಳಿಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ನಾನು ಸಾಮರಸ್ಯದ ಬಗ್ಗೆ ಮಾತನಾಡಿದ ಇತರ ವಿಷಯಗಳನ್ನು ಬಿಟ್ಟು ವಿವಾದಾತ್ಮಕವಾಗುವ ರೀತಿಯಲ್ಲಿ ವಿಡಿಯೊ ತುಣುಕುಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಪುತ್ತಿಗೆ ಮಸೀದಿ ಕಾರ್ಯಕ್ರಮದಲ್ಲಿ ನಾನು ಮಾತನಾಡುವಾಗ ಮೂಡುಬಿದಿರೆ ಶಾಸಕರು ಕೂಡ ಇದ್ದರು. ಬಿಜೆಪಿ ನಾಯಕರಂತೆ ನಾನು ಸಾಮರಸ್ಯ ಕದಡುವ ಹೇಳಿಕೆ ನೀಡಿಲ್ಲ ಎಂದು ಮಿಥುನ್‌ ರೈ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT