ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿಗೆ 25 ವರ್ಷ ವಾರಾಹಿಗೆ 42 ವರ್ಷ!

ನನೆಗುದಿಗೆ ಬಿದ್ದಿರುವ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿ, ಉಪ ವಿಭಾಗಗಳು ಹೆಚ್ಚಾಗಲಿ
Last Updated 29 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ಜಿಲ್ಲೆಯಾಗಿ ರಚನೆಯಾಗಿ 25 ವರ್ಷಗಳು ಕಳೆದರೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾಗಿದ್ದ ಸಂದರ್ಭದಲ್ಲಿ ಆರಂಭವಾದ ವಾರಾಹಿ ಯೋಜನೆ ಕಾಮಗಾರಿ ಇನ್ನೂ ಮುಕ್ತಾಯವಾಗಿಲ್ಲ.

ರಾಜ್ಯದ ಹಳೆಯ ನೀರಾವರಿ ಯೋಜನೆಗಳಲ್ಲಿ ಒಂದಾಗಿರುವ ವಾರಾಹಿ ಯೋಜನೆ ನಾಲ್ಕು ದಶಕಗಳಿಂದ ಕುಂಟುತ್ತ, ತೆವಳುತ್ತ ಸಾಗಿದೆ. ಯೋಜನೆಗೆ ಶಂಕುಸ್ಥಾಪನೆ ನೇರವೇರಿದ ಬಳಿಕ ರಾಜ್ಯ 16 ಮುಖ್ಯಮಂತ್ರಿಗಳನ್ನು ಕಂಡರೂ ಕಾಮಗಾರಿ ಮುಗಿಸಲು ಸಾದ್ಯವಾಗಿಲ್ಲ.

ಕೃಷಿ ಭೂಮಿಗೆ ನೀರುಣಿಸುವ ಹಾಗೂ ಜನರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಆರಂಭವಾದ ಜಿಲ್ಲೆಯ ಏಕೈಕ ಬೃಹತ್ ನೀರಾವರಿ ಯೋಜನೆ 'ವಾರಾಹಿ'ಗೆ 42 ವರ್ಷಗಳು ತುಂಬಿವೆ. ಉಡುಪಿ ಜಿಲ್ಲೆಗಿಂತಲೂ ವಾರಾಹಿ ಹಳೆಯ ಯೋಜನೆ ‌ಎಂಬುದು ವಿಶೇಷ!

1989ರಲ್ಲಿ ಆಡಳಿತಾತ್ಮಕ ಅನುಮೋದನೆಯೊಂದಿಗೆ 1980ರಲ್ಲಿ ಕೇವಲ ₹ 9.43 ಕೋಟಿ ಅಂದಾಜು ವೆಚ್ಚದಲ್ಲಿ ಶುರುವಾದ ಯೋಜನೆ ಪ್ರಸ್ತುತ ₹ 650 ಕೋಟಿ ದಾಟಿ ಮುಂದೆ ಸಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕವಷ್ಟೆ ಯೋಜನೆಗೆ ವ್ಯಯವಾದ ಖರ್ಚು ವೆಚ್ಚದ ಮಾಹಿತಿ ಸಿಗಲಿದೆ.

ಆರಂಭದಲ್ಲಿ ಕುಂದಾಪುರ ಹಾಗೂ ಉಡುಪಿ ತಾಲ್ಲೂಕುಗಳಿಗೆ ಸೀಮಿತವಾಗಿದ್ದ ವಾರಾಹಿ ಯೋಜನೆ ಬಳಿಕ ಬೈಂದೂರು, ಬ್ರಹ್ಮಾವರ, ಕಾಪು ತಾಲ್ಲೂಕುಗಳಿಗೆ ವಿಸ್ತರಿಸಿದ್ದು ಯೋಜನೆಯ ಸ್ವರೂಪ ಹಾಗೂ ಗಾತ್ರವನ್ನು ಹಿಗ್ಗಿಸಿಕೊಂಡು ಸಾಗುತ್ತಲೇ ಇದೆ. ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆಯಿಂದ ಕಾಮಗಾರಿ ಅನುಮೋದನೆ ಸಿಗುವಲ್ಲಿ ಆದ ವಿಳಂಬ, ನಿಧಾನಗತಿಯ ಭೂಸ್ವಾಧೀನ ಪ್ರಕ್ರಿಯೆ, ಅನುದಾನದ ಕೊರತೆ, ಡೀಮ್ಡ್‌ ಫಾರೆಸ್ಟ್‌ ಸಮಸ್ಯೆ ಹೀಗೆ ಹಲವು ಕಾರಣಗಳಿಂದ ಕಾಮಗಾರಿ ವಿಳಂಬವಾಗಿ ಸಾಗುತ್ತಿದ್ದರೂ ಅಂತಿಮ ಹಂತಕ್ಕೆ ಬಂದು ತಲುಪಿದೆ ಎನ್ನುತ್ತಾರೆ ಅಧಿಕಾರಿಗಳು.

ವಾರಾಹಿ ಕಾಮಗಾರಿ ಪೂರ್ಣಗೊಂಡರೆ ಜಿಲ್ಲೆಯ ರೈತರ ಬದುಕು ಹಸನಾಗಲಿದೆ. ಮಳೆಯಾಶ್ರಿತ ಕೃಷಿ ಪ್ರಧಾನ ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ದೊರೆತು ಕೃಷಿ ಕ್ಷೇತ್ರ ಅಭಿವೃದ್ಧಿಯಾಗಲಿದೆ.

ಸಕ್ಕರೆ ಕಾರ್ಖಾನೆ ಪುನಶ್ಚೇತನ:

ವಾರಾಹಿ ಯೋಜನೆಗೆ ಶಂಕುಸ್ಥಾಪನೆ ನೇರವೇರಿಸಿದ್ದ ಅಂದಿನ ಮುಖ್ಯಮಂತ್ರಿ ಆರ್‌.ಗುಂಡೂರಾವ್‌ ಬ್ರಹ್ಮಾವರದ ಬೈಕಾಡಿಯಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಗೂ ಶಂಕುಸ್ಥಾಪನೆ ಮಾಡಿದ್ದರು. ವಾರಾಹಿ ನದಿಯ ನೀರಿನಿಂದ ಕಬ್ಬು ಬೆಳೆದು ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಪೂರೈಸಿ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವುದು ಸಕ್ಕರೆ ಕಾರ್ಖಾನೆ ಸ್ಥಾಪನೆಯ ಹಿಂದಿನ ಮೂಲ ಉದ್ದೇಶವಾಗಿತ್ತು.

1985ರಲ್ಲಿ 110 ಎಕರೆ ವಿಶಾಲವಾದ ಜಾಗದಲ್ಲಿ ಕರಾವಳಿಯ ಮೊದಲ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭವಾದರೂ 2003ರಲ್ಲಿ ಕಬ್ಬು ಅರೆಯುವಿಕೆ ನಿಲ್ಲಿಸಿ 2006ರಲ್ಲಿ ಕಾರ್ಖಾನೆ ಬಾಗಿಲು ಮುಚ್ಚಿತು. ವಾರಾಹಿ ನದಿ ನೀರಿನ ಅಲಭ್ಯತೆ ಕಾರ್ಖಾನೆ ಬಾಗಿಲು ಹಾಕಲು ಪ್ರಮುಖ ಕಾರಣ ಎನ್ನಲಾಗುತ್ತದೆ.

ರಜತ ಮಹೋತ್ಸವ ಸಂಭ್ರಮದ ಸಂದರ್ಭದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆಗೆ ಮತ್ತೆ ಪುನಶ್ಚೇತನ ಸಿಗಬೇಕು. ಸ್ಥಳೀಯರಿಗೆ ಉದ್ಯೋಗ ಸಿಗಬೇಕು. ಕಾರ್ಖಾನೆಯಲ್ಲಿ ಸಕ್ಕರೆಯ ಜತೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಸಾವಯವ ಬೆಲ್ಲ, ಎಥೆನಾಲ್ ಉತ್ಪಾದನೆ ಆರಂಭಿಸಿ ಮತ್ತೆ ಕಾರ್ಖಾನೆ ಗತಕಾಲದ ವೈಭವಕ್ಕೆ ಮರಳಬೇಕು ಎಂಬುದು ರೈತರ ಹಾಗೂ ಸಾರ್ವಜನಿಕರ ಆಗ್ರಹ.

ಇನ್ನೆರಡು ಉಪ ವಿಭಾಗ ರಚನೆಯಾಗಲಿ:

ಹಿಂದೆ 3 ಇದ್ದ ತಾಲ್ಲೂಕುಗಳು ಪ್ರಸ್ತುತ 7ಕ್ಕೆ ಏರಿಕೆಯಾಗಿವೆ. ಆದರೆ, ಇಂದಿಗೂ ಕುಂದಾಪುರದಲ್ಲಿ ಮಾತ್ರ ಉಪ ವಿಭಾಗಾಧಿಕಾರಿ ಕಚೇರಿ ಇದೆ. ತಾಲ್ಲೂಕುಗಳ ಸಂಖ್ಯೆಗೆ ಅನುಗುಣವಾಗಿ ಇನ್ನೆರಡು ಉಪ ವಿಭಾಗಗಳು ರಚನೆಯಾಗಬೇಕು ಎಂಬುದು ಜಿಲ್ಲೆಯ ಜನರ ಬೇಡಿಕೆ. ಕನಿಷ್ಠ ಒಂದಾದರೂ ಉಪ ವಿಭಾಗ ರಚನೆಯಾದರೆ ಸಾರ್ವಜನಿಕರಿಗೆ ತ್ವರಿತವಾಗಿ ಸರ್ಕಾರದ ಸೇವೆಗಳು ಲಭ್ಯವಾಗುತ್ತವೆ.

ಭೂವ್ಯಾಜ್ಯಗಳ ಪರಿಹಾರಕ್ಕೆ, ಕಂದಾಯ ಇಲಾಖೆ ಕಾರ್ಯಗಳಿಗೆ ದೂರದ ಊರುಗಳಿಂದ ಜನಸಾಮಾನ್ಯರು ಜಿಲ್ಲಾ ಕೇಂದ್ರಕ್ಕೆ ಬರುವುದು ತಪ್ಪಲಿದೆ. ಉಪ ವಿಭಾಗ ರಚನೆಯಾದರೆ ಅಧಿಕಾರ ವಿಕೇಂದ್ರೀಕರಣ ಸಾಧ್ಯವಾಗಲಿದ್ದು ಜನರ ಸಮಯ ಹಾಗೂ ಹಣ ಉಳಿತಾಯವಾಗಿ ಸರ್ಕಾರದ ಸೌಲಭ್ಯಗಳು ಕೈಗೆಟುಕಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT