ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರ ತೆರವುಗೊಳಿಸದಿದ್ದಲ್ಲಿ ಹೋರಾಟ

ಮೊಗವೀರ ಸಭಾ ಎಚ್ಚರಿಕೆ: ಟಗ್‌ನಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ಅಡ್ಡಿ
Last Updated 1 ಜೂನ್ 2021, 2:24 IST
ಅಕ್ಷರ ಗಾತ್ರ

ಪಡುಬಿದ್ರಿ: ಇಲ್ಲಿನ ಕಾಡಿಪಟ್ಣ ವಿಷ್ಣು ಭಜನಾ ಮಂದಿರ ಬಳಿ ಸಮುದ್ರ ತೀರದಲ್ಲಿ ಪತ್ತೆಯಾದ ಅಲಯೆನ್ಸ್ ಟಗ್ ಶೀಘ್ರದಲ್ಲಿ ತೆರವುಗೊಳಿಸದಿದ್ದಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಕಾಡಿಪಟ್ಣ ಮೊಗವೀರ ಸಭಾ ಎಚ್ಚರಿಸಿದೆ.

ಟಗ್ ತೆರವು ವಿಳಂಬವಾಗುತ್ತಿರುವ ಕಾರಣ ಸೋಮವಾರ ವಿಷ್ಣು ಭಜನಾ ಮಂದಿರದಲ್ಲಿ ಸಭಾದ ಸದಸ್ಯರು ತುರ್ತು ಸಭೆ ನಡೆಸಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ ಬಳಿಕ ಮಹಾಸಭಾದ ಅಧ್ಯಕ್ಷ ಲೀಲಾಧರ ಸಾಲ್ಯಾನ್ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಅನಾದಿ ಕಾಲದಿಂದಲೂ ಈ ಭಾಗದಲ್ಲಿ ಮಳೆಗಾಲದ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ನಡೆಸಲಾಗುತ್ತದೆ. ಈಗ ಅದೇ ಪ್ರದೇಶದಲ್ಲಿ ಟಗ್ ಇರುವ ಕಾರಣ ಮಳೆಗಾಲದ ಸಾಂಪ್ರದಾಯಿಕ ಮೀನುಗಾರಿಕೆ ಅಸಾಧ್ಯವಾಗಿದೆ.

‘ಮೇ 15ರಂದು ತೌತೆ ಚಂಡಮಾರುತದ ಆರ್ಭಟಕ್ಕೆ ಕಾಡಿಪಟ್ಣ ಬಳಿ ಸಮುದ್ರ ತೀರದಲ್ಲಿ ಟಗ್ ಮಗುಚಿದ ರೀತಿಯಲ್ಲಿ ಪತ್ತೆಯಾಗಿತ್ತು. ಅದನ್ನು ಮೇ 25ರಂದು ನೇರ ಮಾಡಲಾಗಿತ್ತು. ಆದರೆ ಆರು ದಿನಗಳು ಕಳೆದರೂ ಟಗ್‌ ಅನ್ನು ಮಂಗಳೂರಿಗೆ ಕೊಂಡೊಯ್ಯುವ ಕಾರ್ಯ ಆರಂಭವಾಗಿಲ್ಲ. ಈ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಮಹಾಸಭಾ, ಟಗ್‌ ಅನ್ನು ಇಲ್ಲೇ ದಡದಲ್ಲಿ ಉಳಿಸಿ ಬ್ರೇಕ್ ಮಾಡಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಹಾಗೇನಾದರೂ ಆದಲ್ಲಿ ಯಾವುದೇ ಕಾರಣಕ್ಕೂ ನಾವು ಅವಕಾಶ ನೀಡುವುದಿಲ್ಲ’ ಎಂದು ಎಚ್ಚರಿಸಿದ್ದಾರೆ.

ಟಗ್ ಕೊಂಡೊಯ್ಯಲು ನೇಮಿಸಿರುವ ಬಿಲಾಲ್ ಮೊಯ್ದೀನ್ ನೇತೃತ್ವದ ಮಂಗಳೂರು ಬದ್ರಿಯಾ ಕಂಪನಿಯು ಪರವಾನಗಿಗೆ ಕಾಯುತ್ತಿದೆ. ಆದರೆ ಈವರೆಗೂ ಎನ್‌ಎಂಪಿಟಿಯಿಂದ ಅನುಮತಿ ಸಿಗದೆ, ಪಡುಬಿದ್ರಿಯಲ್ಲೇ ಉಳಿದಿದೆ. ಗುಜರಾತ್ ವಿ.ಎಸ್. ಮೆರೈನ್ ಕಂಪನಿಯ ಅಲಯೆನ್ಸ್ ಟಗ್ ಮಾಲೀಕ ವಿಜಯ ಸಾಂಘ್ವಿ ಸೋಮವಾರ ಬಂದಿದ್ದು, ನಿರಾಪೇಕ್ಷಣ ಪತ್ರದ ಬೆನ್ನುಬಿದ್ದಿದ್ದಾರೆ.

ಟಗ್ ಪತ್ತೆಯಾಗಿ ಸುಸ್ತಿಗೆ ತರಲಾದ ಪಡುಬಿದ್ರಿಯ ಕಾಡಿಪಟ್ಣ ಸಮುದ್ರ ತೀರ ಪಿಕ್‌ನಿಕ್ ಪಾಯಿಂಟ್ ಆಗುತ್ತಿದೆ.
ಲಾಕ್‌ಡೌನ್ ಮಧ್ಯೆಯೂ ಬೇರೆ ಕಡೆಗಳಿಂದ ಜನರು ಬಂದು ಟಗ್‌ ಅನ್ನು ವೀಕ್ಷಿಸುತಿದ್ದಾರೆ. ಮೊಬೈಲ್ ಕ್ಯಾಮೆರಾದಲ್ಲಿ ಫೋಟೊ ಕ್ಲಿಕ್ಕಿಸಿಕೊಂಡು ಹೋಗುತಿದ್ದಾರೆ. ಇದು ಸ್ಥಳೀಯರಿಗೆ ಇನ್ನಷ್ಟು ತೊಂದರೆಯಾಗುತ್ತಿದೆ. ಲಾಕ್‌ಡೌನ್ ಉಲ್ಲಂಘಿಸಿ ಜನರು ಬರುತ್ತಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT