ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯ ವಸ್ತು ಪೂರೈಕೆಯಲ್ಲಿ ಏರುಪೇರು

ಹುಬ್ಬಳ್ಳಿಯಿಂದ ಕಾರವಾರ ತಲುಪಲು ಸುತ್ತಿಬಳಸಿ ಸಾಗಬೇಕಾದ ಅನಿವಾರ್ಯತೆ
Last Updated 9 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಕಾರವಾರ: ರಾಜ್ಯದಲ್ಲಿ ಸುರಿಯುತ್ತಿರುವ ಭೀಕರ ಮಳೆಯಿಂದ ಸಮಸ್ಯೆಗಳ ಮಹಾಪೂರವೇ ಹರಿದುಬರುತ್ತಿದೆ.ಕಾರವಾರದ ಬಹುತೇಕ ವ್ಯವಹಾರಗಳಿಗೆ ಹುಬ್ಬಳ್ಳಿಯಿಂದಲೇ ಸಾಮಗ್ರಿ ಬರಬೇಕು. ಆದರೆ, ಪ್ರಮುಖ ರಸ್ತೆಗಳಲ್ಲಿ ಸಂಪರ್ಕ ಕಡಿತವಾಗಿರುವ ಕಾರಣ ಒಂದೊಂದೇ ವಸ್ತುಗಳಅಭಾವ ಕಾಣಲಾರಂಭಿಸಿದೆ.

ದಿನಸಿ ಮಾರುಕಟ್ಟೆಗೆ ಒಂದು ರೀತಿಯ ಸಮಸ್ಯೆಯಾದರೆ, ಆಟೊಮೊಬೈಲ್‌ ಕ್ಷೇತ್ರದ ಬಿಡಿಭಾಗಗಳ ಪೂರೈಕೆಗೆ ಮತ್ತೊಂದು ರೀತಿಯ ತೊಂದರೆಯಾಗಿದೆ. ದಿನಸಿ ಮಾರುಕಟ್ಟೆಯ ಸಗಟು ವ್ಯಾಪಾರಿಗಳಿಗೆ ಸಾಮಗ್ರಿ ತಂದುಕೊಡುವ ಲಾರಿಗಳಲ್ಲಿ ಕೆಲವು ಯಲ್ಲಾಪುರ ಭಾಗದಿಂದ ವಾಪಸ್ ಹುಬ್ಬಳ್ಳಿಗೆ ಹೋಗಿವೆ. ಮತ್ತೆ ಕೆಲವು ಯಲ್ಲಾಪುರ– ಶಿರಸಿ– ದೇವಿಮನೆ ಘಟ್ಟದ ಮೂಲಕ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಬಂದು ಕರಾವಳಿಗೆ ತಲುಪುತ್ತಿವೆ.

ಹುಬ್ಬಳ್ಳಿಯಿಂದ ಕಾರವಾರಕ್ಕೆ ಯಲ್ಲಾಪುರ ಮೂಲಕ ಅರಬೈಲ್ ಘಟ್ಟ ಇಳಿದು ಬಂದರೆ 169 ಕಿ.ಮೀ. ದೂರವಿದೆ. ಆದರೆ, ಹುಬ್ಬಳ್ಳಿಯಿಂದ ಶಿರಸಿ ಮೂಲಕ ದೇವಿಮನೆ ಘಟ್ಟದಲ್ಲಿ ಸಾಗಿ ಬಂದರೆ 223 ಕಿ.ಮೀ ದೂರವಾಗುತ್ತದೆ. ಈಗ ಸರಕು ಸಾಗಣೆ ವಾಹನಗಳೂ ಸೇರಿದಂತೆ ವಾಹನ ಚಾಲಕರು ಅನಿವಾರ್ಯವಾಗಿ 54 ಕಿ.ಮೀಹೆಚ್ಚುವರಿ ಪ್ರಯಾಣ ಮಾಡಬೇಕಾಗುತ್ತಿದೆ. ಹಾಗಾಗಿ ಹಲವು ವಾಹನಗಳ ಚಾಲಕರು ಕಾರವಾರಕ್ಕೆ ಬರಲು ಒಪ್ಪುತ್ತಿಲ್ಲ ಎಂಬುದು ವ್ಯಾಪಾರಿಗಳ ಅಳಲಾಗಿದೆ.

‘ಕಾರವಾರದ ನಮ್ಮ ಅಂಗಡಿಗೆವಾಹನಗಳ ಬಿಡಿಭಾಗದ ಪಾರ್ಸೆಲ್ ಒಂದನ್ನು ಹುಬ್ಬಳ್ಳಿಯಿಂದ ಆ.6ರಂದೇಕೊರಿಯರ್ ಮಾಡಲಾಗಿದೆ. ಆದರೆ, ಅದು ಇನ್ನೂ ತಲುಪಿಲ್ಲ. ಎಲ್ಲಿದೆ, ಏನಾಯಿತು ಎಂಬ ಮಾಹಿತಿಯೂ ಇಲ್ಲ’ ಎನ್ನುತ್ತಾರೆ ಬೈತಖೋಲ್‌ನ ಮಲ್ಲಿಕಾರ್ಜುನ ಆಟೊ ಎಲೆಕ್ಟ್ರಿಕಲ್ಸ್‌ನ ಮಾಲೀಕ ರಾಜೇಶ ನಾಯ್ಕ.

‘ಎರಡು ದಿನಗಳ ಹಿಂದೆ ಕತಗಾಲ ಬಳಿ ಚಂಡಿಕಾ ಹೊಳೆ ಉಕ್ಕಿ ಹರಿದಾಗ ಹಾಗೂ ದೇವಿಮನೆ ಘಟ್ಟದಲ್ಲಿ ಮಣ್ಣು ಕುಸಿದಾಗ ಕೆಲವು ವಾಹನಗಳು ಮತ್ತೂ ಸುತ್ತಿ ಬಳಸಿ ಕರಾವಳಿಗೆ ಬಂದಿವೆ. ಶಿರಸಿಯಿಂದ ಸಿದ್ದಾಪುರಕ್ಕೆ ಹೋಗಿ ತಾಳಗುಪ್ಪ– ಹೊನ್ನಾವರದ ಮೂಲಕ ರಾಷ್ಟ್ರೀಯ ಹೆದ್ದಾರಿ 66ನ್ನು ಸಂಪರ್ಕಿಸಿದ್ದವು. ಈ ರೀತಿಯ ಸಮಸ್ಯೆ ಎದುರಿಸುತ್ತಿರುವುದು ಇದೇ ಮೊದಲು’ ಎಂದು ಅವರು ನೆನಪಿಸಿಕೊಂಡರು.

ಕಾರವಾರ, ಅಂಕೋಲಾ ಭಾಗಕ್ಕೆ ಧಾರವಾಡದಿಂದ ಕೆಎಂಎಫ್ ನಂದಿನಿ ಹಾಲಿನ ಪೂರೈಕೆಯಾಗುತ್ತಿಲ್ಲ. ಸದ್ಯಕ್ಕೆ ದೂರದ ಬೆಂಗಳೂರಿನಿಂದ ಸಣ್ಣ ವಾಹನಗಳಲ್ಲಿ ಬರುತ್ತಿದೆ.

‘ನಮ್ಮ ಮಳಿಗೆಯಲ್ಲಿ ದಿನವೂ ಸುಮಾರು 350ರಿಂದ 400 ಲೀಟರ್ ಹಾಲು ಮಾರಾಟವಾಗುತ್ತದೆ. ಆದರೆ, ಮಳೆಯಿಂದ ಅರಬೈಲ್ ಘಟ್ಟದ ಮೂಲಕ ವಾಹನ ಸಂಚಾರ ಸ್ಥಗಿತಗೊಂಡ ಬಳಿಕ ಬೇಡಿಕೆಗೆ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಟೆಟ್ರಾ ಪ್ಯಾಕ್, ಮೊಸರು, ನಂದಿನ ಪೇಡಾ, ತುಪ್ಪ ಖಾಲಿಯಾಗಿ ಎರಡು ದಿನಗಳಾದವು. ಒಂದು ಸಿಕ್ಕಿದರೆ ಮತ್ತೊಂದು ಸಿಗುತ್ತಿಲ್ಲ. ಗ್ರಾಹಕರನ್ನು ಸಮಾಧಾನ ಪಡಿಸುವುದೇ ಸವಾಲಾಗಿದೆ’ ಎಂದು ಗ್ರೀನ್‌ಸ್ಟ್ರೀಟ್‌ನ ನಂದಿನ ಹಾಲಿನ ಮಳಿಗೆಯ ಎಸ್.ಕೆ.ನಾಯಕ್ ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT