ಶನಿವಾರ, ಸೆಪ್ಟೆಂಬರ್ 26, 2020
26 °C
ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದ ಕಾರಣದಿಂದ ಕಳೆಗಟ್ಟದ ಹಬ್ಬದ ವಾತಾವರಣ

ಉತ್ತರ ಕನ್ನಡ: ವಿಘ್ನ ನಿವಾರಕನಿಗೆ ಸರಳ ವಿದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯ ಮನೆಗಳಲ್ಲಿ ಶನಿವಾರ ಮತ್ತು ಭಾನುವಾರ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಸಂಪ್ರದಾಯದಂತೆ ಪ್ರತಿಷ್ಠಾಪಿಸಿದ್ದ ವಿಗ್ರಹಗಳನ್ನು ಪೂಜಿಸಿ ಭಾನುವಾರ ವಿಸರ್ಜನೆ ಮಾಡಿದರು.

ಕೊರೊನಾ ನಿಯಂತ್ರಣದ ನಿಯಮಗಳು ಜಾರಿಯಲ್ಲಿರುವ ಕಾರಣ ಬಾರಿ ಸಾರ್ವಜನಿಕ ಗಣೇಶೋತ್ಸವಗಳು ಅತ್ಯಂತ ಸರಳವಾಗಿ ನೆರವೇರಿದವು. ಭಜನೆ, ಸಂಗೀತೋತ್ಸವಗಳು, ಮೂರ್ತಿಗಳ ಮೆರವಣಿಗೆಗೆ ಅವಕಾಶ ಇಲ್ಲದ ಕಾರಣ ಹಬ್ಬದ ಸದ್ದುಗದ್ದಲ ಇರಲಿಲ್ಲ. ಹಬ್ಬದೂಟ, ಮೋದಕ, ಚಕ್ಕುಲಿ, ಪಂಚಕಜ್ಜಾಯ ಮುಂತಾದ ಭಕ್ಷ್ಯಗಳಿಗೇ ಹಬ್ಬ ಸೀಮಿತವಾಯಿತು.

ನಗರದಲ್ಲಿ ಆ.21ರಂದು ಸಂಜೆ ಮತ್ತು ಆ.22ರಂದು ಬೆಳಿಗ್ಗೆ ಗಣಪತಿ ವಿಗ್ರಹಗಳನ್ನು ಸಂಪ್ರದಾಯದಂತೆ ತೆಗೆದುಕೊಂಡು ಬಂದು ಮನೆಗಳಲ್ಲಿ ಪ್ರತಿಷ್ಠಾಪಿಸಿದರು. ಈ ಬಾರಿ ಸಣ್ಣ ವಿಗ್ರಹಗಳಿಗೆ ಆದ್ಯತೆ ನೀಡಿದ್ದು ಕಂಡುಬಂತು. ಹಿಂದಿನಿಂದಲೂ ನಡೆದುಕೊಂಡು ಬಂದಂತೆ ಮೆರವಣಿಗೆಗಳಲ್ಲಿ ಗಣಪನನ್ನು ಕರೆದುಕೊಂಡು ಬರಲು ಅವಕಾಶ ಇರಲಿಲ್ಲ. ಹಾಗಾಗಿ ಮನೆಯ ಹಾಗೂ ಉತ್ಸವ ಸಮಿತಿಗಳ ಕೆಲವೇ ಮಂದಿ ವಿಗ್ರಹಗಳನ್ನು ಹಿಡಿದುಕೊಂಡು ನಡೆದು ಹೋಗುತ್ತಿದ್ದರು.

ಕಾರವಾರದ ಮಾರುತಿ ಮಂದಿರ, ಕಾಜುಬಾಗ, ಕೋಡಿಬಾಗ, ಆಟೊ ನಿಲ್ದಾಣ ಸೇರಿದಂತೆ ಹಲವೆಡೆ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದವು. ನಗರದ ಗ್ರಾಮೀಣ ಮತ್ತು ನಗರ ಪೊಲೀಸ್ ಠಾಣೆಗಳಲ್ಲೂ ಪೊಲೀಸ್ ಸಿಬ್ಬಂದಿ ಸಂಭ್ರಮದಿಂದ ಗಣಪತಿಯನ್ನು ಪೂಜಿಸಿದರು. ಈ ಸಂದರ್ಭದಲ್ಲಿ ‍ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಡಿ.ವೈ.ಎಸ್‌.ಪಿ ಅರವಿಂದ ಕಲಗುಜ್ಜಿ, ಸಿ.ಪಿ.ಐ ಸಂತೋಷ ಕುಮಾರ್, ಪಿ.ಎಸ್.ಐ ಸಂತೋಷ್ ಹಾಗೂ ಇತರ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ವಿಗ್ರಹಗಳಿಗೆ ಪೂಜೆಯ ಸಂದರ್ಭದಲ್ಲಿ ಚರ್ಮವಾದ್ಯ ಗುಮಟೆಪಾಂಗ್, ತಾಳ ನುಡಿಸಲಾಯಿತು. ಜೊತೆಗೇ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಪುರೋಹಿತರು ಭಾನುವಾರ ಪೂಜೆ ನೆರವೇರಿಸಿ ಪ್ರಸಾದ ವಿತರಿಸಿದ ಬಳಿಕ ವಿಗ್ರಹವನ್ನು ಸಮುದ್ರದಲ್ಲಿ ವಿಸರ್ಜನೆ ಮಾಡಲಾಯಿತು. ಈ ವೇಳೆ, ‘ಗಣಪತಿ ಬಪ್ಪಾ ಮೋರೆಯಾ’, ‘ಗಣಪತಿ ಮಹಾರಾಜ್‌ ಕೀ ಜೈ’ ಘೋಷಣೆಗಳು ಮೊಳಗಿದವು.

ರಸ್ತೆ, ಮಾರುಕಟ್ಟೆ ಖಾಲಿ: ವಿನಾಯಕ ಚತುರ್ಥಿಯ ದಿನ ಚಂದ್ರನನ್ನು ನೋಡಬಾರದು ಎಂಬ ನಿಯಮವನ್ನು ಕಾರವಾರದಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಆ.22ರಂದು ಸಂಜೆಯ ವೇಳೆಗೆ ಬಹುಪಾಲು ನಾಗರಿಕರು ಮನೆ ಸೇರಿಕೊಂಡಿದ್ದರು. ರಸ್ತೆಗಳು, ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳು ಖಾಲಿ ಖಾಲಿಯಾಗಿದ್ದವು. ಚಂದ್ರಾಸ್ತವಾದ ಬಳಿಕವೇ (ರಾತ್ರಿ 9.41) ಮನೆಗಳಿಂದ ಹೊರ ಬಂದು ಸಂಪ್ರದಾಯ ಪಾಲನೆ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು