ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಮಲ್ಲಾಪುರ ಗ್ರಾ.ಪಂ.ಸದಸ್ಯರ ರಾಜೀನಾಮೆ

ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಉತ್ತರಾಖಂಡದಿಂದ ಬಂದ ತಂತ್ರಜ್ಞರನ್ನು ಕ್ವಾರಂಟೈನ್ ಮಾಡಲು ಆಗ್ರಹ
Last Updated 3 ಮೇ 2020, 3:10 IST
ಅಕ್ಷರ ಗಾತ್ರ

ಕಾರವಾರ: ಕೈಗಾ ಅಣುವಿದ್ಯುತ್ ಸ್ಥಾವರದ ನಿರ್ವಹಣಾ ಕಾರ್ಯಕ್ಕೆಉತ್ತರಾಖಂಡದಿಂದ ಬಂದಏಳುಮಂದಿ ತಂತ್ರಜ್ಞರನ್ನು ಕ್ವಾರಂಟೈನ್ ಮಾಡಿಲ್ಲ ಎಂದು ಆರೋಪಿಸಿ, ತಾಲ್ಲೂಕಿನ ಮಲ್ಲಾಪುರ ಗ್ರಾಮ ಪಂಚಾಯ್ತಿಯ ಎಲ್ಲ 26 ಸದಸ್ಯರು ಶನಿವಾರ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.

ಉಪ ವಿಭಾಗಾಧಿಕಾರಿಗೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮೂಲಕ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಂದ್ರಶೇಖರ ಬಾಂದೇಕರ್, ‘ಏ.30ರಂದು ಚಾಲಕರೂ ಸೇರಿ ಒಂಬತ್ತು ಮಂದಿ ಮಲ್ಲಾಪುರದ ಕೈಗಾ ವಸತಿ ಸಂಕೀರ್ಣದ ಮೊದಲಹಂತದಪ್ರವೇಶದ್ವಾರದಿಂದ ಎರಡು ಕಾರುಗಳಲ್ಲಿ ಒಳಗೆ ಪ್ರವೇಶಿಸಿದ್ದರು. ಬಳಿಕ ಎಲ್ಲರೂ ನೌಕರರ ವಸತಿ ಕೇಂದ್ರದ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿಂದ ವಸತಿ ಸಂಕೀರ್ಣದ ಮಲ್ಟಿ ಗೇಟ್‌ನಿಂದ ಸಮೀಪದ ಅತಿಥಿಗೃಹಕ್ಕೆ ಹೋಗಿದ್ದರು. ಮೇ 1ರಂದು ಏಳು ಮಂದಿ ತಂತ್ರಜ್ಞರೂ ಕೈಗಾ ವಿದ್ಯುತ್ ಸ್ಥಾವರದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು’ ಎಂದು ತಿಳಿಸಿದರು.

‘ಈ ಎಲ್ಲ ವಿಚಾರಗಳನ್ನು ತಿಳಿದ ನಾವು ಗ್ರಾಮ ಪಂಚಾಯ್ತಿಯ ಕೋವಿಡ್ 19 ಟಾಸ್ಕ್‌ಫೋರ್ಸ್ ಮೂಲಕ ಪರಿಶೀಲನೆ ನಡೆಸಿದೆವು. ಅಲ್ಲಿನ ಪ್ರವೇಶದ್ವಾರದಲ್ಲಿ ತಂತ್ರಜ್ಞರು ಒಳಗೆ ಪ್ರವೇಶಿಸಿದ ಬಗ್ಗೆ ನೊಂದಣಿ ಇರಲಿಲ್ಲ. ಆದರೆ, ಅವರು ಹೊರಹೋದ ಬಗ್ಗೆ ದಾಖಲಾಗಿದೆ. ಆದ್ದರಿಂದ ‌ಅವರನ್ನು ಕ್ವಾರಂಟೈನ್ ಮಾಡುವಂತೆ ವಿದ್ಯುತ್ ಸ್ಥಾವರದಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸಹಕರಿಸಲಿಲ್ಲ’ ಎಂದು ದೂರಿದರು.

‘ಜನರ ಹಿತ ಕಾಯ್ದುಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಾವು ಗ್ರಾಮ ಪಂಚಾಯ್ತಿಯ ವಿವಿಧ ಹುದ್ದೆಗಳಲ್ಲಿದ್ದು ಪ್ರಯೋಜನವಿಲ್ಲ.ಅಧಿಕಾರಿಗಳ ವರ್ತನೆಗೆ ಬೇಸತ್ತು ಎಲ್ಲರೂ ರಾಜೀನಾಮೆ ನೀಡಿದ್ದೇವೆ’ ಎಂದು ಹೇಳಿದರು.

‘ತಪಾಸಣೆಯಲ್ಲಿ ಶೂನ್ಯ ಅಂಕ’: ‘ರಾಜೀನಾಮೆ ಕೊಡುವುದು ಅವರ ಹಕ್ಕು. ಆದರೆ, ಅವರು ಕೊಡುತ್ತಿರುವ ಕಾರಣ ಸರಿಯಾದುದಲ್ಲ’ ಎಂದುಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಪ್ರತಿಕ್ರಿಯಿಸಿದ್ದಾರೆ.

‘ಒಂಬತ್ತುಮಂದಿಯನ್ನೂ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವಜ್ವರ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಯ ಸಮ್ಮುಖದಲ್ಲೇ ಸಂಪೂರ್ಣ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಅವರಿಗೆ ಶೂನ್ಯ ಅಂಕ (ಆರೋಗ್ಯ ತಪಾಸಣೆಯಲ್ಲಿ ನೀಡುವ ಅಂಕ) ಬಂದಿದೆ. ಹಾಗಾಗಿ ಅವರು ಬಂದಿರುವ ಉದ್ದೇಶದಂತೆ ಕರ್ತವ‌್ಯಕ್ಕೆ ಹಾಜರಾಗಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

‘ರಾಷ್ಟ್ರೀಯ ಹಿತಾಸಕ್ತಿಯ ವಿಚಾರಗಳಿಗೆ ಲಾಕ್‌ಡೌನ್‌ನಿಂದ ಖಂಡಿತ ವಿನಾಯಿತಿಯಿದೆ. ತಂತ್ರಜ್ಞರು ವಿದ್ಯುತ್ ಸ್ಥಾವರದ ನಿರ್ವಹಣೆಯ ಕಾರ್ಯಕ್ಕಾಗಿ ಬಂದಿದ್ದಾರೆ. ಆದ್ದರಿಂದ ಗ್ರಾಮ ಪಂಚಾಯ್ತಿಯವರು ರಾಜೀನಾಮೆ ನೀಡಿರುವುದು ಅನವಶ್ಯಕ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT