ಸೋಮವಾರ, ಮೇ 16, 2022
24 °C
ಆಧುನಿಕ ಶಿಕ್ಷಣದೊಂದಿಗೆ ಪಾರಂಪರಿಕ ಮೌಲ್ಯದ ಬೋಧನೆ: ರಾಘವೇಶ್ವರ ಭಾರತಿ ಸ್ವಾಮೀಜಿ

ಮುಕ್ರಿ, ಹಾಲಕ್ಕಿ ಸಮಾಜಕ್ಕೆ ಗುರುಕುಲ: ರಾಘವೇಶ್ವರ ಭಾರತಿ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಈ ವರ್ಷ ಜೂನ್‌ 1ರಿಂದ ಮುಕ್ರಿ ಮತ್ತು ಹಾಲಕ್ಕಿ ಗುರುಕುಲಗಳನ್ನು ಆರಂಭಿಸಲಾಗುತ್ತದೆ. ಮಾರ್ಚ್ 1ರಿಂದ ಪ್ರವೇಶಾತಿ ಆರಂಭವಾಗಲಿದೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.

ವಿಡಿಯೊ ಕಾನ್ಫರೆನ್ಸ್ ಮೂಲಕ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಧುನಿಕ ಶಿಕ್ಷಣ ಮತ್ತು ಭಾರತೀಯ ಪಾರಂಪರಿಕ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತದೆ. ಪರಿಶಿಷ್ಟ ವರ್ಗಕ್ಕೆ ಸೇರಿದ ಮುಕ್ರಿ ಸಮುದಾಯಕ್ಕೆ ಚಂದ್ರಗುಪ್ತ ಹೆಸರಿನ ಗುರುಕುಲ ತೆರೆಯಲಾಗುವುದು. ಬುಡಕಟ್ಟು ಜನಾಂಗವಾದ ಹಾಲಕ್ಕಿ ಸಮುದಾಯಕ್ಕೆ ಅದೇ ಹೆಸರಿನಲ್ಲಿ ಗುರುಕುಲ ಆರಂಭವಾಗಲಿದೆ. ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಎರಡೂ ಸಮುದಾಯಗಳ ಪರಂಪರೆಯನ್ನು ಉಳಿಸಿ ಬೆಳೆಸುವುದು ಇದರ ಉದ್ದೇಶವಾಗಿದೆ’ ಎಂದು ವಿವರಿಸಿದರು.

‘ಸುಮಾರು ₹ 10 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿರುವ ಗುರುಕುಲಗಳಲ್ಲಿ 2021– 22ನೇ ಶೈಕ್ಷಣಿಕ ವರ್ಷದ ಆರನೇ ತರಗತಿ ಆರಂಭಿಸಲಾಗುತ್ತದೆ. ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆಯ (ಎನ್‌.ಐ.ಒ.ಎಸ್‌) ಪಠ್ಯಕ್ರಮದ ಶಿಕ್ಷಣವನ್ನು ನೀಡಲಾಗುವುದು. ಆರನೇ ತರಗತಿಯ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿದವರೂ ಪ್ರವೇಶ ಪಡೆದುಕೊಳ್ಳಬಹುದು’ ಎಂದರು.

‘ಎರಡೂ ಸಮುದಾಯಗಳಲ್ಲಿ ಬಡವರು ಅಧಿಕವಿದ್ದಾರೆ. ಹಾಗಾಗಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನೂ ನೀಡಿ ಶಿಕ್ಷಣ ನೀಡಲಾಗುವುದು. ಪಾಲಕರ ಬಳಿ ಹಣವಿಲ್ಲ ಎಂದು ಮಕ್ಕಳಿಗೆ ಶಿಕ್ಷಣವನ್ನು ಮೊಟಕುಗೊಳಿಸುವುದಿಲ್ಲ. ವಿಶ್ವ ವಿದ್ಯಾಪೀಠದ ಮುಖ್ಯ ಗುರುಕುಲಗಳಲ್ಲೂ ಎಲ್ಲ ಸಮುದಾಯದ ಮಕ್ಕಳಿಗೆ ಪ್ರವೇಶಾವಕಾಶವಿದೆ. ಇಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ’ ಎಂದೂ ಸ್ಪಷ್ಟಪಡಿಸಿದರು.

‘ಹೊಸ ಗುರುಕುಲಗಳಿಗೆ 80ರಿಂದ 100 ಮಕ್ಕಳ ನಿರೀಕ್ಷೆಯಲ್ಲಿದ್ದೇವೆ. ಒಟ್ಟು ವಿದ್ಯಾಪೀಠಕ್ಕೆ ನಮ್ಮ ನಿರೀಕ್ಷೆಗೂ ಮೀರಿ ಸ್ಪಂದನೆಯಿದ್ದು, ಎಲ್ಲ ಜಾತಿ, ಜನಾಂಗಗಳ 300 ಮಕ್ಕಳು ಪ್ರವೇಶ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಕಡೆಗಳಲ್ಲಿ ಇದೇ ಮಾದರಿಯ ಗುರುಕುಲಗಳನ್ನು ಆರಂಭಿಸುವ ಯೋಚನೆಯಿದೆ’ ಎಂದು ತಿಳಿಸಿದರು.

‘ಮಾಮೂಲಿ ಶಾಲೆಗಳಲ್ಲಿ ಅವರ ಸಮುದಾಯದ ಪರಂಪರೆಯ ಶಿಕ್ಷಣ ಸಿಗುತ್ತಿಲ್ಲ. ಇದರಿಂದ ವಿದ್ಯಾವಂತರಾದಾಗ ತಮ್ಮ ಮೂಲವನ್ನು ಕಡೆಗಣಿಸುತ್ತಾರೆ. ಭಾರತೀಯ ಪರಂಪರೆಯ ರಕ್ಷಣೆಯ ಮಹಾಸಂಕಲ್ಪದ ಅಂಗವಾಗಿ ಈ ಪೀಠವನ್ನು ಸ್ಥಾಪಿಸಲಾಗುತ್ತಿದೆ’ ಎಂದರು.

ಇಂದಿನ ಭಾರತದಲ್ಲಿ ಶಿಕ್ಷಣವಿದೆ. ಆದರೆ, ಇಂದಿನ ಶಿಕ್ಷಣದಲ್ಲಿ ಭಾರತವಿಲ್ಲ. ಭಾರತೀಯ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿದ್ಯಾಪೀಠ ಸ್ಥಾಪನೆ ಆಗುತ್ತಿದೆ.

-ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು