ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಆತ್ಮವಿಶ್ವಾಸವೇ ಯಶಸ್ಸಿನ ಮೂಲ: ವೆಂಕಟರಮಣ ಕವಡಿಕೇರಿ

ರ್‍ಯಾಂಕ್ ಪಡೆದ ಅನುಭವ
Last Updated 4 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಶಿರಸಿ: ‘ಯುಪಿಎಸ್‌ಸಿ ಪರೀಕ್ಷೆಗೆ ಸಾಕಷ್ಟು ಸಿದ್ಧತೆ ಮಾಡಿಕೊಂಡವರೂ ಕೆಲವೊಮ್ಮೆ ಸೋಲುತ್ತಾರೆ. ಇಲ್ಲಿ ಅನಿಶ್ಚಿತತೆ ಸಾಮಾನ್ಯ. ಹೀಗಾಗಿ, ಅನುತ್ತೀರ್ಣರಾದವರು ಮರಳಿ ಉತ್ಸಾಹಿತರಾಗಿ ಪರೀಕ್ಷೆ ಸಿದ್ಧತೆ ಪ್ರಾರಂಭಿಸಿ’ ಎಂದು ಆತ್ಮವಿಶ್ವಾಸ ತುಂಬುವ ಪದಗಳಿಂದಲೇ ಮಾತಿಗಾರಂಭಿಸಿದರು ವೆಂಕಟರಮಣ ಕವಡಿಕೇರಿ.

ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 363ನೇ ರ್‍ಯಾಂಕ್ ಪಡೆದಿರುವ ಯಲ್ಲಾಪುರದ ಸುಮತಿ ಮತ್ತು ನಾಗೇಶ ಕವಡಿಕೇರಿ ದಂಪತಿ ಪುತ್ರಾಗಿರುವ ಅವರು ‘ಪ್ರಜಾವಾಣಿ’ ಜೊತೆ ತಮ್ಮ ಪರೀಕ್ಷಾ ಸಿದ್ಧತೆಯ ವಿವರಗಳನ್ನು ಹಂಚಿಕೊಂಡರು. ‘ಗೆಲುವನ್ನು ಹಲವರು ಗುರುತಿಸುತ್ತಾರೆ. ಪ್ರಶಂಸೆಗಳು ಬರುತ್ತವೆ. ಆದರೆ ಸೋಲು ಯಾವತ್ತಿಗೂ ಅನಾಥ. ನಾನು ಈ ಹಿಂದೆ ನಾಲ್ಕು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದು, ಅನುತ್ತೀರ್ಣನಾಗಿದ್ದೆ. ಆಗ ಪ್ರತಿಬಾರಿಯೂ ದುಃಖ ಉಮ್ಮಳಿಸಿ ಬರುತ್ತಿತ್ತು. ಹೀಗಾಗಿ, ಅನುತ್ತೀರ್ಣರಾದವರ ಮನಃಸ್ಥಿತಿಯನ್ನು ನಾನು ಚೆನ್ನಾಗಿ ಬಲ್ಲೆ’ ಎಂದರು.

‘ಆತ್ಮೀಯರ ಜೊತೆ ಮಾತನಾಡಿ. ಪರೀಕ್ಷೆಯ ವಿಚಾರವನ್ನೇ ನಾಲ್ಕು ದಿನ ಮರೆತುಬಿಡಿ. ಮತ್ತೆ ನಿಮ್ಮನ್ನು ನೀವು ಮಾನಸಿಕವಾಗಿ ಅಣಿಗೊಳಿಸಿಕೊಂಡು, ಪರೀಕ್ಷೆ ಸಿದ್ಧತೆ ಶುರುಮಾಡಿ. ಆತ್ಮವಿಶ್ವಾಸವಿದ್ದರೆ ಯಶಸ್ಸು ಬೆನ್ನಹಿಂದೆ ಬಂದೇ ಬರುತ್ತದೆ. ನಾನು ಮೊದಲ ಬಾರಿ ಪೂರ್ವಭಾವಿ ಪರೀಕ್ಷೆ ಮಾತ್ರ ಪಾಸಾಗಿದ್ದೆ. ನಂತರ ಮೂರು ಪ್ರಯತ್ನಗಳಲ್ಲಿ ಮುಖ್ಯ ಪರೀಕ್ಷೆಯನ್ನು ಪಾಸು ಮಾಡಿದ್ದೆ. ಆದರೆ, ಸಂದರ್ಶನವನ್ನೂ ಎದುರಿಸಿದ್ದೆ. ತೀರಾ ಸಮೀಪದಲ್ಲಿ ರ್‍ಯಾಂಕ್ ಕಳೆದುಕೊಳ್ಳುತ್ತಿದ್ದೆ. ನಾಲ್ಕು ಪ್ರಯತ್ನಗಳನ್ನು ಕನ್ನಡ ಮಾಧ್ಯಮದಲ್ಲಿ ಮಾಡಿದ್ದೆ. ಈ ಬಾರಿ ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಎದುರಿಸಿದೆ’ ಎಂದು ತಮಗಾದ ಅನುಭವ ವಿವರಿಸಿದರು.

‘ಮಧ್ಯಮವರ್ಗದ ಕುಟುಂಬದವನಾಗಿ, ಉದ್ಯೋಗಕ್ಕೆ ಪ್ರಥಮ ಆದ್ಯತೆ ನೀಡಿದೆ. ಬಿಎಂಎಸ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮುಗಿಸಿದ ನಂತರ, ಐಟಿ ಡಿಸೈನಿಂಗ್ ಎಂಜಿನಿಯರ್ ಆಗಿ ಕೆಲಸ ಮಾಡಿದೆ. ಗಳಿಸಿದ ಹಣ ಉಳಿಸಿಕೊಂಡು ಪರೀಕ್ಷೆ ಸಿದ್ಧತೆ ನಡೆಸಿದೆ. ಅದರ ನಡುವೆ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿ ಹುದ್ದೆಗೆ ಆಯ್ಕೆಯಾದೆ. ಅಲ್ಲಿ ಕೆಲಸ ಮಾಡುತ್ತಲೇ ಪರೀಕ್ಷೆಗೆ ಅಣಿಯಾದೆ. ಯಾವುದೇ ಕೋಚಿಂಗ್ ಪಡೆದಿಲ್ಲ. ಕೊನೆಯ ಹಂತದಲ್ಲಿ ಕೆಲವು ಸ್ನೇಹಿತರು ಸೇರಿ ಗುಂಪು ಅಧ್ಯಯನ ಮಾಡುತ್ತಿದ್ದೆವು’ ಎಂದು ಸಿದ್ಧತೆಯ ಮಾಹಿತಿ ನೀಡಿದರು.

‘ಎಂಜಿನಿಯರಿಂಗ್ ಕಾಲೇಜಿನ ಕನ್ನಡ ಸಂಘಕ್ಕೆ ಬರುವ ಹಿರಿಯ ಅಧಿಕಾರಿಗಳ ಮಾತು ನಾನು ಯುಪಿಎಸ್‌ಸಿ ಪರೀಕ್ಷೆ ಬರೆಯಲು ಸ್ಪೂರ್ತಿಯಾಯಿತು. ಅವರೇ ನನಗೆ ಪರೀಕ್ಷೆಗೂ ಮಾರ್ಗದರ್ಶನ ಮಾಡಿದರು’ ಎಂದು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT