ಕಿರು ಜಲಾಶಯದಿಂದ ಪಶ್ಚಿಮ ಘಟ್ಟದ ಅರಣ್ಯಕ್ಕೆ ಹಾನಿಯಿಲ್ಲ: ಸಚಿವ ಮಾಧುಸ್ವಾಮಿ

ಕಾರವಾರ: '1,400 ಕಿರು ಜಲಾಶಯಗಳನ್ನು ಪಶ್ಚಿಮ ಘಟ್ಟದ ತಳಭಾಗದಲ್ಲಿ ನಿರ್ಮಿಸಲಾಗುವುದು. ಸ್ವಲ್ಪವೂ ಅರಣ್ಯ ಭೂಮಿಯನ್ನು ಬಳಸುವುದಿಲ್ಲ. ಸೂಕ್ಷ್ಮ ಪರಿಸರಕ್ಕೆ ಧಕ್ಕೆಯಾಗುವುದಿಲ್ಲ' ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಮಾಧುಸ್ವಾಮಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಪಶ್ಚಿಮ ಘಟ್ಟಗಳ ಮೇಲಿನಿಂದ ಹರಿದು ಬರುವ ನದಿಗಳಲ್ಲಿ ಎರಡು, ಮೂರು ಮೀಟರ್ ಎತ್ತರದ ಕಿರು ಜಲಾಶಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರತಿ ಜಲಾಶಯದಿಂದ 50-60 ಎಕರೆ ಜಮೀನಿಗೆ ನೀರಾವರಿ ಮಾಡಲು ಸಾಧ್ಯವಿದೆ. ಅಗತ್ಯವಿದ್ದವರು ಬಳಕೆ ಮಾಡಿಕೊಳ್ಳಲು ಸಾಧ್ಯವಾಗಲಿದೆ' ಎಂದು ಸಮರ್ಥಿಸಿಕೊಂಡರು.
'ಪಶ್ಚಿಮ ಘಟ್ಟದಲ್ಲೇ ಕಾಮಗಾರಿ ಮಾಡಲಾಗುತ್ತದೆ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಕಾಡಿನ ನಡುವೆ ಕಾಮಗಾರಿಗೆ ಕಾನೂನು ತೊಡಕುಗಳಿವೆ. ನೀರು ಹರಿಯುವ ಪ್ರದೇಶದಲ್ಲೇ ಜಲಾಶಯಗಳನ್ನು ನಿರ್ಮಿಸಲಾಗುವುದು. ಯಾವುದೇ ಪರಿಸರ ಸೂಕ್ಷ್ಮ ಅಂಶಗಳಿಗೆ ತೊಂದರೆಯಾಗುವುದಿಲ್ಲ' ಎಂದು ಪ್ರತಿಪಾದಿಸಿದರು.
ಇದನ್ನೂ ಓದಿ–ಆಳ-ಅಗಲ | ಪಶ್ಚಿಮ ಘಟ್ಟಕ್ಕೆ ಅಣೆಕಟ್ಟೆ ಏಟು?
ಕೇಂದ್ರ ಸರ್ಕಾರದ ಸಹಾಯದೊಂದಿಗೆ 3,500 ಕೋಟಿ ರೂಪಾಯಿ ವೆಚ್ಚದಲ್ಲಿ, ಪಶ್ಚಿಮ ಘಟ್ಟವಿರುವ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಯೋಜನೆ ಜಾರಿ ಮಾಡುವ ಬಗ್ಗೆ ಸಚಿವ ಮಾಧುಸ್ವಾಮಿ ಈ ಹಿಂದೆ ಹೇಳಿದ್ದರು. ಈ ಬಗ್ಗೆ ಪರಿಸರವಾದಿಗಳು, ತಜ್ಞರು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಾಮಗಾರಿ ಎಷ್ಟು ಸಮಂಜಸ ಎಂದು ಪ್ರಶ್ನಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.